ತನ್ನ ಪುತ್ರ ಚಂದ್ರ ಮೋಹನ್ ಅವರ ಎರಡನೇ ವಿಹಾವು ನಾಚಿಕೆಗೇಡಿನ ಕೃತ್ಯ ಎಂದಿರುವ ಹರ್ಯಾಣ ಮಾಜಿ ಮುಖ್ಯಮಂತ್ರಿ ಭಜನ್‌ಲಾಲ್, ಅವರನ್ನು ತನ್ನ ಕುಟುಂಬದಿಂದ 'ಹೊರ'ಹಾಕಿದ್ದಾರೆ.
ಹರ್ಯಾಣ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ತನ್ನ ಪುತ್ರನ ಎರಡನೇ ವಿವಾಹ ತಪ್ಪು ಮತ್ತು ತನ್ನ ಕುಟುಂಬಕ್ಕೆ ಎಸಗಿದ 'ಘೋರ ಅನ್ಯಾಯ' ಎಂದು ಹೇಳಿದ್ದಾರೆ.
"ಆತನ ಕೃತ್ಯ ಕುಟುಂಬಕ್ಕೆ ಮತ್ತು ಸಮಾಜಕ್ಕೆ ನಾಚಿಕೆಗೇಡು. ಆತನೊಂದಿಗೆ ತನ್ನ ಕುಟುಂಬ ಸಂಬಂಧ ಕಡಿದುಕೊಳ್ಳುತ್ತದೆ. ನಾನು ಯಾವಾಗಲೂ ಸಾರ್ವಜನಿಕವಾಗಿ ತಲೆ ಎತ್ತಿ ಜೀವಿಸಿದ್ದೇನೆ. ಆತನ ಈ ಕೃತ್ಯ ಆತನ ಪತ್ನಿ ಮತ್ತು ಮಕ್ಕಳಿಗೆ ಭಾರೀ ಅನ್ಯಾಯ ಎಸಗಿದೆ" ಎಂದು ಅವರು ಅಭಿಪ್ರಾಯಿಸಿದ್ದಾರೆ.
ಮೋಹನ್ ಅವರ ಮೊದಲ ಪತ್ನಿ ಹಾಗೂ ಮಕ್ಕಳನ್ನು ನಾವೆಲ್ಲ ಬೆಂಬಲಿಸುತ್ತೇವೆ. ಮತ್ತು ಅವರ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ 77ರ ಹರೆಯದ ಭುಜನ್‌ಲಾಲ್ ನುಡಿದರು.
ದುಬಾರಿಯಾದ ದ್ವಿತೀಯ ವಿವಾಹ ಮೋಹನ್ ಚಂದ್ರ ಅವರು ಭಾನುವಾರ ತನ್ನ ವಕೀಲ ಗೆಳತಿ ಅನುರಾಧ ಬಾಲಿ ಅವರನ್ನು ವಿವಾಹವಾಗಿದ್ದರು. ತಕ್ಷಣವೇ ಅವರನ್ನು ಹರ್ಯಾಣ ಮಂತ್ರಿಮಂಡಲದಿಂದ ಕಿತ್ತುಹಾಕಲಾಗಿತ್ತು. ರಾಜ್ಯಪಾಲ ಎ.ಆರ್.ಕಿದ್ವಾಯಿ ಅವರು ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಶಿಫಾರಸ್ಸಿನ ಮೇಲೆ ಪದಚ್ಯುತಗೊಳಿಸಿದ್ದರು. ಕಚೇರಿಗೆ ಗೈರು ಮತ್ತು ಕರ್ತವ್ಯದ ನಿರ್ಲಕ್ಷ್ಯದ ಮೇಲೆ ಅವರನ್ನು ಕಿತ್ತೆಸೆಯಲಾಗಿದೆ.
ಮೋಹನ್ ಅವರು ತನ್ನ ಪತ್ನಿ ಸೀಮಾ ಬಿಶ್ನೋಯಿ ಹಾಗೂ ಇಬ್ಬರು ಹದಿಹರೆಯದ ಮಕ್ಕಳನ್ನು ತೊರೆದಿದ್ದಾರೆ. ಅವರ ಒಬ್ಬ ಪುತ್ರ ಈ ವರ್ಷದ ಆದಿಯಲ್ಲಿ ಸಾವನ್ನಪ್ಪಿದ್ದ.
ಅವರು ಸುಮಾರು 45 ದಿನಗಳಿಂದ ಯಾವುದೇ ಸಂಪುಟ ಸಭೆಗಳಿಗೆ ಹಾಜರಾಗಿರಲಿಲ್ಲ. ಕಲ್ಕಾ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕನೆ ಬಾರಿಗೆ ಚಂದ್ರಮೋಹನ್ ಆಯ್ಕೆಯಾಗಿದ್ದಾರೆ.
|