ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 100 ಚಿತ್ರಗಳನ್ನು ಪೂರೈಸಿರುವ ಶುಭ ಸಂದರ್ಭವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಅದರ ನಿಮಿತ್ತ ಮಾರ್ಚ್ 6 ಮತ್ತು 9ರಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ನಿರ್ಧಾರಕ್ಕೆ ಶಿವಣ್ಣನ ಪತ್ನಿ ಗೀತಾ ಬಂದಿದ್ದಾರೆ.
ಮಾರ್ಚ್ 6ರಂದು ನಡೆಯಲಿರುವುದು ಶಿವಣ್ಣನ ನೂರನೇ ಚಿತ್ರ ಜೋಗಯ್ಯದ ಆಡಿಯೋ ಬಿಡುಗಡೆ. ಇದನ್ನು ಈಗಾಗಲೇ ನಿರ್ದೇಶಕ ಪ್ರೇಮ್ ಪ್ರಕಟಿಸಿದ್ದಾರೆ. ಮಾರ್ಚ್ 9ರಂದು ಶಿವಣ್ಣನ ನಿವಾಸದಲ್ಲಿ ವಿಶೇಷ ಕಾರ್ಯಕ್ರಮ.
ಶಿವರಾಜ್ ಕುಮಾರ್ ಜತೆ ಕಳೆದ 100 ಚಿತ್ರಗಳ ಅವಧಿಯನ್ನು ಕಳೆದ ಎಲ್ಲಾ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಮತ್ತು ಮಾಧ್ಯಮದವರನ್ನು ಮಾರ್ಚ್ 9ರಂದು ಗೌರವಿಸಲಾಗುತ್ತದೆ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ.
ಈ ಕಾರ್ಯಕ್ರಮ ಅದ್ಧೂರಿಯಾಗಿರುತ್ತದೆ. ದೊಡ್ಡ ದೊಡ್ಡ ನಟ-ನಟಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಲವು ಮನರಂಜನಾ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಶಿವಣ್ಣನ ಮನೆಯಲ್ಲಿ ಇತ್ತೀಚೆಗಷ್ಟೇ ಹಲವು ಮಂದಿ ಸೇರಿ ಸಮಾಲೋಚನೆ ನಡೆಸಿದ್ದಾರೆ.
ಕಾರ್ಯಕ್ರಮದ ರೂಪರೇಷೆಯನ್ನು ಸಿದ್ಧಪಡಿಸಲು ನಡೆಸಲಾಗಿದ್ದ ಈ ಸಭೆಯಲ್ಲಿ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಸುದೀಪ್, ಚಿರಂಜೀವಿ ಸರ್ಜಾ, ರಾಗಿಣಿ, ರಾಧಿಕಾ ಪಂಡಿತ್ ಮುಂತಾದವರು ಭಾಗವಹಿಸಿದ್ದರು.