ಜೂನ್ 6 ಸೋಮವಾರ ಸ್ಯಾಂಡಲ್‌ವುಡ್‌ನಲ್ಲಿ ಗಿನ್ನಿಸ್ ದಾಖಲೆಯೊಂದು ನಿರ್ಮಾಣವಾಗುತ್ತಿದೆ. ಸತತ 12 ಗಂಟೆ ಶೂಟಿಂಗ್, ಹನ್ನೊಂದು ದಿನಗಳಲ್ಲಿ ಚಿತ್ರದ ಪ್ರಥಮ ಪ್ರತಿ ಸಿದ್ಧ, ಸೆಟ್ಟೇರಿದ ತಿಂಗಳೊಳಗೆ ಚಿತ್ರದ ಬಿಡುಗಡೆ. ಗಿನ್ನಿಸ್ ಮತ್ತು ಲಿಮ್ಕಾ ಪುಸ್ತಕಗಳಲ್ಲಿ ಹೀಗೊಂದು ಅಪೂರ್ವ ದಾಖಲೆ ಬರೆಯಲು ಹೊರಟಿದೆ 'ಪೊಲೀಸ್ ಸ್ಟೋರಿ-3' ಚಿತ್ರದ ತಂಡ.
ಸೋಮವಾರ ಮುಂಜಾನೆ 6 ಗಂಟೆಯಿಂದ ಸಂಜೆ 6ರ ವರೆಗೆ ಕೇವಲ ಹನ್ನೆರಡು ತಾಸುಗಳ ಅವಧಿಯಲ್ಲಿ ಬಿರುಸಿನ ಚಿತ್ರೀಕರಣವನ್ನು ಜಂಟಿಯಾಗಿ ನಡೆಸಿ ಮುಗಿಸಲಿದ್ದಾರೆ ಆರು ಮಂದಿ ನಿರ್ದೇಶಕರು ಹಾಗೂ ಅಷ್ಟೇ ಸಂಖ್ಯೆಯ ಛಾಯಾಗ್ರಾಹಕರು.
ದಾಖಲೆ ನಿರ್ಮಿಸಹೊರಟಿರುವ 'ಪೊಲೀಸ್ ಸ್ಟೋರಿ-3' ಚಿತ್ರದ ನಾಯಕ ಕಿಚ್ಚ ಸುದೀಪ್. ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಶೋಭರಾಜ್ ಮುಂತಾದವರು ಚಿತ್ರದ ತಾರಾಗಣದಲ್ಲಿದಾರೆ. ನೇಹಾ ಪಾಟೀಲ್ ಮತ್ತು ಭವ್ಯಾ ನಾಯಕಿಯರು.
ಶಿವಾನಂದ ಮಾದಶೆಟ್ಟಿ 'ಪೊಲೀಸ್ ಸ್ಟೋರಿ-3' ಚಿತ್ರದ ನಿರ್ಮಾಪಕರು. ಅವರಿಗೆ ಹನ್ನೆರಡು ಗಂಟೆಗಳ ಚಿತ್ರೀಕರಣದ ಐಡಿಯಾ ಸೂಚಿಸಿದವರು ಥ್ರಿಲ್ಲರ್ ಮಂಜು. ಥ್ರಿಲ್ಲರ್ ಮಂಜು ಚಿತ್ರದ ಆರು ಮಂದಿ ನಿರ್ದೇಶಕರಲ್ಲಿ ಒಬ್ಬರು. ಇತರ ಐದು ಮಂದಿ ನಿರ್ದೇಶಕರು ಸಾಧು ಕೋಕಿಲ, ಜಿ.ಜಿ.ಕೃಷ್ಣ, ವಾಸು, ಶಂಕರ್ ಮತ್ತು ಆನಂದ್ ಪಿ ರಾಜು.
ಕೃಷ್ಣಕುಮಾರ್, ಎಂ.ಆರ್. ಸೀನು, ಆನಾರ್ದನ್ ಬಾಬು, ಆನಂದ್, ಜಿ.ಜಿ. ಕೃಷ್ಣ ಮತ್ತು ವೆಂಕಟೇಶ್ 'ಪೊಲೀಸ್ ಸ್ಟೋರಿ-3'ರ ಛಾಯಾಗ್ರಾಹಕರು. ಈ ಹಿಂದೆ ಶಿವರಾಜ್ ಕುಮಾರ್ ನಾಯಕರಾಗಿ ನಟಿಸಿದ್ದ 'ಸುಗ್ರೀವ' 18 ತಾಸುಗಳಲ್ಲಿ ಚಿತ್ರೀಕರಣ ಪೂರೈಸಿದ್ದು ದಾಖಲೆಯಾಗಿತ್ತು. ಆ ಚಿತ್ರದಲ್ಲಿ ತಲಾ ಹತ್ತು ಮಂದಿ ನಿರ್ದೇಶಕರು ಮತ್ತು ಛಾಯಾಗ್ರಾಹಕರಿದ್ದರು.
ಬೆಂಗಳೂರು ಅರಮನೆ ಮೈದಾನದ ಐದು ಕಡೆ ಚಿತ್ರೀಕರಣಕ್ಕಾಗಿ ಸೆಟ್‌ಗಳನ್ನು ಹಾಕಲಾಗಿದೆ. ಹತ್ತು ಮಂದಿ ಕಲಾವಿದರು, ನೂರು ಮಂದಿ ಜೂನಿಯರ್ ಆರ್ಟಿಸ್ಟ್‌ಗಳು ಹಾಗೂ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಹೊಂದಿರುವ ಸುಮಾರು ಐವತ್ತು ಮಂದಿ ಸಾಹಸಿಗರು ಈ ದಿಢೀರ್ ಚಿತ್ರದಲ್ಲಿ ಮಿಂಚಲಿದ್ದಾರೆ.