ಸರಿಸುಮಾರು 15 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಇರುವ ಸುಧಾಕರ ಬನ್ನಂಜೆ ಇದುವರೆಗೂ ಸುದ್ದಿಯಾಗಿದ್ದು ಬಹಳ ಕಡಿಮೆ. ತೆರೆ ಮರೆಯ ತಾರೆಯಾಗಿ ಇವರು ಮಿಂಚಿದ್ದಾರೆಯೇ ಹೊರತು, ಇದಕ್ಕೆ ಸಲ್ಲಬೇಕಾದ ಯಾವ ಗೌರವವನ್ನೂ ಪಡೆದಲ್ಲ. ಇದೆಲ್ಲಾ ಬೇರೆಯವರ ಪಾಲಾಗಿದೆ.
ಒಂದು ಪ್ರತಿಭೆ ಅದೆಷ್ಟು ದಿನ ಅಂತ ಬೂದಿ ಮುಚ್ಚಿದ ಕೆಂಡವಾಗಿರಲು ಸಾಧ್ಯ? ಕೊನೆಗೂ ಬನ್ನಂಜೆ ಬೆಳಗಿದ್ದಾರೆ. ಪ್ರಸಕ್ತ ಸಾಲಿನ ಪನೋರಮಾ ವಿಭಾಗಕ್ಕೆ ಮೂರು ಚಿತ್ರಗಳು ಆಯ್ಕೆಯಾಗಿವೆ. ಇದರಲ್ಲಿ ಬನ್ನಂಜೆ ಸಂಭಾಷಣೆ ಬರೆದಿರುವ 'ಐದು ಒಂದ್ಲಾ ಐದು' ಚಿತ್ರ ಒಂದು. ಪ್ರಕಾಶ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದ್ದರೂ, ಬನ್ನಂಜೆ ಕೆಲಸ ಇಲ್ಲಿ ಅತ್ಯಂತ ಪ್ರಧಾನವಾಗಿರುವುದು ನಿಸ್ಸಂಶಯ.
ಈ ರೀತಿ ತಮ್ಮ ಚಿತ್ರಕ್ಕೆ ಒಂದು ಅವಕಾಶ ಸಿಕ್ಕಿರುವುದು ಸಾಕಷ್ಟು ಉತ್ತೇಜನ ನೀಡಿದೆ. ಇನ್ನಷ್ಟು ಚಿತ್ರ ಸಂಭಾಷಣೆ ಬರೆಯುವ ಉತ್ಸಾಹ ತುಂಬಿದೆ. ಚಿತ್ರರಂಗದಲ್ಲಿ ಗುರುತಾಗುವ ಮಾದರಿಯ ಕೆಲಸ ನಿಧಾನವಾಗಿಯಾದರೂ ಆಗಿರುವುದು ಶ್ರಮಕ್ಕೆ ಸಿಕ್ಕ ಫಲ ಎಂದಿದ್ದಾರೆ.
ಹತ್ತಾರು ಚಿತ್ರ ಮಾಡುವ ಆಸೆ, ಉತ್ಸಾಹ ಹಾಗೂ ಚೈತನ್ಯ ನನ್ನಲ್ಲಿ ಇನ್ನೂ ಇದೆ. ಕೇವಲ ಸಂಭಾಷಣೆ ಬರೆಯುವುದು ಮಾತ್ರವಲ್ಲ ಪ್ರೇಮಕತೆ ಹಾಗೂ ಧರ್ಮಯೋಧ ಚಿತ್ರವನ್ನು ನಿರ್ದೇಶಿಸಿದ್ದೇನೆ. ಇಲ್ಲಿ ಮಾಡಬೇಕಾದ ಕೆಲಸ ಇನ್ನೂ ಸಾಕಷ್ಟಿದೆ ಎನ್ನುತ್ತಾರೆ ಅವರು.
ಸುಮಾರು 12 ಕತೆಯನ್ನು ಇವರು ಸಿದ್ಧಪಡಿಸಿಕೊಂಡಿದ್ದು, ಅದಕ್ಕೆ ಸೂಕ್ತ ನಿರ್ಮಾಪಕರನ್ನು ಹುಡುಕುತ್ತಿದ್ದಾರೆ. ನಿರ್ದೇಶನಕ್ಕೆ ಸಿದ್ಧರಾಗಿರುವ ಇವರಿಗೆ ಅದ್ಯಾವಾಗ ಅವಕಾಶ ಒದಗಿ ಬರುವುದೋ ಕಾದು ನೋಡಬೇಕಿದೆ.