ಛಾಯಾ ಸಿಂಗ್‌ಗೆ ವಿವಾಹಯೋಗ!
ಬೆಂಗಳೂರು ಸುಂದರಿ, ಬಹುಭಾಷಾ ನಟಿ ಛಾಯಾ ಸಿಂಗ್ ಎರಡನೇ ಇನ್ನಿಂಗ್ಸ್‌ಗೆ ರೆಡಿಯಾಗಿದ್ದಾರೆ. ಹೌದು. ಛಾಯಾ ಸಿಂಗ್ ಮದುವೆಯಾಗುತ್ತಿದ್ದಾರೆ. ಹೈದರಾಬಾದ್‌ನಲ್ಲಿರುವ ಹಾರ್ಡ್‌ವೇರ್ ವ್ಯಾಪಾರಿಯೊಬ್ಬರ ಕೈಹಿಡಿಯಲಿದ್ದಾರೆ ಈ ಕನ್ನಡದ ತುಂಟಾಟದ ಬೆಡಗಿ.ಛಾಯಾ ಸಿಂಗ್ ತನ್ನ ಚಿತ್ರಗಳ ಆಯ್ಕೆಯಲ್ಲಿ ತುಂಬಾ ಚ್ಯೂಸಿ. ಅಭಿನಯ ಪ್ರತಿಭೆ ಹಾಗೂ ಸೌಂದರ್ಯ ಎರಡೂ ಬೆನ್ನಿಗಿದ್ದರೂ ಹೇಳಿಕೊಳ್ಳುವಂಥ ಯಶಸ್ಸು ದಕ್ಕಲಿಲ್ಲ. ಆದರೂ ತನ್ನನ್ನು ತನ್ನದೇ ಆದ ವ್ಯಕ್ತಿತ್ವದೊಂದಿಗೆ ಗುರುತಿಸಿಕೊಂಡ ಹೆಗ್ಗಳಿಕೆ ಛಾಯಾರದ್ದು. ಮೂಲತಃ ಕನ್ನಡಿಗರಲ್ಲದಿದ್ದರೂ, ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಛಾಯಾಗೆ ಕನ್ನಡ ಸ್ಪಷ್ಟ, ಸುಲಲಿತ, ಸರಾಗ.ಕನ್ನಡದ್ಲಲಿ ತುಂಟಾಟ, ಬಲಗಾಲಿಟ್ಟು ಒಳಗೆ ಬಾ, ಚಿಟ್ಟೆ, ಪ್ರೀತಿಸ್ಲೇ ಬೇಕು, ಸಖ ಸಖಿ, ಆಕಾಶಗಂಗೆ ಮತ್ತಿತರ ಚಿತ್ರಗಳಲ್ಲಿ ಕಾಣಿಸಿಕೊಂಡ ಇವರು ತಮಿಳಿನಲ್ಲಿಯೂ ಪ್ರಸಿದ್ಧಿ ಪಡೆದವರು. 2003ರಲ್ಲಿ ತಿರುಡಾ ತಿರುಡಿ ಚಿತ್ರದಲ್ಲಿ ಬಿಂದಾಸ್ ಆಗಿ ನಟಿಸಿ ತಮಿಳಿಗರ ಮನದಲ್ಲೂ ಛಾಪು ಮೂಡಿಸಿದವಳು ಛಾಯಾಸಿಂಗ್. ತಿರುಡಾ ತಿರುಡಿ ಚಿತ್ರ ಛಾಯಾಗೆ ಎಷ್ಟು ಪ್ರಸಿದ್ಧಿ ನೀಡಿತ್ತೆಂದರೆ, ಈಗಲೂ ತಮಿಳಿಗರು ಆಕೆಯನ್ನು 'ಮನ್ಮದರಸಾ..' ಎಂದೇ ಗುರುತಿಸುತ್ತಾರೆ. ಕಾರಣ, ಆಕೆ, ತಿರುಡಾ ತಿರುಡಿಯಲ್ಲಿ 'ಮನ್ಮದರಸಾ..' ಎಂಬ ಹಾಡಿನಲ್ಲಿ ಕುಣಿದಿದ್ದಳು. ಇದೇ ಹಾಡು ಕನ್ನಡಕ್ಕೂ ರಿಮೇಕ್ ಆಗಿ ರಕ್ಷಿತಾ 'ಸುಂಟರಗಾಳಿ....' ಎಂದು ಹೆಜ್ಜೆ ಹಾಕಿದ್ದೂ ಕೂಡಾ ಕನ್ನಡದಲ್ಲೂ ಪ್ರಸಿದ್ಧಿ ಪಡೆದಿತ್ತು. ಇದಲ್ಲದೆ, ತಮಿಳಿನಲ್ಲಿ ಅಮ್ಮ ಅಪ್ಪ ಚೆಲ್ಲಂ, ಅರುಳ್, ಜಯಸೂರ್ಯ, ತಿರುಪಾಚಿ, ವಲ್ಲಮಾಯ್ ತರಯೋ, ಸೊಲ್ಲಿ ಅಡಿಪ್ಪೇನ್ ಚಿತ್ರಗಳಲ್ಲಿ ನಟಿಸಿದ ಇವರು ಮಲಯಾಳಂನಲ್ಲೂ ನಟಿಸಿದ್ದಾರೆ. ಪೊಲೀಸ್, ಮುಲ್ಲವಲ್ಲಿಯುಂ ತೇನ್ವಾಯುಂಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ಕನ್ನಡಕ್ಕಿಂತಲೂ ಬಿಂದಾಸ್ ಆಗಿ ಐಟಂ ನಂಬರ್‌ಗಳಲ್ಲಿ ಹೆಜ್ಜೆ ಹಾಕಿ ಛಾಯಾ ಸುದ್ದಿಯಾದುದೇ ಹೆಚ್ಚು. ಸದ್ಯಕ್ಕೆ ಛಾಯಾ ಕೈಯಲ್ಲಿ ಯಾವುದೇ ಕನ್ನಡ ಚಿತ್ರಗಳಿಲ್ಲ. ಆಕಾಶಗಂಗೆ ಈಕೆಯ ಕೊನೆಯ ಕನ್ನಡ ಚಿತ್ರ. ಖಾಸಗಿ ಟಿವಿ ಚಾನಲ್‌ನ ಕುಣಿಯೋಣು ಬಾರಾ ಕಾರ್ಯಕ್ರಮದಲ್ಲಿ ತೀರ್ಪುಗಾರಳಾಗಿಯೂ ಕನ್ನಡದಲ್ಲಿ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು ಛಾಯಾ. ಸದ್ಯ ತಮಿಳಿನಲ್ಲಿ ಲೆಮೆನ್ ಹಾಗೂ ಅಂತಪುರತು ವೀಡು ಎಂಬ ಎರಡು ಚಿತ್ರಗಳಿವೆ. ಇದರಲ್ಲಿ ಲೆಮೆನ್ ಚಿತ್ರ ಅರ್ಧಕ್ಕೇ ನಿಂತಿದೆ. ಅಂತಪುರತು ವೀಡು ಚಿತ್ರದ ಬಗ್ಗೆ ಛಾಯಾ ಅಪಾರ ಭರವಸೆ ಹೊತ್ತಿದ್ದಾರೆ.ಅಂದಹಾಗೆ, ಛಾಯಾರ ಅಮ್ಮ, ಛಾಯಾಗೆ ಮದುವೆಯಾಗಲು ಸೂಕ್ತ ಸಮಯ ಇದು. ಹಾಗಾಗಿ ಮದುವೆ ಮಾಡುತ್ತಿದ್ದೇವೆ. ಆದರೆ ಛಾಯಾ ಮದುವೆಯ ನಂತರವೂ ಚಿತ್ರರಂಗದಲ್ಲೇ ಇರುತ್ತಾರೆ ಎಂದು ಹೇಳಿದ್ದಾರಂತೆ. ಮದುವೆ ಇರೋದಂತೂ ಸತ್ಯ. ಆದರೆ ಯಾವಾಗ, ಎಲ್ಲಿ ಎಂಬಿತ್ಯಾದಿ ಮಾಹಿತಿಗಳಿನ್ನೂ ಹೊರಬಿದ್ದಿಲ್ಲ.