ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಮತ್ತು ಲೂಸ್‌ಮಾದ ಯೋಗೀಶ್ ನಾಯಕರಾಗಿ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಕಳೆದ ವರ್ಷವೇ ಸುದ್ದಿಯಾಗಿತ್ತು. ಅದನ್ನು ಶಿವಣ್ಣ ಮತ್ತೊಮ್ಮೆ ಕೆದಕಿದ್ದಾರೆ. ಆ ಮೂಲಕ ಬಹು ತಾರಾಗಣದ ಚಿತ್ರದಲ್ಲಿ ನಟಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ 'ಕೆಂಪೇಗೌಡ' ಆಡಿಯೋ ಸಿಡಿ ಬಿಡುಗಡೆ ಸಮಾರಂಭದಲ್ಲಿ ಒಳ್ಳೆ ಮೂಡಿನಲ್ಲಿದ್ದ ಶಿವಣ್ಣ, 'ತಾನು ಸುದೀಪ್ ಜತೆ ನಟಿಸಲಿದ್ದೇನೆ. ಈ ಚಿತ್ರದಲ್ಲಿ ಮೂವರು ನಾಯಕರು ಇರುತ್ತಾರೆ. ಇನ್ನೊಬ್ಬ ಲೂಸ್‌ಮಾದ ಯೋಗೀಶ್' ಎಂದರು. ಅಷ್ಟಾಗುತ್ತಿದ್ದಂತೆ ಅಲ್ಲೇ ಇದ್ದ ಸುದೀಪ್, ಹೆಚ್ಚಿನ ಮಾಹಿತಿ ಬಹಿರಂಗಪಡಿಸದಂತೆ ತಡೆಯೊಡ್ಡಿದರು.
ಶಿವಣ್ಣ ನಾಯಕತ್ವದ ಚಿತ್ರವೊಂದನ್ನು ತಾನು ನಿರ್ದೇಶಿಸಲಿದ್ದೇನೆ. ಇದರಲ್ಲಿ ಯೋಗಿ ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಆ ಚಿತ್ರಕ್ಕೆ '1993' ಎಂದು ಹೆಸರಿಡಲಾಗಿದೆ. ಈ ಚಿತ್ರದ ಕಥೆ, ಚಿತ್ರಕಥೆ ಎಲ್ಲವೂ ನನ್ನದೆ. ಈ ಚಿತ್ರ ವಿಭಿನ್ನವಾಗಿ ಮೂಡಿ ಬರಲಿದೆ ಎಂದು ಡಿಸೆಂಬರ್ ಆರಂಭದಲ್ಲಿ ಸುದೀಪ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.
ಹಾಗೆ ನೋಡಿದರೆ, ಸುದೀಪ್ ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸುದೀಪ್ ನಿರ್ದೇಶನದ 'ನಂ.73, ಶಾಂತಿನಿವಾಸ'ದಲ್ಲಿ ಶಿವಣ್ಣ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದರು. ಆ ಚಿತ್ರದಲ್ಲಿ ದರ್ಶನ್ ಕೂಡ ಬಂದು ಹೋಗಿದ್ದರು.
ಕನ್ನಡದ ಮಟ್ಟಿಗೆ ಹೇಳುವುದಾದರೆ, ಇತ್ತೀಚಿನ ವರ್ಷಗಳಲ್ಲಿ ಬಹು ತಾರಾಗಣದ ಚಿತ್ರ ಹಿಟ್ ಆಗಿರುವ ಉದಾಹರಣೆಗಳು ಕಡಿಮೆ. ಆದರೂ ಸುದೀಪ್ ಹೊಸ ಪ್ರಯತ್ನಗಳಿಗೆ ಹೆಸರಾದವರು. ಹಾಗಾಗಿ ಮೂರು ನಾಯಕರ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದರಲ್ಲಿ ತಪ್ಪೇನಿಲ್ಲ.