'ತಮ್ಮ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಸಹಿಸಲು ಸಾಧ್ಯವೇ ಇಲ್ಲ' ಎಂದು ಗುಡುಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಂಡಾಯದ ಬಾವುಟ ಹಾರಿಸಿರುವ ಬಳ್ಳಾರಿಯ ರೆಡ್ಡಿ ಸಹೋದರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದು, ಸಂಪುಟದಿಂದ ಕೈಬಿಡುವ ನಿರ್ಧಾರಕ್ಕೆ ಮುಂದಾಗಿದ್ದಾರೆ.
ಭಿನ್ನಮತೀಯ ಕಹಳೆ ಊದಿರುವ ಈ ಜನ(ರೆಡ್ಡಿ ಸಹೋದರರು)ರಿಂದ ನನ್ನನ್ನು ಅಧಿಕಾರದ ಗದ್ದುಗೆಯಿಂದ ಕೆಳಗಿಸಲು ಸಾಧ್ಯವಿಲ್ಲ. ನನ್ನ ಜನಪ್ರಿಯತೆಯಿಂದಾಗಿ ಅವರು ಕಂಗಾಲಾಗಿದ್ದಾರೆ ಎಂದು ಬಳ್ಳಾರಿ ಸಚಿವ ತ್ರಯರ ಬಗ್ಗೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಕಿಡಿಕಾರಿದರು.
ಬಳ್ಳಾರಿಯಲ್ಲಿ ಬುಧವಾರವಷ್ಟೇ ಮುಖ್ಯಮಂತ್ರಿಗಳನ್ನು ದೂರವಿಟ್ಟು ನವಗ್ರಾಮ ನಿರ್ಮಾಣ ಭೂಮಿ ಪೂಜೆ ನಡೆಸಿದ ನಂತರದ ಸಾರ್ವಜನಿಕ ಸಭೆಯಲ್ಲಿ ರೆಡ್ಡಿ ಸಹೋದರರು ಮುಖ್ಯಮಂತ್ರಿಗಳ ಕುರಿತು ತೀವ್ರ ವಾಗ್ದಾಳಿ ನಡೆಸಿದ್ದರು.
ತಮ್ಮ ಬಗ್ಗೆ ಲಘುವಾಗಿ ಮಾತನಾಡಿರುವ ಕುರಿತು ಹೈಕಮಾಂಡ್ ಗಮನಕ್ಕೆ ತಂದಿರುವುದಾಗಿ ಸ್ಪಷ್ಟಪಡಿಸಿದ ಮುಖ್ಯಮಂತ್ರಿ, ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ, ಕಂದಾಯ ಸಚಿವ ಜಿ.ಕರುಣಾಕರ ರೆಡ್ಡಿ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ಹೈಕಮಾಂಡ್‌ಗೆ ತಿಳಿಸಿರುವುದಾಗಿ ಹೇಳಿದರು.
ರಾಜ್ಯದಲ್ಲಿನ ನೆರೆ ಸಂತ್ರಸ್ತರಿಗಾಗಿ ಹಮ್ಮಿಕೊಂಡಿರುವ ಪರಿಹಾರ ಕಾರ್ಯಕ್ರಮಕ್ಕೆ ರೆಡ್ಡಿ ಸಹೋದರರು ಅಡ್ಡಗಾಲು ಹಾಕುತ್ತಿರುವುದಾಗಿಯೂ ಈ ಸಂದರ್ಭದಲ್ಲಿ ಆರೋಪಿಸಿದರು. ಇಲ್ಲಿ ನೆರೆ ಪರಿಹಾರ ಕಾರ್ಯಕ್ರಮದ ಕುರಿತ ಪ್ರಶ್ನೆ ಮುಖ್ಯವಲ್ಲ. ಭಿನ್ನಮತದ ಸಂಚು ರೂಪಿಸಿದ ಮೂರು ಸಚಿವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪುನರುಚ್ಚರಿಸಿದರು.
ಅಲ್ಲದೆ ನಿನ್ನೆಯಷ್ಟೇ ಬಿಜೆಪಿ ರಾಜ್ಯ ಉಸ್ತುವಾರಿ ಹೊಂದಿದ್ದ ಅರುಣ್ ಜೇಟ್ಲಿಯವರು ಕಂದಾಯ ಸಚಿವ ಕರುಣಾಕರ ರೆಡ್ಡಿಯವರೊಂದಿಗೆ ಮಾತುಕತೆ ನಡೆಸಿ, ಸಂಧಾನಕ್ಕೆ ಯತ್ನಿಸಿದ್ದರು ಕೂಡ ಅದು ಯಾವುದೇ ಫಲಕೊಟ್ಟಿಲ್ಲವಾಗಿತ್ತು. ಮತ್ತೊಂದೆಡೆ ಪಕ್ಷದ ಹೈಕಮಾಂಡ್ ಮತ್ತು ಸುಮಾರು 70ಮಂದಿ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬೆಂಬಲ ಘೋಷಿಸಿದ್ದಾರೆ. ಪಕ್ಷದಲ್ಲಿನ ಬೆಳವಣಿಗೆಯನ್ನು ಆರ್‌ಎಸ್‌ಎಸ್ ವರಿಷ್ಠರಿಗೆ ವಿವರಿಸಿದ್ದಾರೆ. ಸಂಘ-ಪರಿವಾರ ಕೂಡ ಯಡಿಯೂರಪ್ಪನವರಿಗೆ ಸಾಥ್ ನೀಡಿದೆ.