ತಾನೇ ಹುಟ್ಟು ಹಾಕಿದ ಸಂಸ್ಥೆಗೇ ಉಂಡೆನಾಮ ತಿಕ್ಕಿ, ಬಳಿಕ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿ ಕಂಪೆನಿಗೆ ರಾಜೀನಾಮೆ ಕೊಟ್ಟು ತೆರಳಿದ ಅದ್ಭುತ ವಂಚಕ ಸತ್ಯಂ ಕಂಪ್ಯೂಟರ್ಸ್‌ನ ಸಂಸ್ಥಾಪಕ ಬಿ.ರಾಮಲಿಂಗಾ ರಾಜು. ತತ್ಪರಿಣಾಮದ ಆ ಸಂಸ್ಥೆಯ ಸುಮಾರು ಅರ್ಧಲಕ್ಷದಷ್ಟು ಸಿಬ್ಬಂದಿಗಳು ಮತ್ತು ಶೇರುದಾರರ ಗೋಳನ್ನು ಕೇಳುವವರು ಯಾರು?
ಬುಧವಾರ ರಾಮಲಿಂಗಾ ರಾಜು ಅವರು ಸೆಬಿಗೆ ಬರೆದ ಪತ್ರದಲ್ಲಿ ಬ್ಯಾಲೆನ್ಸ್ ಶೀಟಿನಲ್ಲಿ ತೋರಿಸಿದ್ದ ಕಾಲ್ಪನಿಕ ಲಾಭ ಹಾಗೂ ನಿಜವಾಗಿಯೂ ಕಂಪೆನಿ ಗಳಿಸುತ್ತಿದ್ದ ಲಾಭದ ನಡುವಿನ ಅಂತರವನ್ನು ಇಲ್ಲವಾಗಿಸಲು ಹಲವು ವರ್ಷಹೆಣಗಾಡಿ ಕೊನೆಗೆ ನೀರು ಕತ್ತಿಗೆ ಬಂದಾಗ ಕೈಚೆಲ್ಲಿರುವುದಾಗಿ ಹೇಳಿದ್ದಾರೆ. ಅಲ್ಲದೆ ಈ ನೆಲದ ಕಾನೂನನ್ನು ಎದರಿಸಿ ಅದರ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗಿರುವುದಾಗಿಯೋ ಹೇಳಿಕೊಂಡಿದ್ದಾರೆ. ಆದರೆ, ಅವರು ತನಗೂ ತನ್ನವರಿಗೂ ಆಗುವಷ್ಟು ಗಂಟು ಭದ್ರಮಾಡಿಕೊಂಡಿರಬಹುದು. ಆದರೆ ಉಳಿದವರ ಸ್ಥಿತಿ?
ಈ ಉಂಡೆನಾಮದ ಹಿನ್ನೆಲೆಯಾದರೂ ಏನು? ಸತ್ಯಂ ಈ ಅಸತ್ಯದ ಕತೆ ಸುಮಾರು 10 ವರ್ಷದ ಹಿಂದೆಯೇ ಆರಂಭವಾಗಿದೆ. ಕಂಪೆನಿಯು ವಾಸ್ತವವಾಗಿ ಪಡೆದಿರುವ ಲಾಭಕ್ಕಿಂತ ಹಲವು ಪಟ್ಟು ಹೆಚ್ಚು ತೋರಿಸಿ ತಮ್ಮ ಕಂಪೆನಿಯು ರಾಷ್ಟ್ರದ ಅತ್ಯುತ್ತಮ ಕಂಪೆನಿಗಳಲ್ಲೊಂದು ಎಂಬ ಸುಳ್ಳನ್ನು ಸಮರ್ಥಿಸಿಕೊಂಡೇ ಬಂದಿತು. ಪರಿಣಾಮ ಶೇರಿನ ಬೆಲೆ ಜ್ವರ ಏರಿದಂತೆ ಏರುತ್ತಲೇ ಹೋಯಿತು.
ಆದರೆ, ಇವರೇನೇ ಸರ್ಕಸ್ ಮಾಡಿದರು, ವಾಸ್ತವ ಮತ್ತು ಕಾಲ್ಪನಿಕ ಲಾಭಗಳ ಅಂತರದ ಕಂದಕ ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಲೇ ಹೋಗಿ, ಇದೀಗ ಅದರ ಸಂಸ್ಥಾಪಕ, ಐಟಿ ಐಕಾನ್ ಆ ಕಂದಕಕ್ಕೇ ಉರುಳಿ ಬಿದ್ದಿದ್ದಾರೆ.
ತಮ್ಮ ಈ ವಂಚನೆಯನ್ನು ಮುಚ್ಚಲು ಹರಸಾಹಸ ಮಾಡಿದ ರಾಜು ಇತರೆಡೆಯ ಬಂಡವಾಳ ತಂದು ಸುರಿದರು. ಲಾಭದ ಕುರಿತು ಸುಳ್ಳು ಲೆಕ್ಕ ಮುಂದುವರಿಸುತ್ತಲೇ ಹೋಗಿ ಸಾಲದ ಸುಳಿಯಲ್ಲಿ ಸಂಸ್ಥೆ ಸಿಲುಕಿ ನಲುಗಿತು. ಒಂದಮ್ಮೆ ತಮ್ಮ ಕಂಪೆನಿಯನ್ನು ಯಾರದರೂ ಖರೀದಿಸಲು ಮುಂದಾದರೆ ತಮ್ಮ ಬಂಡವಾಳ ಬಯಲಾಗುತ್ತದೆ ಎಂಬ ಚಿಂತೆ ರಾಜು ಅವರನ್ನು ಕಾಡಿತು. ಜತೆಗೆ ವಿಶ್ವವನ್ನೇ ಕಾಡಿದ ಆರ್ಥಿಕ ಹಿಂಜರಿತವೂ ಸತ್ಯಂಗೆ ಏಟು ನೀಡಿತು.
ಕಳೆದ ಸೆಪ್ಟೆಂಬರ್‌ಗೆ ಅಂತ್ಯಗೊಂಡ ತ್ರೈಮಾಸಿಕದ ಆದಾಯ 2,700 ಕೋಟಿ ರೂಪಾಯಿ ಹಾಗೂ ಇದರಲ್ಲಿ ನಿವ್ವಳ ಲಾಭ 694 ಕೋಟಿ ರೂಪಾಯಿ ಎಂದು ಕಂಪೆನಿ ಹೇಳಿಕೊಂಡಿತ್ತು. ಆದರೆ ವಾಸ್ತವವೆಂದರೆ, ಒಟ್ಟು ಆದಾಯ 2112 ಕೋಟಿ ಆಗಿದ್ದರೆ, ನಿವ್ವಳ ಲಾಭ ಕೇವಲ 61 ಕೋಟಿ ಆಗಿತ್ತು.
ಈ ಮೋಸವನ್ನು ಭರಿಸಿಕೊಳ್ಳಲು ರಾಜು ಕಳೆದ ಡಿಸೆಂಬರ್ 17ರಂದು ಇನ್ನೊಂದು ಸರ್ಕಸ್‌ಗೆ ಮುಂದಾದರು. ತಮ್ಮದೇ ಕುಟುಂಬದ ಮೇತಾಸ್ ಎಂಬ ಹೆಸರಿನ ಇನ್ನೆರಡು ಕಂಪೆನಿಗಳನ್ನು ದುರಬಾರಿ ಬೆಲೆಗೆ ಖರೀದಿಸಿದಂತೆ ತೋರಿಸಿ ಒಂದಿಷ್ಟು ಅಂತರವನ್ನು ಭರಿಸಿಕೊಳ್ಳಲು ಮುಂದಾದರೂ, ಇದಕ್ಕೆ ಸತ್ಯಂ ಶೇರುದಾರರು ಹಾಗೂ ಮಾಧ್ಯಮಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಪರಾರಿಗೆ ಇನ್ಯಾವುದೇ ದಾರಿ ಇಲ್ಲವೆಂದಾದಾಗ ಸುಳ್ಳನ್ನು ಮರೆಮಾಚಲು ತಾನು ಯತ್ನಿಸಿದೆ ಎಂಬ ಸತ್ಯವನ್ನು ಸತ್ಯಂ ಸಂಸ್ಥಾಪಕ ಮಂದಿಟ್ಟರು.
ಅವರು ತಾವು ಬರೆದಿರುವ ಪತ್ರದಲ್ಲಿ ಹುಲಿಯ ಬಾಯಿಯಿಂದ ಪಾರಾಗಲು ತಿಳಿಯದೆ, ಹುಲಿಯಮೇಲೆ ಸವಾರಿ ಮಾಡುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ತಾನಾಗಲಿ, ವ್ಯವಸ್ಥಾಪಕ ನಿರ್ದೇಶಕರಾಗಲೀ ಒಂದೇ ಒಂದು ಪೈಸೆ ಲಾಭ ಪಡೆಯಲಿಲ್ಲ ಎಂದೂ ಹೇಳಿಕೊಂಡಿದ್ದಾರೆ.
|