ಹೌದು. ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಮ್ಯಾ ಈಗ ಪ್ರಕಾಶ್ ರೈ ಮಗಳು. ತಮಿಳಿನ ಹಿಟ್ ಚಿತ್ರ 'ಅಭಿಯುಂ ನಾನುಂ' ಕನ್ನಡಕ್ಕೆ ರಿಮೇಕ್ ಆಗ್ತಿದೆ. ಇದರಲ್ಲಿ ರಮ್ಯಾ ಪ್ರಕಾಶ್ ರೈ ಮಗಳಾಗಿ ಅಭಿನಯಿಸುತ್ತಿದ್ದಾಳೆ. ಈ ಚಿತ್ರದಲ್ಲಿ ರಮ್ಯಾ ಸ್ಕೂಲ್ ಗರ್ಲ್ ಆಗಿ ಕಾಣಿಸಿಕೊಳ್ಳಲಿದ್ದಾಳೆ. ಚಿತ್ರವನ್ನು ನಿರ್ಮಿಸಿ ನಿರ್ದೇಶಿಸುತ್ತಿರುವವರು ಸ್ವತಃ ಪ್ರಕಾಶ್ ರೈ!
ಸ್ಕೂಲ್ ಹುಡುಗಿಯಾಗಿ ಕಾಣಿಸಿಕೊಳ್ಳಬೇಕಿರೋದ್ರಿಂತ ರಮ್ಯ ಈಗ ತೆಳ್ಳಗಾಗಲು ಹೊರಟಿದ್ದಾರೆ. ಹಾಗಾಗಿ ಈಗ ರಮ್ಯ ಡಯಟಿಂಗ್ ಮಾಡುತ್ತಿದ್ದಾರಂತೆ. ಚಿತ್ರದ ಬಗ್ಗೆ ರಮ್ಯ ಅಂತೂ ಫುಲ್ ಖುಷ್. ರಮ್ಯ ಹೇಳೋದು ಹೀಗೆ. 'ಅಪ್ಪ-ಮಗಳ ಕಥೆ ಇರುವ ಚಿತ್ರದಲ್ಲಿ ನಟಿಸಬೇಕು ಎಂಬ ಆಸೆಯಿತ್ತು. ಈಗ ಅವಕಾಶ ಸಿಕ್ಕಿದೆ. ಪ್ರಕಾಶ್ ಸರ್ ಅವರು, ಅಭಿಯಂ ನಾನುಂ ಚಿತ್ರವನ್ನು ಕನ್ನಡದಲ್ಲಿ ಮಾಡುತ್ತಿದ್ದೇನೆ. ನೀನು ನನ್ನ ಮಗಳ ಪಾತ್ರದಲ್ಲಿ ನಟಿಸಬೇಕು ಎಂದು ಕೇಳಿದರು. ಸಖತ್ ಥ್ರಿಲ್ ಅಯ್ತು. ಹಿಂದೆ ಮುಂದೆ ಯೋಚನೆ ಮಾಡದೇ ಒಪ್ಪಿಕೊಂಡಿದ್ದೇನೆ. ಆದರೆ ಈ ಚಿತ್ರದಲ್ಲಿ ನಾನು ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು. ಹೀಗಾಗಿ ಸ್ಲಿಮ್ ಆಗಬೇಕಿದೆ' ಅಂತಾಳೆ ರಮ್ಯಾ.
ಅಂದಹಾಗೆ, ತಮಿಳಿನಲ್ಲಿ ಈ ಚಿತ್ರವನ್ನು ಪ್ರಕಾಶ್ ರೈ ನಿರ್ಮಿಸಿದ್ದರು. ಕನ್ನಡದಲ್ಲೂ ರೈ ಅವರೇ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಜೊತೆಗೆ ಅಪ್ಪನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲ ಚಿತ್ರ ತಮಿಳು ಮಾತ್ರವಲ್ಲ, ತೆಲುಗಿನಲ್ಲೂ ತೆರೆಕಂಡಿತ್ತು. ಚಿತ್ರ ನೂರು ದಿನಗಳ ಪ್ರದರ್ಶನ ಕಂಡಿತ್ತು.