ಅಣ್ಣಾವ್ರು ಪ್ರತ್ಯಕ್ಷರಾಗಿದ್ದಾರಂತೆ. ಅದೂ ಸಂತೋಷ್ ಚಿತ್ರಮಂದಿರದ ಎದುರಲ್ಲಿ! ಕೇವಲ ನಿಂತಿರುವುದಷ್ಟೇ ಅಲ್ಲ. ಎಲ್ಲರನ್ನೂ ಕೈಬೀಸಿ ಕರೆಯುತ್ತಿದ್ದಾರಂತೆ. ಅಯ್ಯೋ, ರಾಜಣ್ಣ ಯಾಕಪ್ಪಾ ಸಂತೋಷ್ ಚಿತ್ರಮಂದಿರದ ಎದುರು ನಿಲ್ಲೋದಕ್ಕೆ ಹೊರಟ್ರು ಎಂದು ಹೌಹಾರಬೇಡಿ. ವಿಷಯ ಇಷ್ಟೆ. ಪುನೀತ್ ರಾಜ್‌ಕುಮಾರ್ ಅವರ ಬಹುನಿರೀಕ್ಷಿತ ಚಿತ್ರ ರಾಜ್ ಬಿಡುಗಡೆಯ ಪ್ರಚಾರಕ್ಕೆ ನಿರ್ದೇಶಕ ಪ್ರೇಮ್ ಅನುಸರಿಸಿರುವ ಉಪಾಯ ಇದು.
ಚಿತ್ರಕ್ಕೆ ಜನರನ್ನು ಸೆಳೆಯಲು ಪ್ರೇಮ್ ಅವರು ರಾಜ್ ಕುಮಾರ್ ಅವರ 55 ಅಡಿ ಎತ್ತರದ ಮೂರ್ತಿಯನ್ನು ಸಂತೋಷ್ ಚಿತ್ರ ಮಂದಿರದ ಎದುರು ಪ್ರತಿಷ್ಠಾಪಿಸಿದ್ದಾರಂತೆ. ಪ್ರತಿಮೆಯ ರಚನೆಗೆ ಮೂರು ತಿಂಗಳು ಹಿಡಿದಿದೆಯಂತೆ. ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಿಸಿರುವ ಈ ಪ್ರತಿಮೆಯ ಬಲಗೈಗೆ ಯಂತ್ರ ಅಳವಡಿಸಲಾಗಿದ್ದು ಇದು ಸ್ವಯಂಚಾಲಿತವಾಗುವಂತೆ ಮಾಡಿದರೆ, ತಕ್ಷಣ ಅಣ್ಣಾವ್ರು ಕೈಬೀಸಿ ಕರೆಯಲು ಶುರು ಮಾಡುತ್ತಾರೆ.
ಅಂದಹಾಗೆ, ಚಿತ್ರಕ್ಕೆ ಇನ್ನೂ ಸೆನ್ಸಾರ್ ಆಗಿಲ್ಲ. ಇಂದು ನಾಳೆಯೊಳಗೆ ಚಿತ್ರದ ಮೊದಲ ಪ್ರತಿ ಹೊರಬರುವ ನಿರೀಕ್ಷೆಯಿದೆ. ಆಮೇಲಷ್ಟೆ ಸೆನ್ಸಾರ್.