ಗಾಂಧಿನಗರದಲ್ಲಿ ಮಂಜುನಾಥ ಎದ್ದಿದ್ದೂ ಆಗಿದೆ. ಎದ್ದು ಜೋರಾಗಿ ಓಡುತ್ತಿರುವ ಸಂಗತಿಯೂ ಎಲ್ಲರಿಗೆ ಗೊತ್ತು. ಆದರೆ ಓಡುತ್ತಿರುವ ಮಂಜುನಾಥನನ್ನು ಗಾಂಧಿನಗರದಲ್ಲಿ ನಿಂತು ನೋಡುತ್ತಿರುವ ಗುರುಪ್ರಸಾದ್ ಹಾಗೂ ಜಗ್ಗೇಶ್ ಜೋಡಿ ಖಾಸಗಿಯಾಗಿ ಮುರಿದು ಬಿದ್ದಿದ್ದೂ ಆಗಿದೆ. ಈಗ ಏನಪ್ಪಾ ಹೊಸ ಸಂಗತಿ ಎಂದರೆ ಗುರುಪ್ರಸಾದ್‌ಗೆ ತನ್ನ ಮುಂದಿನ ಚಿತ್ರಕ್ಕೆ ಇನ್ನೊಬ್ಬ ನಟ ಸಿಕ್ಕಿದ್ದಾರಂತೆ. ಜಗ್ಗೇಶ್ ಇಲ್ಲದಿದ್ದರೇನಂತೆ ಎಂದು ಗುರುಪ್ರಸಾದ್ ತಿರುಮಂತ್ರ ಹೊಡೆದರೆ, ಅತ್ತ ಜಗ್ಗೇಶ್ ನಾನೇ ಚಿತ್ರ ನಿರ್ದೇಶಿಸುತ್ತೇನೆ ಎಂದು ಹೊರಟಿದ್ದಾರೆ.
ಈಗ ಗುರುಪ್ರಸಾದ್‌ಗೆ ಸಿಕ್ಕವರು ಇನ್ಯಾರೂ ಅಲ್ಲ. ಸಾಕ್ಷಾತ್ ಜಗ್ಗೇಶರ ತಮ್ಮ ಕೋಮಲ್! ಅಣ್ಣ ಹೋದರೆ ಹೋಗಲಿ, ಅಣ್ಣನಂತಿರುವ ಇನ್ನೊಬ್ಬ ತಮ್ಮನಿದ್ದಾನಲ್ಲ ಎಂದು ಗುರುಪ್ರಸಾದ್ ತಮ್ಮ ಇನ್ನೊಂದು ಚಿತ್ರಕ್ಕೆ ಅಣಿಯಾಗುತ್ತಿದ್ದಾರಂತೆ. ಸಿನಿಮಾ ಯಾವುದು, ಯಾವಾಗ ಆಸೆಟ್ಟೇರುತ್ತದೆ ಎಂಬೆಲ್ಲಾ ವಿಷಯಗಳು ಇನ್ನೂ ಗೌಪ್ಯ. ಚಿತ್ರದ ಬಗ್ಗೆ ಎಲ್ಲಾ ವಿವರಗಳನ್ನು ನಿರ್ಮಾಪಕರು ಸದ್ಯದಲ್ಲೇ ಹೊರಹಾಕಲಿದ್ದಾರಂತೆ.
ಒಟ್ಟಾರೆ, ಇವರಿಬ್ಬರ ಹಾವು-ಮುಂಗುಸಿ ಜಗಳದಿಂದ ಚಿತ್ರರಂಗ ಒಂದು ಉತ್ತಮ ಜೋಡಿಯನ್ನು ಕಳೆದುಕೊಂಡಿದ್ದು ಸುಳ್ಳಲ್ಲ ಎಂದು ಹಲವರು ಮಾತನಾಡುವ ಹೊತ್ತಿಗೆ ಗುರುಪ್ರಸಾದ್ ಹೊಸ ದಾರಿ ಹುಡುಕಿದ್ದು ಎಷ್ಟರ ಮಟ್ಟಿಗೆ ಸಕ್ಸಸ್ಸು ಆಗುತ್ತೆ ನೋಡಬೇಕು. ಅತ್ತ ಜಗ್ಗೇಶ್ ಕೂಡಾ ಗುರುಗೆ ಠೂ ಬಿಟ್ಟು ನನಗೆ ಗಾಂಧಿನಗರದ ಹಲವು ಕೆರೆಗಳ ನೀರು ಕುಡಿದು ಗೊತ್ತು ಎನ್ನುತ್ತಾ ನಿರ್ದೇಶನಕ್ಕೆ ಹೊರಟು ಸಫಲರಾಗುತ್ತಾರೋ ಎಂಬುದಕ್ಕೆ ಕಾಯಬೇಕು. ಆದರೆ ಇತ್ತ ಜಗ್ಗೇಶ್ ತಮ್ಮ ಕೋಮಲ್ ಮಾಡಿದ ಯಾವುದೇ ಚಿತ್ರ ಮಿ.ಗರಗಸ ಹೊರತುಪಡಿಸಿ ಅಂಥ ಯಶಸ್ಸು ಕಂಡಿಲ್ಲವಾದರೂ ಹಾಕಿದ ದುಡ್ಡಿಗೆ ಕೋಮಲ್ ಎಂದೂ ಮೋಸ ಮಾಡಿಲ್ಲ ಎಂಬುದನ್ನಂತೂ ಗುರುಪ್ರಸಾದ್ ಚೆನ್ನಾಗಿ ಅರ್ಥಮಾಡಿಕೊಂಡಿರಬೇಕು. ಹೊಸ ಜೋಡಿಗಾಗಿ ಕಾಯಬೇಕು.