ಆಸ್ಕರ್ ಪ್ರಶಸ್ತಿ ಪುರಸ್ಕೃತ ಚಿತ್ರ ಸ್ಲಂ ಡಾಗ್ ಮಿಲಿಯನೇರ್ ಚಿತ್ರವನ್ನು ನೀವೆಲ್ಲಾ ನೋಡಿರುತ್ತೀರಿ. ನಿಜಕ್ಕೂ ಇಲ್ಲಿ ಮನಸೂರೆಗೊಳ್ಳುವ ಪಾತ್ರದ ಮೂಲಕ ಗಮನ ಸೆಳೆದವರು ತನ್ವಿ. ಹೌದು, ಚಿತ್ರದಲ್ಲಿ ಬಾಲಕಿಯಾಗಿ ಅತ್ಯುತ್ತಮ ಅಭಿನಯ ನೀಡಿದ ಅದೇ ತನ್ವಿ ಇದೀಗ ಕನ್ನಡಕ್ಕೆ ಬರುತ್ತಿದ್ದಾಳೆ.
ಮಾಸ್ಟರ್ ಕಿಶನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ '15... ಈ ವಯಸ್ಸೇ ಒಂಥರಾ' ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಕಿಶನ್ ಅವರ ತಂದೆ ಶ್ರೀಕಾಂತ್ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ನಟಿಸುತ್ತಿರುವ ತನ್ವಿ ಈಗಾಗಲೇ ಸಾಕಷ್ಟು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಅಭಿನಯದ ಅನುಭವವನ್ನೂ ಸಂಪಾದಿಸಿದ್ದಾಳೆ. ಇದರಿಂದ ಚಿತ್ರದ ಅಭಿನಯ ಇವಳಿಗೆ ಕಷ್ಟವಾಗುವುದಿಲ್ಲ ಅನ್ನಲಾಗುತ್ತಿದೆ.
ಮಾಸ್ಟರ್ ಕಿಶನ್ ಸಹ ಕಡಿಮೆಯವರಲ್ಲ. ಈಗಾಗಲೇ 70ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರ ಅಭಿನಯದ ಕೇರ್ ಆಫ್ ಫುಟ್ಪಾತ್ ಚಿತ್ರ ಗಿನ್ನಿಸ್ ದಾಖಲೆಯನ್ನು ಸಹ ಮಾಡಿದೆ. ಪ್ರಸ್ತುತ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿರುವ ಕಿಶನ್, ಆನಿಮೇಷನ್ ಹಾಗೂ ಗ್ರಾಫಿಕ್ ಡಿಸೈನಿಂಗ್ ತರಬೇತಿಯನ್ನೂ ಪಡೆಯುತ್ತಿದ್ದಾರೆ.
ಇನ್ನು ಪೀಯರ್ಸ್, ಮ್ಯಾಗಿ ಸೇರಿದಂತೆ 70ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿ ಮನೆ ಮಾತಾಗಿರುವ ಋಷಿಕಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇವಳೂ ಕೂಡಾ 15 ವರ್ಷದ ಪೋರಿಯಾಗಿದ್ದು, ಪರಿಣಿತಾ ಚಿತ್ರದಲ್ಲಿ ವಿದ್ಯಾ ಬಾಲನ್ ಜತೆ ನಟಿಸಿದ ಅನುಭವ ಹೊಂದಿದ್ದಾಳೆ.
ಒಟ್ಟಾರೆ ಚಿತ್ರ ಬಗ್ಗೆ ಸಾಕಷ್ಟು ನಿರೀಕ್ಷೆ ಇರಿಸಿಕೊಳ್ಳಲಾಗಿದ್ದು, ಯಾವಾಗ ಬರುತ್ತದೆ ಅಂತ ಕಾದು ನೋಡಬೇಕಿದೆ.