'ಕೆಂಪೇಗೌಡ'ದಲ್ಲಿ ಕಿಚ್ಚ ಸುದೀಪ್‌ಗೆ ಜೋಡಿಯಾಗಿ ಕೆನ್ನೆ ಕೆಂಪು ಮಾಡಿಕೊಂಡಿರುವ ಕನ್ನಡದ ಹುಡುಗಿ ರಾಗಿಣಿ ದ್ವಿವೇದಿಗೆ ಈಗ ಪುರುಸೊತ್ತೇ ಇಲ್ಲವಂತೆ. ಹಾಗಾಗಿ ಹುಡುಗರ ಗೋಜಿಗೆ ಹೋಗಿಲ್ಲ. ಅದನ್ನು ಯೋಚನೆಯೇ ಮಾಡಿಲ್ಲ. ಹುಡುಗ ಬೇಕು, ನನ್ನನ್ನು ಅತಿಯಾಗಿ ಮುದ್ದಿಸುವ ಹುಡುಗ ಬೇಕು ಎಂದು ಹೇಳಿಕೊಂಡಿದ್ದಾರೆ.
ಈಗ ಅವರು ಸಿಕ್ಕಾಪಟ್ಟೆ ಬ್ಯುಸಿ. ಕೆಂಪೇಗೌಡ ಮುಗಿಸಿರುವ ಅವರ ಮುಂದೀಗ ರವಿಚಂದ್ರನ್, ರಮೇಶ್ ಮತ್ತು ವಿಜಯ ರಾಘವೇಂದ್ರರ ಜತೆಗಿನ 'ಹ್ಯಾಪಿ ಹಸ್ಬೆಂಡ್ಸ್'ನತ್ತ ಹೊರಟಿದ್ದಾರೆ. ಬಳಿಕ ದಿಗಂತ್ ಜತೆಗಿನ 'ಕಾಂಚನಾ', ರವಿಚಂದ್ರನ್ ನಾಯಕರಾಗಿರುವ 'ಮಲ್ಲಿಕಾರ್ಜುನ', ಇನ್ನೊಂದು ಚಿತ್ರ 'ಒಮ್ಮೊಮ್ಮೆ' -- ಹೀಗೆ ಹಲವು ಚಿತ್ರಗಳಿವೆ.
ಗುಳಿಕೆನ್ನೆ ಹುಡುಗ ದಿಗಂತ್ ಜತೆಗಿನ ಅವಕಾಶವಂತೂ ರಾಗಿಣಿಗೆ ಸಖತ್ ಖುಷಿ ಕೊಟ್ಟಿದೆ. ರೊಮ್ಯಾಂಟಿಕ್ ಸಿನಿಮಾದಲ್ಲಿ ಅವರಿಗೆ ಸಿಗುತ್ತಿರುವ ಮೊದಲ ಅವಕಾಶವಿದು. ಈ ಹಿಂದೆಲ್ಲ ಹೊಡೆ-ಬಡಿ ಚಿತ್ರಗಳಲ್ಲೇ ಬಂದು ಹೋಗಿದ್ದು. ಜತೆಗೆ, ದಿಗಂತ್ ಅವರದ್ದೇ ವಯಸ್ಸಿನವರಾಗಿರುವುದು ಅವರಲ್ಲಿ ಸಂತಸವನ್ನು ಇಮ್ಮಡಿಸಿದೆ.
ಈಗ ಪತ್ರಿಕೋದ್ಯಮದಲ್ಲಿ ಪದವಿ ಅಭ್ಯಾಸ ಮಾಡುತ್ತಿರುವ ರಾಗಿಣಿ, ನಟನೆಯನ್ನು ಗಂಭೀರವಾಗಿ ಪರಿಗಣಿಸಿರುವುದರಿಂದ ಮುಂದೊಂದು ದಿನ ವೃತ್ತಿಪರ ಚಿತ್ರ ನಿರ್ಮಾಣ ಕುರಿತ ಕೋರ್ಸೊಂದನ್ನು ಮಾಡುವ ಮುನ್ಸೂಚನೆ ಕೂಡ ನೀಡಿದರು.
ಸದ್ಯಕ್ಕಂತೂ ಅವರು ಹ್ಯಾಪಿಯಾಗಿದ್ದಾರೆ. ಅದೂ ಸಿಂಗಲ್ ಆಗಿ. ವೃತ್ತಿ ಜೀವನದ ಕಡೆ ಹೆಚ್ಚು ಗಮನ ಇರುವುದರಿಂದ ಮತ್ತು ಸಾಕಷ್ಟು ಸಿನಿಮಾಗಳು ಕೈಯಲ್ಲಿರುವುದರಿಂದ ಇತರ ವಿಚಾರಗಳ ಬಗ್ಗೆ ಯೋಚಿಸಲು ಕಾಲಾವಕಾಶವಿಲ್ಲ. ಅಷ್ಟಕ್ಕೂ ನಾನು ತೀವ್ರ ಭಾವನಾತ್ಮಕ ಹುಡುಗಿಯಲ್ಲ ಎನ್ನುತ್ತಾರವರು.
ಹಾಗೆಂದು ಹುಡುಗರೇ ಬೇಡ ಎಂದೇನೂ ಭಾವಿಸಬೇಕಾಗಿಲ್ಲ. ಹುಡುಗನ ಅಗತ್ಯ ನನಗಿದೆ. ಆತ ನನ್ನನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಇರುವ ಕ್ಷೇತ್ರವನ್ನು ಪರಿಗಣಿಸಬೇಕು. ಸಿಕ್ಕಾಪಟ್ಟೆ ಬ್ಯುಸಿಯಾಗಿರಬಾರದು. ನನ್ನನ್ನು ಅತಿಯಾಗಿ ಮುದ್ದಿಸುವುದು ಹೇಗೆ ಎಂದು ಗೊತ್ತಿರಬೇಕು. ಯಾಕೆಂದರೆ ನಾನು ಹೆಚ್ಚು ಪ್ರೀತಿಸಲ್ಪಡುವುದು ಇಷ್ಟ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಆತ ಸಾಕಷ್ಟು ಉದ್ದವಿರಬೇಕು ಎಂದೆಲ್ಲ ಎಲ್ಲಾ ನಾಯಕಿಯರಂತೆ ಬೇಡಿಕೆಗಳ ಪಟ್ಟಿ ರಾಗಿಣಿಯಲ್ಲೂ ಇದೆ.
ಆದರೆ ಇದೆಲ್ಲ ಸದ್ಯಕ್ಕೆ ಬೇಡ. ಈಗ ನನ್ನ ಗಮನ ಪೂರ್ತಿಯಾಗಿ ಚಿತ್ರರಂಗದಲ್ಲಿದೆ. ಮುಂದೆ ನೋಡೋಣ ಅಂತಾರೆ.