ಹೌಸ್ಫುಲ್ ಚಿತ್ರದ ನಿರ್ದೇಶಕ ಹೇಮಂತ್ ಹೆಗಡೆಗೆ ಗುಳಿಕೆನ್ನೆಯ 18ರ ಹರೆಯದ ನವತರುಣಿ ಬೇಕಂತೆ. ಹಾಗಂತ ಇತ್ತೀಚೆಗೆ ಅವರು ಹೇಳಿಕೊಂಡಿದ್ದಾರೆ. ಹುಡುಗಿ 18ರ ಆಶುಪಾಸಿನಲ್ಲಿರಬೇಕಲ್ಲದೆ, ಥೇಟ್ ಪ್ರೀತಿ ಝಿಂಟಾಳಂತಿರಬೇಕು ಎಂದು ಹೆಗಡೆ ತಮ್ಮ ಬಯಕೆ ವಿವರಿಸಿದರು.
ಹೆಗಡೆಗ್ಯಾಕಪ್ಪಾ 18ರ ತರುಣಿ ಎಂದು ತಲೆಕೆಡಿಸಬೇಡಿ. ವಿಷಯ ಇಷ್ಟೆ. ಹೇಮಂತ್ ಹೆಗಡೆ ಈಗ ಅಂತೂ ಯುದ್ಧ ಗೆದ್ದ ಸಂಭ್ರಮ. ಕಾರಣ ಇಷ್ಟೇ, ಅವರ ನಿರ್ದೇಶನದ ಹೌಸ್‌ಫುಲ್ ಚಿತ್ರ ಎಲ್ಲೆಡೆ ಹೌಸ್‌ಫುಲ್ ಅಂತೆ. ಹಾಗಾಗಿ ಮುಂದಿನ ಹಾದಿಯನ್ನೂ ಹೆಗಡೆ ರಚಿಸಿದ್ದಾರೆ. ಮುಂದೆ ಅವರು ಥ್ರಿಲ್ಲರ್ ಕಥಾನಕವೊಂದರ ಚಿತ್ರ ನಿರ್ದೇಶಿಸಲಿದ್ದಾರಂತೆ. ಅದಕ್ಕೆ 18ರ ಗುಳಿಕೆನ್ನೆಯ ಚೆಲುವೆ ಬೇಕಂತೆ. ಚೆಲುವೆ ಸಿಕ್ಕ ಬಳಿಕವಷ್ಟೆ ಆ ಚಿತ್ರ ಪ್ರಾರಂಭ ಎನ್ನುತ್ತಾ ಹೆಗಡೆ ತಮ್ಮ ಹೌಸ್‌ಫುಲ್ ಸಂತಸವನ್ನು ಬಿಚ್ಚಿಟ್ಟರು.
ಅಂದ ಹಾಗೆ, ಈ ಹೌಸ್‌ಫುಲ್ 100 ಪರ್ಸೆಂಟ್ ಮನರಂಜನೆ, 0 ಪರ್ಸೆಂಟ್ ಬೋರ್ ಎನ್ನುವ ಅಡಿಬರಹ ಹೊಂದಿದ್ದ ಚಿತ್ರ ಚಾಪ್ಲಿನ್‌ನಿಂದಾಗಿ ಬಿಡುಗಡೆಗೆಗೆ ಮೊದಲೇ ಭಾರೀ ಪ್ರಚಾರ ಪಡೆದಿತ್ತು. ಆದರೆ ಬಿಡುಗಡೆಯಾದ ಮೇಲೆ ವಿಮರ್ಶೆಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದರು. ಇದರಿಂದ ಚಿತ್ರ ನೆಲಕಚ್ಚುವ ಭೀತಿ ಹೇಮಂತ್ ಹೆಗಡೆಯವರಲ್ಲಿತ್ತು. ಭಯವಿದ್ದರೂ ಚಿತ್ರ ಬಿಡುಗಡೆ ಮಾಡಿ ನಾನು ಗೆದ್ದಿದ್ದೇನೆ. ನನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇನೆ ಅನ್ನುತ್ತಾರೆ ಸ್ವತಃ ಹೇಮಂತ್.
ಬಹಳಷ್ಟು ಕಡೆ ನಿರೀಕ್ಷೆಗೂ ಮೀರಿ ಉತ್ತಮ ಓಪನಿಂಗ್ ಸಿಕ್ಕಿರುವುದು ಹೇಮಂತ್ ಹೆಗ್ಡ್ ಹಾಗೂ ಚಿತ್ರತಂಡವನ್ನು ಖುಷ್ ಗೊಳಿಸಿದೆಯಂತೆ. ಚಿತ್ರ ಬಿಡುಗಡೆಯಾಗಿ ಮೂರನೇ ವಾರ ಕ್ರಮಿಸಿದ್ದರೂ ಎಲ್ಲೂ ಕಳಪೆಯಾಗಿದೆ ಎನ್ನುವ ಮಾತು ಕೇಳಿಬಂದಿಲ್ಲವಂತೆ. ಹೇಮಂತ್‌ರಂತೆ ಒಂದು ಬ್ರೇಕ್ ನಿರೀಕ್ಷೆಯಲ್ಲಿದ್ದ ದಿಗಂತ್‌ಗೂ ಇದರಿಂದ ದಿಲ್‌ಖುಷ್ ಅಂತೆ.