ಕನ್ನಡ ಚಿತ್ರರಂಗದ ದೊಡ್ಡ ಹೆಸರುಗಳಲ್ಲಿ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅವರು ಪ್ರಮುಖರು. ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ವರ್ಗ, ಆತ್ಮೀಯರು, ಸಹೃದಯರು, ಹಿತೈಷಿಗಳನ್ನು ಹೊಂದಿದ್ದಾರೆ. ಇಬ್ಬರಲ್ಲಿ ಯಾರೂ ಹೆಚ್ಚಲ್ಲ, ಕಡಿಮೆಯಲ್ಲ. ಹೀಗಿರುವಾಗ ಇಬ್ಬರೂ ಒಂದೇ ಚಿತ್ರದಲ್ಲಿ ಕೆಲಸ ಮಾಡಿದರೆ ಹೇಗಿರುತ್ತೆ?
ಹೌದು, ಶಿವಣ್ಣ ಈಗಾಗಲೇ ಮೈಲಾರಿ, ಜೋಗಯ್ಯ ಅಂತ ಬ್ಯುಸಿ ಇದ್ದಾರೆ. ಸುದೀಪ್ 'ವಿಷ್ಣುವರ್ಧನ', 'ವೀರ ಪರಂಪರೆ' ಅಂತ ನಿರತರಾಗಿದ್ದಾರೆ. ಇಂತಹ ಹೊತ್ತಿನಲ್ಲಿ ಇಬ್ಬರೂ ಜತೆಯಾಗುವ ಮನಸ್ಸು ಮಾಡಿದ್ದಾರೆ.
ಇವರಿಬ್ಬರೂ ಸೇರಿ ಒಂದು ಚಿತ್ರ ಮಾಡಿದರೆ ಹೇಗಿರುತ್ತೆ ಎನ್ನುವುದನ್ನು ಊಹಿಸಿಕೊಂಡರೆ ಪುಳಕ ಆಗುತ್ತದೆ ಅಲ್ಲವೇ? ಆದರೆ ಇಲ್ಲೊಂದು ಸಣ್ಣ ತಿರುವು ಎಂದರೆ ಸುದೀಪ್ ನಟನೆ ಮಾಡದೇ ಇರುವುದು. ಇಲ್ಲಿ ನಟ ಶಿವಣ್ಣ ತೆರೆ ಮೇಲೆ ಮಿಂಚಿದರೆ, ಸುದೀಪ್ ತೆರೆ ಹಿಂದೆ ಮಿಂಚಲಿದ್ದಾರೆ.
ಸುದೀಪ್ ನಿರ್ದೇಶಕರಾಗಿರುವ ಈ ಚಿತ್ರದಲ್ಲಿ ಶಿವಣ್ಣ ನಾಯಕ ಎನ್ನುವುದು ಸ್ಪಷ್ಟವಾಗಿದೆ. ಆದರೆ ಚಿತ್ರ ತೆರೆಗೆ ಅಪ್ಪಳಿಸುವುದು ಮಾತ್ರ ಯಾವಾಗ ಎನ್ನುವುದು ಅಸ್ಪಷ್ಟ. ಯಾಕೆಂದರೆ ಈ ಚಿತ್ರದ ಮುಹೂರ್ತವೇ 2011ರಲ್ಲಿ.
ಪ್ರಸಕ್ತ ಇಬ್ಬರೂ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿದ ನಂತರವಷ್ಟೇ ವಿನೂತನ ಚಿತ್ರಕ್ಕೆ ಇಬ್ಬರೂ ಕೈ ಹಾಕಲಿದ್ದಾರೆ. ಸತ್ಯ ಘಟನೆ ಆಧರಿತ ಚಿತ್ರದ ಕಥೆಗೆ ಸುದೀಪ್ ಮತ್ತು ಕೆ. ನಂಜುಂಡ ಟಚ್ ನೀಡಿದ್ದಾರೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಲೂಸ್ ಮಾದ ಯೋಗೀಶ್ ಕೂಡಾ ನಟಿಸುತ್ತಿರುವುದು.
ಈಗಾಗಲೇ ಮೈ ಆಟೊಗ್ರಾಫ್, ಜಸ್ಟ್ ಮಾತ್ ಮಾತಲ್ಲಿ ಚಿತ್ರವನ್ನು ನಿರ್ದೇಶಿಸಿ ಪಕ್ಕಾ ಆಗಿರುವ ಸುದೀಪ್ ಕಮರ್ಷಿಯಲ್ ಟಚ್ ನೀಡಿ ಈ ಚಿತ್ರ ಸಿದ್ಧಪಡಿಸಲಿದ್ದಾರಂತೆ.
ಇನ್ನು ಕೆಲ ವರ್ಷ ಮಾತ್ರ ಚಿತ್ರಗಳಲ್ಲಿ ನಟಿಸುತ್ತೇನೆ. ನಂತರ ನಿರ್ದೇಶನವೇ ನನ್ನ ಉದ್ಯೋಗವಾಗಲಿದೆ. ಚಿತ್ರ ನಿರ್ದೇಶನವನ್ನೇ ಗಟ್ಟಿಯಾಗಿಸಿಕೊಳ್ಳುತ್ತೇನೆ. ನಿರ್ಮಾಣವನ್ನೂ ನಾನು ಮಾಡುತ್ತೇನೆ ಎನ್ನುವ ಸುದೀಪ್‌ಗೆ ಇತ್ತಿತ್ತಲಾಗಿ ಕನ್ನಡ ಚಿತ್ರದ ಬೇಡಿಕೆ ಹೆಚ್ಚುತ್ತಿದೆ. ಇನ್ನು ಮುಂಬಯಿ ಪ್ರವಾಸವೂ ಹೆಚ್ಚಾಗಿದೆ.
ಅವರ ಅದೃಷ್ಟ ನಟನೆಯಲ್ಲೋ, ನಿರ್ದೇಶನದಲ್ಲೋ ಎಂಬುದನ್ನು ಕಾಲವೇ ಹೇಳಬೇಕು. ಅಲ್ಲವೇ?