ದೂರದ ಲಂಡನ್‌ಗೆ ಹೋಗಿದ್ದ ನಟಿ ಶರ್ಮಿಳಾ ಮಾಂಡ್ರೆಗೆ ಊರು, ಮನೆ ಮಿಸ್ ಮಾಡಿದ್ದು ಕಾಡುತ್ತಿತ್ತಂತೆ. ಬೆಂಗಳೂರಿಗೆ ತಲುಪಿದಾಗ ಉಸ್ಸಪ್ಪ ನಮ್ಮೂರು ಚೆಂದ, ನಮ್ಮ ಮನೆಯೇ ಅಂದ ಎಂದು ಸಂತೋಷದಿಂದ ಬೀಗುತ್ತಿದ್ದಾರೆ.
ಅಂದ ಹಾಗೆ ಸ್ಯಾಂಡಲ್‌ವುಡ್‌ನಲ್ಲಿ ಕೆಲಸ ಇಲ್ಲ ಅಂತ ಟೈಮ್ ಪಾಸ್ ಮಾಡೋದಿಕ್ಕೆ ಲಂಡನ್‌ಗೆ ಹೋಗಿರಲಿಲ್ಲ. ಕನ್ನಡಿಗ ವಿನಯ್ ರೈ ನಾಯಕರಾಗಿರುವ ತಮಿಳು ಚಿತ್ರವೊಂದರ ಚಿತ್ರೀಕರಣಕ್ಕೆಂದು ಕಡಲಿನಾಚೆ ಪಯಣಿಸಿದ್ದರು.
ಈಗ ಅಲ್ಲಿ ವಿಪರೀತ ಚಳಿಯಂತೆ, ಆದರೂ ಬಹಳ ಎಂಜಾಯ್ ಮಾಡ್ದೆ ಎನ್ನುತ್ತಿದ್ದಾರೆ. ಕನ್ನಡ ಚಿತ್ರಗಳಲ್ಲಿ ಅವಕಾಶ ಕಡಿಮೆಯಾಗಿವೆ, ಇನ್ನೇನ್ ಮಾಡ್ಬೇಕು. ರಿಲ್ಯಾಕ್ಸ್ ಆದಂಗೂ ಆಗುತ್ತೆ, ಇತರ ಭಾಷೆಗಳಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳೋದು ಜಾಣತನ ಅಲ್ಲವೆ ಎಂದೂ ಪ್ರಶ್ನಿಸುತ್ತಾರೆ.
ಶರ್ಮಿಳಾ ಜೊತೆಯಲ್ಲಿ ಆಕೆ ಚಿಕ್ಕಮ್ಮ ಸುನಂದ ಮತ್ತು ಅವರ ಚಿಕ್ಕಪ್ಪ ಅವರನ್ನು ಕರೆದುಕೊಂಡು ಹೋಗಿ ಬಂದಿದ್ದಾರೆ. ಏನೇ ಆಗಲಿ ನಮ್ಮ ಬೆಂಗಳೂರಿಗೆ ವಾಪಸ್ ಬಂದೇನಲ್ಲ ಎಂದು ಖುಷಿಯಾಗಿದ್ದಾರೆ.
ಈ ತಮಿಳು ಚಿತ್ರಕ್ಕೆ ಹೆಸರೇನು ಎಂಬುದು ಇನ್ನೂ ಅಂತಿಮಗೊಂಡಿಲ್ಲ. ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ ವಿಷ್ಣು ಮತ್ತು ಜೆನಿಲಿಯಾ ತಾರಾಗಣವಿದ್ದ 'ಧೀ' ಚಿತ್ರದ ರೀಮೇಕ್ ಇದು ಎಂಬುದಷ್ಟೇ ಇತ್ತೀಚಿನ ಮಾಹಿತಿ.