ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಬಂಡಾಯದ ಗುಂಪಿನೊಂದಿಗೆ ಸೇರಿಕೊಂಡಿದ್ದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಚಿವ ಸಂಪುಟ ಸೇರಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದಾರೆ.
ಶಾಸಕ ರೇಣುಕಾಚಾರ್ಯ ಅವರು ಸಂಪುಟ ಸೇರಲಿದ್ದು, ಗುರುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಅಲ್ಲದೇ ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ನೀಡುತ್ತಿರುವ ಬಗ್ಗೆ ಪಕ್ಷದಲ್ಲಿಯೇ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ರೇಣುಕಾಚಾರ್ಯ ಅವರನ್ನು ಸಚಿವರನ್ನಾಗಿ ಮಾಡುತ್ತಿರುವ ಪಕ್ಷದ ನಿರ್ಧಾರದ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಆಗಲೇಬೇಕೆಂದು ರೆಡ್ಡಿ ಸಹೋದರರು ರೆಸಾರ್ಟ್ ರಾಜಕೀಯ ಮಾಡಿ ಆಡಳಿತಾರೂಢ ಬಿಜೆಪಿ ಪಕ್ಷವನ್ನೇ ಇಕ್ಕಟ್ಟಿಗೆ ಸಿಲುಕಿಸಿ, ಸಚಿವೆ ಶೋಭಾ ಕರಂದ್ಲಾಜೆ ತಲೆದಂಡ ಹಾಗೂ ಜಗದೀಶ್ ಶೆಟ್ಟರ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಒಂದು ಹಂತದ ಬಿಕ್ಕಟ್ಟಿಗೆ ತೆರೆ ಬಿದ್ದಿತ್ತು.
ತದನಂತರ ಶಾಸಕ ರೇಣುಕಾಚಾರ್ಯ ನೇತೃತದಲ್ಲಿನ ಶಾಸಕರ ಗುಂಪೊಂದು ಸಚಿವ ಸ್ಥಾನಕ್ಕಾಗಿ ಒತ್ತಾಯಿಸಿ ರೆಸಾರ್ಟ್ ರಾಜಕೀಯಕ್ಕೆ ಮುಂದಾಗಿ, ತನಗೆ ಹಾಗೂ ತನ್ನ ಬೆಂಬಲಿಗರಿಗೆ ಸಚಿವ ಸ್ಥಾನ ನೀಡಬೇಕು, ಇಲ್ಲದಿದ್ದಲ್ಲಿ ನಮ್ಮ ದಾರಿಯನ್ನು ನಾವು ನೋಡಿಕೊಳ್ಳಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು.
ಇದೀಗ ರೇಣುಕಾಚಾರ್ಯ ಅವರ ಬೇಡಿಕೆಯನ್ನು ಮನ್ನಿಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಏತನ್ಮಧ್ಯೆ ಹಿರಿಯ ಮುಖಂಡ ಬೆಳ್ಳುಬ್ಬಿ ಸೇರಿದಂತೆ ಹಲವು ಬಿಜೆಪಿ ಮುಖಂಡರ ಅಪಸ್ವರ ಮುಂದುವರಿದಿದೆ.