ಚಿತ್ರರಂಗದಲ್ಲಿ ಹಲವು ವರ್ಷ ಕೆಲಸ ಮಾಡಿದರೂ ಸಂಗೀತ ನಿರ್ದೇಶಕ ಹಂಸಲೇಖಾ ಅವರಿಗೊಂದು ಬೇಸರವಿದೆ. ಅದೇನೂ ಅಂತಿರಾ. ನನ್ನನ್ನೂ ಯಾರೂ ಸಂಗೀತಗಾರ ಎಂದು ನೋಡಲೇ ಇಲ್ಲ ಎಂಬುದೇ ಅವರ ಅಳಲು.
ನಾನೂ ನಿಜವಾಗಲೂ ಒಬ್ಬ ಮ್ಯುಸೀಷಿಯನ್. ಸಂಗೀತ ಕಲಿತಿದ್ದೇನೆ, ಕಲಿಸುತ್ತಿದ್ದೇನೆ. ಹಾಗಾಗಿ ಸಂಗೀತ ಲೋಕದಲ್ಲಿ ನನಗೊಂದು ಗೌರವ ಇದೆ. ಆದರೆ, ಉದ್ಯಮವಾಗಲೀ, ಮಾಧ್ಯಮವಾಗಲೀ ನನ್ನನ್ನೆಂದೂ ಸಂಗೀತಗಾರ ಎಂದು ಗುರುತಿಸಲೇ ಇಲ್ಲ ಎಂದು ಬೇಸರಿಸಿಕೊಳ್ಳುತ್ತಾರೆ ಅವರು.
ಹೀಗೆಂದು ಅವರು ಹೇಳಿದ್ದು, ಅಮೃತ ಮಾತು ಮಂಥನ ಕಾರ್ಯಕ್ರಮದಲ್ಲಿ. ಇಲ್ಲಿ ಬಿಚ್ಚು ಮಾತುಗಳಿಗೆ, ಚುಚ್ಚು ಮಾತುಗಳಿಗೆ ಮುಕ್ತ ಅವಕಾಶವಿದೆ. ತಾನು ಪ್ರೇಮಲೋಕದಿಂದ ಗುರುತಿಸಿಕೊಳ್ಳುವುದಕ್ಕೆ ಮುಂಚೆಯೇ, ನೀನಾ ಭಗವಂತ... ಹಾಡು ಬರೆಯುವುದಕ್ಕೆ ಮುಂಚೆಯೇ, ಸಾಕಷ್ಟು ಜನರಿಗೆ ಪರಿಚಿತವಾಗಿದ್ದೆ ಎನ್ನುತ್ತಾರೆ ಹಂಸಲೇಖಾ. ಅದಕ್ಕೆ ಕಾರಣವಾಗಿದ್ದು ಅವರ ಪ್ರತಿಭೆ, ವಿಶ್ವಾಸ ಎನ್ನುವುದನ್ನು ನೇರವಾಗಿ ಹೇಳಲಿಲ್ಲ. ಆದೇನೇ ಇರಲಿ ರವಿಚಂದ್ರನ್ ಜೊತೆ ಪ್ರೇಮಲೋಕ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸತೊಂದು ಪ್ರೇಮದ ಬೀಜ ಬಿತ್ತಿದವರು ಹಂಸಲೇಖ ಎಂದರೆ ಅತಿಶಯೋಕ್ತಿಯಾಗಲಾರದು.