ಎಷ್ಟೇ ಚಿತ್ರಗಳು ಸೋತರೂ, ಮಾರುಕಟ್ಟೆ ದೊಡ್ಡದಿಲ್ಲ ಎಂಬ ಕೊಂಕುಗಳಿದ್ದರೂ ಕನ್ನಡ ಚಿತ್ರರಂಗದಲ್ಲಿ ಹೊಸ ಚಿತ್ರಗಳು ಸೆಟ್ಟೇರುವುದಕ್ಕೆ ಏನೂ ಕೊರತೆಯಿಲ್ಲ. ಆ ಚಿತ್ರಗಳು ಯಾವಾಗ ಚಿತ್ರೀಕರಣವಾಗುತ್ತದೆ, ಮುಗಿಯುತ್ತದೆ ಮತ್ತು ಬಿಡುಗಡೆಯಾಗುತ್ತದೆ ಎಂಬುದೂ ಕೆಲವೊಮ್ಮೆ ಗೊತ್ತಾಗುವುದಿಲ್ಲ.
ಆ ಸಾಲಿಗೆ ಸೇರುವ ಮತ್ತೊಂದು ಚಿತ್ರ 'ಚಿನ್ನದ ತಾಳಿ'. ಇದರ ನಿರ್ದೇಶಕರು ಶ್ರೀನಿವಾಸ್, ಇವರದ್ದೇ ನಿರ್ಮಾಣ. ಈ ಹಿಂದೆ 'ವರ್ಷಧಾರೆ' ಚಿತ್ರ ಮಾಡಿದವರು.
ನಾಯಕ ಗಂಡ-ಹೆಂಡತಿ ಖ್ಯಾತಿ ತಿಲಕ್, ನಾಯಕಿ ತುಂಗಾಶ್ರೀ. ಇದೊಂದು ಸಾಂಸಾರಿಕ ಚಿತ್ರ. ಇಂದಿನ ಕುಟುಂಬದಲ್ಲಿ ನಡೆಯುವ ಅಂಶಗಳನ್ನು ಇಟ್ಟುಕೊಂಡು ಚಿತ್ರ ಮಾಡಿ ಮುಗಿಸುತ್ತಿದ್ದೇನೆ ಎಂದಿದ್ದಾರೆ ನಿರ್ದೇಶಕ ಶ್ರೀನಿವಾಸ್.
ಚಿತ್ರದ ಪ್ರಮುಖ ಪಾತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಶೀರ್ಷಿಕೆಗೂ ತಾರಾಬಳಗಕ್ಕೂ ಕಥೆಗೂ ಸಂಬಂಧ ಅಷ್ಟಾಗಿ ಮ್ಯಾಚ್ ಆಗುತ್ತಿಲ್ಲ ಎನ್ನುವ ಪ್ರಶ್ನೆಗೆ ಶ್ರೀನಿವಾಸ್, ಸಸ್ಪೆನ್ಸ್ ಚಿತ್ರದಲ್ಲಿ ನೋಡಿ ಎಂದು ಜಾರಿಕೊಂಡಿದ್ದಾರೆ.
ಮಾರುತಿ ಸಂಗೀತ, ವಿಶ್ವನಾಥ್ ಛಾಯಾಗ್ರಹಣ ಚಿತ್ರಕ್ಕಿದೆ. ಕಳಸ, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಬಹುಶಃ ಜನವರಿಯಲ್ಲಿ 'ಚಿನ್ನದ ತಾಳಿ' ಭಾಗ್ಯ ಕಾಣಬಹುದು.