ನಾಗವಲ್ಲಿ ಕಾಟ ಸುಳ್ಳು ಸುದ್ದಿ: ಆಪ್ತರಕ್ಷಕದ ಲಕ್ಷ್ಮಿ ಗೋಪಾಲಸ್ವಾಮಿ
MOKSHA
ನಾಗವಲ್ಲಿಯ ಭೂತ ನಿಜಕ್ಕೂ ಇದೆಯಾ ಅನ್ನೋ ಸಂಶಯ ನಟ ವಿಷ್ಣುವರ್ಧನ್ ಸಾವಿನ ನಂತರ ಚಿತ್ರರಸಿಕರನ್ನು ಹೆಚ್ಚು ಕಾಡತೊಡಗಿದೆ. ಆಪ್ತಮಿತ್ರ ಚಿತ್ರ ಬಿಡುಗಡಗೆ ಮೊದಲೇ ಸೌಂದರ್ಯ ಸತ್ತರು. ಈಗ ಆಪ್ತಮಿತ್ರದ ಎರಡನೇ ಭಾಗವೆಂದೇ ಕರೆಯುವ ಆಪ್ತರಕ್ಷಕ ಚಿತ್ರ ಬಿಡುಗಡೆಗೂ ಮೊದಲೇ ವಿಷ್ಣು ಸಾವಿಗೀಡಾದ್ರು ಎಂದು ಲೆಕ್ಕಾಚಾರ ಹಾಕುವವರಿಗೆಲ್ಲ, ಹಾಗಾದ್ರೆ ನಾಗವಲ್ಲಿಯ ಪ್ರೇತಾತ್ಮವೇ ಈ ಇಬ್ಬರನ್ನೂ ಬಲಿ ತೆಗೆದುಕೊಂಡಿತಾ ಎಂದು ಪ್ರಶ್ನೆ ಹಾಕಿ ಉತ್ತರ ಸಿಗದವರಿದ್ದಾರೆ.
ಅದೇನೇ ಇರಲಿ, ಆಪ್ತರಕ್ಷಕ ಚಿತ್ರದಲ್ಲಿ ನಾಯಕಿಯರಲ್ಲಿ ಒಬ್ಬರಾದ ಲಕ್ಷ್ಮಿ ಗೋಪಾಲಸ್ವಾಮಿ ಮಾತ್ರ ಇದನ್ನು ಅಲ್ಲಗಳೆಯುತ್ತಾರೆ. 'ನಾಗವಲ್ಲಿಯ ಭೂತದ ಕಾಟವೇ ಇಂಥ ಪರಿಣಾಮ ಎಂಬುದರಲ್ಲಿ ಅರ್ಥವಿಲ್ಲ. ನನಗೆ ಆರೋಗ್ಯ ಸರಿಯಾಗಿಯೇ ಇತ್ತು. ಈ ಥರ ಪ್ರಚಾರ ಮಾಡುತ್ತಿರುವವರಾರು ಅಂತ ನನಗೆ ಗೊತ್ತಿಲ್ಲ' ಎನ್ನುತ್ತಾರೆ. 'ಮಾನಸಿಕವಾಗಿ ಹಾಗೂ ದೈಹಿಕವಾಗಿ ನಾನು ಸರಿಯಾಗಿಯೇ ಇದ್ದೆ. ಇದ್ದೇನೆ ಕೂಡಾ. ನನಗೇನೂ ಆರೋಗ್ಯದ ತೊಂದರೆ ಬರಲಿಲ್ಲ' ಎನ್ನುತ್ತಾರೆ.
ಆದರೆ ಅಂದು ಈ ಊಹಾಪೋಹಗಳಿಗೆ ಪೂರಕವೆಂಬಂತೆ ಆಪ್ತರಕ್ಷಕ ಚಿತ್ರದ ಶೂಟಿಂಗ್ ಸಂದರ್ಭ ನಾಯಕಿ ವಿಮಲಾ ರಾಮನ್‌ಗೆ ಹೊಟೇಲಿನಲ್ಲಿ ನಾಗವಲ್ಲಿಯ ನೆರಳು ಕಂಡಿತಂತೆ ಎಂಬ ಸುದ್ದಿಯೂ ಹಬ್ಬಿಕೊಂಡಿತ್ತು. ಇನ್ನೊಬ್ಬ ನಾಯಕಿ ಲಕ್ಷ್ಮಿ ಗೋಪಾಲಸ್ವಾಮಿ ಅವರಿಗೆ ಆರೋಗ್ಯ ಸರಿಯಿಲ್ಲದಂತಾಯಿತು, ವಿಷ್ಣುವರ್ಧನ್ ಅವರು ನಾಗವಲ್ಲಿಯ ಪ್ರಭಾವದಿಂದಾಗಿಯೇ ಕುದುರೆಯಿಂದ ಬಿದ್ದರು ಎಂದೆಲ್ಲ ಕಥೆಯಿತ್ತು. ಆದರೆ ತನಗೆ ಆರೋಗ್ಯ ಸರಿಯಿರಲಿಲ್ಲ ಎಂಬ ಸುದ್ದಿ ಸುಳ್ಳು ಎಂದು ಲಕ್ಷ್ಮಿ ಹೇಳಿದ್ದಾರೆ.
ಆದರೆ ಚಿತ್ರತಂಡವೆಂದ ಮೇಲೆ ನೂರಾರು ಜನ ಕೆಲಸ ಮಾಡುತ್ತಾರೆ. ಒಂದಿಬ್ಬರಿಗೆ ಇಂಥ ಅನುಭವವಾಯಿತೆಂದು ಹೇಳಿದರೆ ಅದು ಸತ್ಯವಾಗೋದಿಲ್ಲ. ಎಲ್ಲರ ಆರೋಗ್ಯವೂ ಸರಿಯಾಗಿಯೇ ಇದೆ. ಯಾರಿಗೂ ಕೆಟ್ಟ ಅನುಭವಗಳಾಗಿಲ್ಲ ಎಂದು ಇದೀಗ ಚಿತ್ರತಂಡ ಹೇಳಿಕೊಳ್ಳುತ್ತಿದೆ. ಆದರೆ, ಈ ಮೊದಲು ಚಿತ್ರತಂಡವೇ ತನಗೆ ಕೆಲವು ವಿಚಿತ್ರ ಘಟನೆಗಳ ಅನುಭವವಾಗಿದೆ ಅಂದಿತ್ತು. ಇದನ್ನು ಆಪ್ತಮಿತ್ರ ಚಿತ್ರದ ದ್ವಾರಕೀಶ್ ಕೂಡಾ ಸುಳ್ಳು ಎಂದಿದ್ದರು. ಒಟ್ಟಾರೆ ವಿಷ್ಣು ಸಾವನ್ನು ನಾಗವಲ್ಲಿ ಪ್ರಭಾವಕ್ಕೆ ಲಿಂಕ್ ಮಾಡೋದು ಬೇಡ ಎನ್ನುತ್ತಾರೆ ಹಲವರು. ಈ ಚಿತ್ರ ಫೆ.5ರಂದು ಹೊರಬರಲಿದೆ.