ನಿನ್ನೆ ಸಂಭ್ರಮ, ಇಂದು ಹುಟ್ಟುಹಬ್ಬ; ಇದು ರಾಗಿಣಿ ಸ್ಟೈಲ್!
PR
ಇಂದಿನ ಹುಡುಗಿಯರು ಎಲ್ಲದರಲ್ಲೂ ತುಂಬಾ ಫಾಸ್ಟು ಎಂಬ ಮಾತಿಗೆ ಪುಷ್ಠಿ ನೀಡುವಂತೆ 'ವೀರ ಮದಕರಿ', 'ಕೆಂಪೇಗೌಡ' ಚಿತ್ರದಲ್ಲಿ ಸುದೀಪ್ ಜೊತೆ ಬಿಂದಾಸ್ ಆಗಿ ಸ್ಟೆಪ್ ಹಾಕಿದ್ದ ಚಂದನವನದ ಅರಗಿಣಿ ರಾಗಿಣಿ ದ್ವಿವೇದಿ ಒಂದು ದಿನ ಮುಂಚಿತವಾಗಿಯೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅತ್ತ ಕ್ರೇಜಿ ಸ್ಟಾರ್ ರವಿಚಂದ್ರನ್ ತನ್ನ ಹುಟ್ಟು ಹಬ್ಬವನ್ನು ಮುಂದೂಡಿ ತಮ್ಮ ಅಭಿಮಾನಿಗಳಿಗೆ ತುಸು ನಿರಾಸೆ ಮೂಡಿಸಿದ್ದರೆ, ನಟಿ ರಾಗಿಣಿ ಒಂದು ದಿನ ಮುಂಚಿತವಾಗಿ ಹುಟ್ಟು ಹಬ್ಬ ಆಚರಿಸಿ ಸೂಪರ್ ಫಾಸ್ಟ್ ಎನಿಸಿಕೊಂಡಿರುವುದರ ಜತೆಗೆ ತಮ್ಮ ಅಭಿಮಾನಿಗಳಲ್ಲಿ ಚಕಿತ ಮೂಡಿಸಿದ್ದಾರೆ.
ಯಾವಾಗಲೂ ಪಟ ಪಟ ಅಂತ ಕಣ್ಣು ಮಿಟಿಕಿಸುತ್ತಾ ಮಾತನಾಡುತ್ತಲೇ ತನ್ನ ಸುತ್ತಮುತ್ತಲಿರುವವರನ್ನು ಸೆಳೆಯುವ ರಾಗಿಣಿಗೆ ಇದೀಗ ಇಪ್ಪತ್ತೊಂದರ ಹರೆಯ. ಸಾಮಾನ್ಯವಾಗಿ ತಮ್ಮ ಹುಟ್ಟು ಹಬ್ಬದ ದಿನ ಅಥವಾ ಒಂದು ದಿನ ನಂತರ ಕೇಕ್ ಕತ್ತರಿಸುವುದು ರೂಢಿ. ಆದರೆ ರಾಗಿಣಿ ನಿನ್ನೆ (ಮೇ 23 ಸೋಮವಾರ) ನಡೆದ ಅವರ ಹೊಸ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿರುವ ರಾಗಿಣಿ ಬಳಿ ಹುಟ್ಟುಹಬ್ಬದ ಕೊಡುಗೆ ಏನು ಎಂದು ಕೇಳಿದರೆ 'ಇನ್ನು ಮುಂದೆ ಒಳ್ಳೊಳ್ಳೆ ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳಲಿದ್ದೇನೆ. ಕಥೆಯಲ್ಲಿ ತುಂಬ ಚ್ಯೂಸಿಯಾಗಿರುತ್ತೇನೆ' ಎಂದರು ಜುಂ ಜುಂ ಮಾಯಾ ರಾಗಿಣಿ. ರಾಗಿಣಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ನೀವೂ ಹಾರೈಸಿ.