ಮೆಗಾ ಪ್ರಾಜೆಕ್ಟ್ ಎಂದೇ ಹೆಸರು ಪಡೆದುಕೊಂಡಿರುವ ಬಹುನಿರೀಕ್ಷೆಯ 'ಜೋಗಯ್ಯ' ಕರ್ನಾಟಕದಾದ್ಯಂತ 300 ಸಿನಿಮಾ ಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಇದು ಎಷ್ಟು ನಿಜವೋ-ಸುಳ್ಳೋ, ಹೇಳಿಕೊಂಡಿರುವುದು ಚಿತ್ರದ ನಿರ್ದೇಶಕ ಪ್ರೇಮ್.
PR
ಶಿವರಾಜ್ ಕುಮಾರ್ 100ನೇ ಚಿತ್ರ ಜೋಗಯ್ಯ ಮೈಸೂರಿನಲ್ಲಿ ಒಂದು ಹಂತದ ಚಿತ್ರೀಕರಣ ಮುಗಿಸಿದ್ದು, ಉತ್ತರ ಪ್ರದೇಶ ಮತ್ತು ಉತ್ತರಾಂಚಲ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಶೂಟಿಂಗ್ ನಡೆಸಲಿದೆ. ಬಳಿಕ ಮುಂಬೈಗೆ ಹಾರಲಿದೆ. ರಕ್ಷಿತಾ ನಿರ್ಮಾಪಕಿಯಾಗಿರುವ ಈ ಚಿತ್ರದ ಚಿತ್ರೀಕರಣವೀಗ ಬೆಂಗಳೂರಿನಲ್ಲಿ ನಡೆಯುತ್ತಿದೆ.
'ಜೋಗಿ' ಚಿತ್ರದ ಮುಂದಿನ ಭಾಗ ಎಂದೇ ಪರಿಗಣಿಸಲ್ಪಟ್ಟಿರುವ ಜೋಗಯ್ಯಕ್ಕೆ ಗುರುಕಿರಣ್ ಬದಲು ಸದ್ಯದ ಹಾಟ್ ಸಂಗೀತ ನಿರ್ದೇಶಕ ಹರಿಕೃಷ್ಣ ಅವರನ್ನು ನಿರ್ದೇಶಕ ಪ್ರೇಮ್ ಆಯ್ಕೆ ಮಾಡಿದ್ದಾರೆ. ಚಿತ್ರದ ಮುಹೂರ್ತದಂದೇ ಟೈಟಲ್ ಸಾಂಗ್ ಟ್ರೇಲರ್ ಬಿಡುಗಡೆಯಾಗಿ ಆಸಕ್ತಿ ಕೆರಳಿಸಿದ್ದರಿಂದ, ಹಾಡುಗಳು ಸೂಪರ್ ಆಗಿಯೇ ಇರಬಹುದು ಎಂಬ ನಿರೀಕ್ಷೆಗಳಿವೆ.
ಆದರೂ ಇತ್ತೀಚಿನ ದಿನಗಳಲ್ಲಿ ಪ್ರೇಮ್ ನಿರ್ದೇಶನದಲ್ಲಿ ಸೊರಗಿರುವುದು ಆತಂಕ ಮೂಡಿಸಿದೆ. ಅದು ಜೋಗಿ ನಂತರ ತೆರೆ ಕಂಡ ಅವರೇ ನಾಯಕರಾಗಿದ್ದ 'ಪ್ರೀತಿ ಏಕೆ ಭೂಮಿ ಮೇಲಿದೆ?' ಇರಬಹುದು, ನಂತರದ 'ರಾಜ್' ಚಿತ್ರವಿರಬಹುದು -- ಎರಡೂ ಉಪ್ಪಿದ್ದರೆ ಹುಳಿಯಿಲ್ಲ, ಹುಳಿಯಿದ್ದರೆ ಉಪ್ಪಿಲ್ಲ ಎಂಬಂತಾಗಿದ್ದವು.
ಆದರೂ ಚಿತ್ರದ ಬಗ್ಗೆ ಹೆಚ್ಚು ಮಾತನಾಡಲು ಪ್ರೇಮ್ ಹೋಗುತ್ತಿಲ್ಲ. ಚಿತ್ರವೊಂದಕ್ಕೆ ಪ್ರಚಾರವೆನ್ನುವುದು ಅಗತ್ಯ ಹೌದಾದರೂ, ಅತಿಯಾದರೆ ಅದೇ ಅಪಾಯವಾಗುವ ಸಾಧ್ಯತೆಗಳೂ ಇರುತ್ತವೆ. ನಿರೀಕ್ಷೆಗಳು ಹೆಚ್ಚಾದಾಗ ಮುಟ್ಟುವುದು ಕೂಡ ಕಷ್ಟ. ಇದರ ಅರಿವು ಪ್ರೇಮ್‌ಗೆ 'ರಾಜ್' ಚಿತ್ರದ ನಂತರ ಆದಂತಿದೆ.
ಚಿತ್ರದ ಆಡಿಯೋ ಸಿಡಿಗಳನ್ನು 2011ರ ಜನವರಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಇತ್ತೀಚೆಗಷ್ಟೇ ಖಾಸಗಿ ವಾಹಿನಿಯೊಂದರ ಜತೆ ಮಾತನಾಡುತ್ತಾ ಪ್ರೇಮ್ ಹೇಳಿದ್ದಾರೆ. ಅಲ್ಲದೆ ಸಿನಿಮಾದ ಟಿಕೇಟುಗಳನ್ನು ಎರಡು ವಾರಗಳ ಮೊದಲೇ ಕಾಯ್ದಿರಿಸುವ ವ್ಯವಸ್ಥೆ ಮಾಡುವುದಾಗಿಯೂ ತಿಳಿಸಿದ್ದಾರೆ.
ಜತೆಗೆ 300 ಥಿಯೇಟರುಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತೇನೆ ಎಂದೂ ಹೇಳಿದ್ದಾರೆ. ಈ ರೀತಿಯಾಗಿ ಬಡಪಾಯಿ ಪ್ರೇಕ್ಷಕರನ್ನು ಈ ಹಿಂದೆಯೂ ರೈಲು ಹತ್ತಿಸಿದ್ದ ಪ್ರೇಮ್ ಈ ಬಾರಿಯಾದರೂ ಸತ್ಯಸಂಧನಂತೆ ನಡೆದುಕೊಳ್ಳಲಿದ್ದಾರೆಯೇ ಎಂಬುದನ್ನು ಕಾಲವಷ್ಟೇ ಹೇಳಬೇಕಿದೆ.