ಪ್ರಾಪ್ತವಯಸ್ಕರ ನಡುವಿನ ಪರಸ್ಪರ ಒಪ್ಪಿಗೆ ಮೇರೆಗಿನ ಸಲಿಂಗ ರತಿಯನ್ನು ಕಾನೂನು ಬದ್ಧಗೊಳಿಸಿರುವ ದೆಹಲಿ ಹೈಕೋರ್ಟ್ ಕ್ರಮವನ್ನು ಆಕ್ಷೇಪಿಸದಿರಲು ಕೇಂದ್ರ ಸರ್ಕಾರವು ನಿರ್ಧರಿಸಿದೆ ಎನ್ನಲಾಗಿದೆ.
ಗೃ,ಹಸಚಿವರು, ಕಾನೂನು ಸಚಿವರು ಹಾಗೂ ಆರೋಗ್ಯ ಸಚಿವರ ಸಭೆಯಲ್ಲಿ ಲಭಿಸಿರುವ ಒಮ್ಮತಾಭಿಪ್ರಾಯದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ತೀರ್ಪನ್ನು ವಿರೋಧಿಸದಿರಲು ನಿರ್ಧರಿಸಲಾಗಿದೆ ಎಂದು ಪತ್ರಿಕಾವರದಿಗಳು ತಿಳಿಸಿವೆ.
ದೆಹಲಿ ಹೈಕೋರ್ಟ್ ಜುಲೈ 2ರಂದು ನೀಡಿರುವ ತೀರ್ಪಿನಲ್ಲಿ ಸಲಿಂಗ ರತಿಯು ಅಪರಾಧವಲ್ಲ ಎಂದು ಹೇಳಿದೆ. ಅಲ್ಲದೆ ಇದರ ವಿರೋಧವು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದೂ ಹೇಳಿದ್ದು, ಭಾರತೀಯ ದಂಡ ಸಂಹಿತೆಯ 377ನೆ ಸೆಕ್ಷನ್ ಅನ್ನು ತೆಗೆದು ಹಾಕಿತ್ತು.
ಸಚಿವತ್ರಯರು ಸಿದ್ಧಪಡಿಸಿರುವ ಟಿಪ್ಪಣಿಯನ್ನು ಗುರುವಾರ ಕೇಂದ್ರ ಸಂಪುಟದ ಮುಂದೆ ಅದರ ಒಪ್ಪಿಗಾಗಿ ಸಲ್ಲಿಸಲಾಗವುದು ಬಳಿಕ ಅದನ್ನು ಸುಪ್ರೀಂಕೋರ್ಟಿಗೆ ಕಳುಹಿಸಲಾಗವುದು ಎಂದು ಹೇಳಲಾಗಿದೆ. ಇದರ ಆಧಾರದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಲಿದೆ.
ದೆಹಲಿ ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗೃಹ, ಕಾನೂನು ಹಾಗೂ ಆರೋಗ್ಯ ಸಚಿವರುಗಳು ಒಟ್ಟು ಸೇರಿ ಈ ವಿಚಾರವನ್ನು ಬಗೆಹರಿಸುವಂತೆ ಸೂಚಿಸಿದ್ದರು.