ವಿಕೃತಕಾಮಿ ಸರಣಿ ಹಂತಕ ಮೋಹನ್ ಕುಮಾರ್ ತೆಗೆದುಕೊಂಡ ಆಪೋಶನ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ. ಇದರೊಂದಿಗೆ ಆತನಿಂದ ಕೊಲೆಯಾದ ಯುವತಿಯರ ಸಂಖ್ಯೆ ಅನಾಮತ್ತಾಗಿ 19ಕ್ಕೇರಿದೆ.
ಕ್ರೂರ ಪಾತಕಿ ಆನಂದ ಮೊಗೇರ ಯಾನೆ ಮೋಹನ್ ಕುಮಾರ್ 2005ರಲ್ಲಿ ಮಾಡಿದ್ದ ಮತ್ತೊಂದು ಕೊಲೆಯೀಗ ಬಹಿರಂಗವಾಗಿದೆ. ಮಂಗಳೂರಿನ ಕೊಣಾಜೆ ಸಮೀಪದ ಬಾಳೆಪುಣಿಯ ಶಶಿಕಲಾ ಎಂಬವಳೇ ಮತ್ತೊಬ್ಬ ಯುವತಿ.
ನಾರಾಯಣ ಮಡಿವಾಳ ಎಂಬವರ ಪುತ್ರಿಯಾಗಿರುವ ಶಶಿಕಲಾಳನ್ನು ಆರೋಪಿ ಬೆಂಗಳೂರಿನಲ್ಲಿ ಕೊಲೆ ಮಾಡಿದ್ದ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಇವಳನ್ನು ಕೂಡ ಸಯನೈಡ್ ಬಳಸಿ ಹತ್ಯೆಗೈಯಲಾಗಿತ್ತು.
ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಶಶಿಕಲಾ ಶೃಂಗೇರಿ ಪ್ರವಾಸವಿದೆ ಎಂದು ನೆರೆ ಮನೆಯ ಹೆಂಗಸರ ಚಿನ್ನಾಭರಣಗಳನ್ನೂ ಪಡೆದುಕೊಂಡು ಹೋದವಳು ಮರಳಿ ಬಂದಿರಲಿಲ್ಲ.
PR
ಬಲಿಪಶುಗಳ ಸಂಖ್ಯೆ 23ಕ್ಕೇರಿಕೆ? ಮೂಲಗಳ ಪ್ರಕಾರ ಮೋಹನ ಮಾಡಿರುವ ಕೊಲೆಗಳು 19 ಮಾತ್ರವಲ್ಲ. ಆತ ಎಷ್ಟು ಕೊಲೆಗಳನ್ನು ಮಾಡಿದ್ದಾನೆ ಎಂಬುದು ಸ್ವತಃ ಆತನಿಗೇ ಗೊತ್ತಿಲ್ಲ. ಫೋಟೋ ನೋಡಿ, ವಿವರಣೆಗಳನ್ನು ನೀಡಿದ ನಂತರ ಆತ ನೆನಪಿಸಿಕೊಂಡು ಹೇಳುತ್ತಿದ್ದಾನೆ.
ಎರಡು ವರ್ಷಗಳ ಹಿಂದೆ ಬಾಗಲಕೋಟೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಬಿಜೈ ಕಾಪಿಕಾಡ್‌ನ ಕವಿತಾ ಎಂಬಾಕೆಯೂ ಮೋಹನಿಗೆ ಬಲಿಯಾಗಿದ್ದಳೇ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ. ಆಕೆಯ ಸಂಬಂಧಿಕರು ಪೊಲೀಸರನ್ನು ಸಂಪರ್ಕಿಸಿದ್ದು, ಮೋಹನನ್ನು ವಿಚಾರಣೆ ನಡೆಸಲಾಗುತ್ತಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯೆಯಾಗಿದ್ದ ಕವಿತಾಳಿಂದ 1.30 ಲಕ್ಷ ರೂಪಾಯಿ ಹಣ ಮತ್ತು ಚಿನ್ನಾಭರಣವನ್ನು ದೋಚಲಾಗಿತ್ತು.
ದೌಡಾಯಿಸುತ್ತಿರುವ ಹೆತ್ತವರು.. ಹಲವು ವರ್ಷಗಳಿಂದ ಮಗಳನ್ನು ಕಳೆದುಕೊಂಡು ದುಃಖ ಅನುಭವಿಸುತ್ತಿರುವ ಹೆತ್ತವರ ಸಾಲು ಇದೀಗ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯ ಮುಂದೆ ಕಾಣುತ್ತಿದೆ.
ನಮ್ಮ ಮಗಳು ಕಾಣೆಯಾಗಿ ನಾಲ್ಕು ವರ್ಷವಾಯಿತು, ಇನ್ನೂ ಪತ್ತೆಯಾಗಿಲ್ಲ ಎಂಬುದು ಕೆಲವರ ದೂರಾದರೆ, ಇನ್ನು ಕೆಲವರು ನನ್ನ ಮಗಳ ಶವ ದೂರದೂರಿನಲ್ಲಿ ಪತ್ತೆಯಾಗಿತ್ತು ಎಂದು ಫೋಟೋ ಸಮೇತ ವಿವರಣೆ ನೀಡಿ ಸಮಾಧಾನ ಬಯಸುತ್ತಿದ್ದಾರೆ.
ಹೀಗೆ ಬಂದ ಫೋಟೋ, ವಿವರಗಳನ್ನು ಗಮನಿಸಿದ ಪೊಲೀಸರು ಸಂಶಯ ಬಂದವುಗಳನ್ನು ಆರಿಸಿ ಮೋಹನನ್ನು ವಿಚಾರಿಸುತ್ತಿದ್ದಾರೆ. ಹಾಗಾಗಿ ಇನ್ನು ಕೆಲವೇ ದಿನಗಳಲ್ಲಿ ಈತ ಮಾಡಿದ ಪಾಪಕೃತ್ಯಗಳ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಬ್ಬಳು ತಪ್ಪಿಸಿಕೊಂಡಿದ್ದಳು..! ಎಲ್ಲೆಡೆಯೂ ಆತನ ಆಪೋಶನ ವರದಿಗಳೇ ಕಾಣುತ್ತಿರುವಾಗ ಆತನ ಜಾಲದಿಂದ ತಪ್ಪಿಸಿಕೊಂಡವಳ ಸುದ್ದಿಯೂ ಬಂದಿದೆ. ಆಕೆ ಮೂಡಬಿದಿರೆಯ ಪುತ್ತಿಗೆ ಮೂಲದವಳು.
ಎರಡು ವರ್ಷಗಳ ಹಿಂದೆ ಮೋಹನ ಆಕೆಯನ್ನು ಪರಿಚಯಿಸಿಕೊಂಡು ಮನೆಗೆ ಬರಲಾರಂಭಿಸಿದ್ದ. ಎರಡು-ಮೂರು ಬಾರಿ ಯುವತಿಯ ಮನೆಗೆ ಬಂದು ಆಕೆಯನ್ನು ಮರುಳು ಮಾಡಲು ಯತ್ನಿಸಿದ್ದ. ನಾಲ್ಕನೇ ಬಾರಿ ಸ್ಥಳೀಯರು ಸೇರಿಕೊಂಡು ಆತನಿಗೆ ಮುಖ-ಮೂತಿ ನೋಡದೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.
ಈ ಕಾರಣದಿಂದ ಮೂಡಬಿದಿರೆಯ ಓರ್ವ ಯುವತಿ ಆತನ ಪ್ರೇಮ ಪಾಶದಿಂದ ತಪ್ಪಿಸಿಕೊಂಡಿದ್ದಳು. ಅಂದು ಮೋಹನನ ಬ್ಯಾಗನ್ನು ಪರಿಶೀಲನೆ ನಡೆಸಿದಾಗ ಕೆಲವು ಮಾತ್ರೆಗಳು, ಮಂಗಲಸೂತ್ರ ಮುಂತಾದ ವಸ್ತುಗಳು ಪತ್ತೆಯಾಗಿದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ನನ್ನ ಮಗ ಅಂತವನಲ್ಲ, ಅವನಿಗೆ ಜಾತಕ ದೋಷವಿದೆ..! ಇದು ಹಂತಕನ ಮುಗ್ಧ ತಾಯಿಯ ಮಾತುಗಳು. ಆತ 19 ಯುವತಿಯರನ್ನು ಕೊಂದಿದ್ದಾನೆ ಎಂದು ನೀವು ಹೇಳಿದರೂ ನಾನು ನಂಬುವುದಿಲ್ಲ. ಹುಳ-ಹುಪ್ಪಟೆಯನ್ನೂ ಕೊಂದು ಹಾಕಲು ಹಿಂದೆ ಮುಂದೆ ನೋಡುವ ವ್ಯಕ್ತಿತ್ವ ಆತನದ್ದು. ಎಲ್ಲವೂ ಕಟ್ಟುಕತೆ, ಇದನ್ನು ದೇವರು ಮೆಚ್ಚುವುದಿಲ್ಲ ಎಂದು ಆನಂದನ ತಾಯಿ ತುಕ್ರು ಹೇಳುತ್ತಾರೆ.
ಆತ ಗಂಡಸಾದ ಕಾರಣ ಹುಡುಗಿಯರ ಹುಚ್ಚು ಇರಬಹುದು. ಇನ್ನು ಐದಾರು ವರ್ಷಗಳ ಕಾಲ ನನ್ನ ಮಗನಿಗೆ ಶನಿ ದೆಸೆ ಇದೆಯೆಂದು ವಿಟ್ಲದ ಜೋಯಿಸರೊಬ್ಬರು ಹೇಳಿದ್ದಾರೆ. ಅದಕ್ಕೆ ಪರಿಹಾರ ಮಾಡಬೇಕಾಗಿತ್ತು ಎಂದು ಪತ್ರಿಕೆಯೊಂದಕ್ಕೆ ಅವರು ವಿವರಣೆ ನೀಡಿದ್ದಾರೆ.
ಮೋಹನ ಕುಮಾರ್ ಆಲಿಯಾಸ್ ಆನಂದ ಮೊಗೇರನ ಮೂಲ ಹೆಸರು ಭಾಸ್ಕರ. 1963ರ ಏಪ್ರಿಲ್ 6ರಂದು ಜನಿಸಿದ್ದ ಆತನಿಗೆ ಕಂಟಕವಿರುವ ಕಾರಣ ಮೃತ್ಯುಂಜಯ ಹೋಮ ಮಾಡಿಸಬೇಕು ಎಂದು ಜ್ಯೋತಿಷ್ಯರು ಹೇಳಿದ್ದಾರೆ. ಇದರಿಂದಾಗಿಯೇ ಆತನ ಮೇಲೆ ಇಂತಹ ಅಪವಾದಗಳು ಬರುತ್ತಿವೆ ಎಂದು ತಾಯಿ ಮನಸ್ಸು ಸಮಜಾಯಿಷಿ ನೀಡುತ್ತಿದೆ.