ಪವರ್ ಕಟ್: ವಧುವಿನ ಗೆಳತಿಗೆ ತಾಳಿ ಕಟ್ಟಿದ ವರ!
|
|
|
|
ಥೇಣಿ (ತಮಿಳುನಾಡು), ಶನಿವಾರ, 6 ಸೆಪ್ಟೆಂಬರ್ 2008( 12:07 IST )
|
|
|
|
|
|
|
|
ತಮಿಳುನಾಡಿನಲ್ಲೀಗ ಪವರ್ ಕಟ್ ಕಾಲ. ತೀವ್ರ ವಿದ್ಯುತ್ ಅಭಾವದಿಂದ ತತ್ತರಿಸುತ್ತಿರುವ ರಾಜ್ಯದಲ್ಲಿ ಮದುವೆಗೂ ಈ ವಿದ್ಯುತ್ ಕಡಿತದ ಬಿಸಿ ತಟ್ಟಿದೆ. ಹೇಗಂತೀರಾ? ಸಾಮೂಹಿಕ ವಿವಾಹವೊಂದರಲ್ಲಿ, ದಿಢೀರ್ ಆಗಿ ವಿದ್ಯುತ್ ನಾಪತ್ತೆಯಾದ ಪರಿಣಾಮ, ವರ ಮಹಾಶಯರು ಸಾಲಂಕೃತ ವಧುವನ್ನು ಬಿಟ್ಟು ಪಕ್ಕದಲ್ಲಿದ್ದ ಅವರ ಗೆಳತಿಯರಿಗೇ ತಾಳಿ ಕಟ್ಟಿ ಗೊಂದಲಕ್ಕೀಡಾದ ಘಟನೆಯೊಂದು ಸಂಭವಿಸಿದೆ.
ಪೆರಿಯಾಕುಳಂನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ತುಂಬಿದ ಸಭಾಂಗಣದಲ್ಲಿ ಸುಮಾರು 40 ಜೋಡಿ ವಿವಾಹ ನಡೆಯುತ್ತಿತ್ತು. ಮಾಂಗಲ್ಯಂ ತಂತು ನಾನೇನ... ಎನ್ನತೊಡಗಿದಂತೆಯೇ ಎಲ್ಲರೂ ಒಂದೇ ಮುಹೂರ್ತದಲ್ಲಿ ಮಂಗಳಸೂತ್ರ ಕಟ್ಟಬೇಕೆಂಬಷ್ಟರಲ್ಲಿ ದಿಢೀರ್ ವಿದ್ಯುತ್ ಕಡಿತವಾಗಿ ಕತ್ತಲಾಯಿತು. ಎಲ್ಲರೂ ಶುಭ ಮುಹೂರ್ತದಲ್ಲಿ ಧಾವಂತದಿಂದ ತಾಳಿ ಬಿಗಿದೇ ಬಿಟ್ಟರು. ಆದರೆ ಕನಿಷ್ಠ ಇಬ್ಬರು ವರ ಮಹಾಶಯರು ಮಂಗಳಸೂತ್ರ ಕಟ್ಟುವ 'ಗುರಿ' ತಪ್ಪಿದ್ದರು.
ವೀರಸ್ವಾಮಿ ಎಂಬ ವರ, ಮಹಾಲಕ್ಷ್ಮಿಗೆ ತಾಳಿ ಕಟ್ಟುವ ಬದಲು ಪಕ್ಕದಲ್ಲೇ ನಿಂತಿದ್ದ ಆಕೆಯ ಗೆಳತಿಯ ಕುತ್ತಿಗೆಗೇ ಮಂಗಳಸೂತ್ರ ಬಿಗಿಯಬೇಕೇ!! ಅದೇ ರೀತಿ, ಬಾಲಮುರುಗನ್ ಎಂಬಾತ ಶಿವಕಾಮಿ ಎಂಬ ವಧುವಿನ ಬದಲು, ಪಕ್ಕದಲ್ಲಿದ್ದವಳಿಗೆ ಪವಿತ್ರ ದಾರ ಬಿಗಿದಿದ್ದ.
ವಿದ್ಯುತ್ ಮತ್ತೆ ಬಂದಾಗ ಈ ಗೊಂದಲವು ಎಲ್ಲರ ಅರಿವಿಗೆ ಬಂತು. ತಕ್ಷಣವೇ ಹಿರಿಯರು ಸೇರಿ, ಪ್ರಮಾದ ಸರಿಪಡಿಸುವ ಕಾರ್ಯಕ್ಕೆ ಮುಂದಾದರು. ತಾಳಿ ಕಟ್ಟಿಸಿಕೊಂಡವರನ್ನು ಕರೆದು, ಅವರ ಮಂಗಳಸೂತ್ರವನ್ನು ತೆಗೆದು, ಪರಿಹಾರ ಪೂಜೆ ನೆರವೇರಿಸಿ ನಿಜವಾದ ವಧುವಿಗೆ ತಾಳಿ ಬಿಗಿಯುವಂತೆ ಮಾಡಿದರು.
ಬುಧವಾರ ರಾತ್ರಿ ನಡೆದ ಈ ಸಮಾರಂಭದಲ್ಲಿ ಎಲ್ಲ ವಧು-ವರರ ಕುಟುಂಬಿಕರು, ಬಂಧು, ಬಳಗ, ಮಿತ್ರರೆಲ್ಲರೂ ಸೇರಿದ್ದರಿಂದ, ಸಭಾಂಗಣದಲ್ಲಿ ಕಾಲಿಡಲೂ ಜಾಗವಿರಲಿಲ್ಲ. ಹೀಗಾಗಿ ವಿದ್ಯುತ್ ಹೋದಾಗ, ಮುಹೂರ್ತದಲ್ಲಿ ತಾಳಿ ಕಟ್ಟಲೇಬೇಕಾಗಿದ್ದರಿಂದ ಈ ಪ್ರಮಾದ ಸಂಭವಿಸಿತು ಎಂದು ದೇವಸ್ಥಾನದ ಅಧಿಕಾರಿಗಳು ಹೇಳಿದ್ದಾರೆ.
|
|
|
|