ಸ್ವಾತಂತ್ರ್ಯ ಸಂಗ್ರಾಮ ಕುರಿತು ಚಿತ್ರೋತ್ಸವ ಆರಂಭ
ಚಿತ್ರ ಪ್ರೇಮಿಗಳಿಗೆ ದೇಶಭಕ್ತಿ ಚಿತ್ರಗಳನ್ನು ಸವಿಯಲು ಇದೊಂದು ಸುವರ್ಣಾವಕಾಶ. 150 ವರ್ಷಗಳನ್ನು ಪೂರೈಸಿರುವ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಆರಂಭಿಸಿ ಮಹಾತ್ಮ ಗಾಂಧಿಯವರ ಐತಿಹಾಸಿಕ ಹೋರಾಟವದವರೆಗೆ ದಾಖಲಿಸುವ 'ಸ್ವಾತಂತ್ರ್ಯ ಚಿತ್ರೋತ್ಸವ' ಎನ್ನುವ ಹೆಸರಿನಡಿಯಲ್ಲಿ ಶನಿವಾರ ಆರಂಭಗೊಂಡಿದೆ.
ನಾಲ್ಕು ದಿನಗಳ ಈ ಚಿತ್ರೋತ್ಸವ 43 ಸಾಕ್ಷ್ಯ ಚಿತ್ರಗಳನ್ನು ಒಳಗೊಂಡಂತೆ 53 ಚಿತ್ರಗಳನ್ನು ಪ್ರದರ್ಶಿಸಲಿದೆ.
ನೆರೆದಿದ್ದ ಅಸಂಖ್ಯಾತ ಶಾಲಾ ಮಕ್ಕಳು, ಚಿತ್ರ ಪ್ರೇಮಿಗಳು ಹಾಗೂ ಬುದ್ಧಿ ಜೀವಿಗಳ ನಡುವೆ ಮಾಹಿತಿ ಮತ್ತು ಪ್ರಸಾರ ಸಚಿವ ಪಿ.ಆರ್.ದಾಸ್‌ಮುನ್ಷಿಯವರು ಸಿರಿ ಫೋರ್ಟ್ ಸಭಾಂಗಣದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಚಿತ್ರೋತ್ಸವ ಯುವಜನತೆಯಲ್ಲಿ ದೇಶಭಕ್ತಿ ಮೌಲ್ಯಗಳನ್ನು ಬಿತ್ತುವಲ್ಲಿ ಬಹುದೂರ ಸಾಗಲಿದೆ ಎಂದು ದಾಸ್‌ಮುನ್ಷಿ ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸೊಹ್ರಾಬ್ ಮೋದಿಯವರ ಕಪ್ಪು ಬಿಳುಪು ಐತಿಹಾಸಿಕ ಚಿತ್ರ "ಝಾನ್ಸಿ ಕಿ ರಾಣಿ" ಮತ್ತು ಭಾನುಮೂರ್ತಿ ಆಲೂರರ 21 ನಿಮಿಷದ ಸಾಕ್ಷ್ಯ ಚಿತ್ರ "1857- ದಿ ಬಿಗಿನಿಂಗ್" ಪ್ರದರ್ಶಿಸಲಾಯಿತು.
ಈ ಚಿತ್ರೋತ್ಸವದಲ್ಲಿ ಪ್ರದರ್ಶಿತಗೊಳ್ಳಲಿರುವ ಇತರ ಚಿತ್ರಗಳೆಂದರೆ, ಮನೋಜ್ ಕುಮಾರರ "ಶಹೀದ್", ಕೇತನ್ ಮೆಹ್ತಾರ "ಸರ್ದಾರ್: ದಿ ಐರನ್ ಮ್ಯಾನ್ ಆಫ್ ಇಂಡಿಯ", ಚಿತ್ತಾರ್ಥ್‌ರ "ಶಹೀದ್ ಉಧಮ್ ಸಿಂಗ್", ಜಬ್ಬಾರ್ ಪಟೇಲ್‌ರ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಪಮೇಲ ರೂಕ್ಸ್‌ರ "ಟ್ರೈನ್ ಟು ಪಾಕಿಸ್ತಾನ".
ಶ್ಯಾಮ್ ಬೆನೆಗಲ್‌ರ "ಮೇಕಿಂಗ್ ಆಫ್ ದಿ ಮಹಾತ್ಮ" ಮತ್ತು "ನೇತಾಜಿ ಸುಭಾಶ್ ಚಂದ್ರ ಬೋಸ್-ಎ ಫಾರ್‌ಗಾಟನ್ ಹೀರೊ" ಕೂಡ ರಿಚರ್ಡ್ ಅಟೆನ್‌ಬರೊರ ಆಸ್ಕರ್ ವಿಜೇತ "ಗಾಂಧಿ"ಯೊಂದಿಗೆ ಪ್ರದರ್ಶನ ಕಾಣಲಿದೆ.