ಒಂದು ವರ್ಷ ಪೂರೈಸಿರುವ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಏಳೆಂಟು ಸಚಿವರು ಆಲಸಿಗಳಾಗಿದ್ದಾರೆ ಎಂಬುದಾಗಿ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ನಡೆದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಏಳೆಂಟು ಇಲಾಖೆಗಳ ಸಚಿವರ ಕೆಲಸ ಕಾರ್ಯಗಳು ತಮಗೆ ಅತೃಪ್ತಿ ತಂದಿದೆ. ಆ ಇಲಾಖೆಗಳ ಸಚಿವರು ಆಲಸಿಗಳಾಗಿದ್ದಾರೆ. ಅವರ ವರ್ತನೆ ಸರಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ಆದರೆ ಸಚಿವರ ಕಾರ್ಯ ನಿರ್ವಹಣೆ ಸರಿಯಿಲ್ಲ ಎಂದರ್ಥವಲ್ಲ. ಜವಾಬ್ದಾರಿ ನಿರ್ವಹಣೆಯಲ್ಲಿ ಕೊಂಚ ಆಲಸ್ಯ ವಹಿಸುತ್ತಿದ್ದಾರೆ ಅಷ್ಟೆ ಎಂದು ಅವರು ವಿವರಣೆ ನೀಡಿದ್ದಾರೆ.
ಇದೇ ವೇಳೆ ಪ್ರತಿಪಕ್ಷ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳು, ಪ್ರತಿಪಕ್ಷ ನಾಯಕರು ಸಚಿವರ ರೀತಿಯಲ್ಲಿ ಅಧಿಕಾರಿಗಳ ಪ್ರಗತಿ ಪರೀಶೀಲನಾ ಸಭೆ ನಡೆಸುವ ಪರಂಪರೆ ದೇಶದ ಯಾವ ರಾಜ್ಯದಲ್ಲೂ ಇಲ್ಲ. ಆದರೆ ಈ ಪರಂಪರೆಗೆ ರಾಜ್ಯದಲ್ಲಿ ಪ್ರತಿಪಕ್ಷ ನಾಯಕರು ನಾಂದಿ ಹಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ತಿಳುವಳಿಕೆ ನೀಡಲಾಗುವುದು. ಮುಂದೆ ಇಂತಹ ಸಭೆಗಳು ಪುನರಾವರ್ತನೆಯಾಗುವುದಿಲ್ಲ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
|