ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡದ ಕಮಲಹಾಸನ್ ಆಗುವುದರಲ್ಲಿ ಯಾವುದೇ ಸಂಶಯಗಳಿಲ್ಲ. ಬರೋಬ್ಬರಿ ಆರು ಅವತಾರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇದು ಮಾಮೂಲಿ ಹೊಡೆಬಡಿ ಚಿತ್ರವಲ್ಲ. ಶಿವಣ್ಣನಿಗೆ ಹೊಸ ಇಮೇಜ್ ತಂದುಕೊಡುವ ಚಿತ್ರ -- ಇಂತಹ ಪ್ರಶಂಸೆಯನ್ನು ಬಿಡುಗಡೆಗೆ ಮೊದಲೇ ಪಡೆದುಕೊಂಡಿರುವ 'ಮೈಲಾರಿ'ಯನ್ನು ನೋಡಲು ಸ್ವತಃ ಮೆಗಾಸ್ಟಾರ್ ಚಿರಂಜೀವಿಯೇ ಆಸಕ್ತಿ ತೋರಿಸುವಷ್ಟು ಏನಿದೆ?!
ತಾಜ್‌ಮಹಲ್, ಪ್ರೇಮ್‌ಕಹಾನಿ ಖ್ಯಾತಿಯ ಅಪ್ಪಟ ಸ್ವಮೇಕ್ ನಿರ್ದೇಶಕ ಎಂದು ಹೆಸರು ಪಡೆದುಕೊಂಡಿರುವ ಆರ್. ಚಂದ್ರು ತನ್ನ ಮೈಲಾರಿ ಬಗ್ಗೆ ಅಪಾರ ಭರವಸೆ ಇಟ್ಟುಕೊಂಡಿದ್ದಾರೆ. ಗುರುಕಿರಣ್ ಸಂಗೀತವಂತೂ ಅವರಿಗೆ ಬೂಸ್ಟ್. ಇಡೀ ತಂಡವೇ ಚಿತ್ರಕ್ಕೆ ಕೊಡುಗೆ ನೀಡಿದೆ. ಭಿನ್ನ ಚಿತ್ರ ಎಂದಷ್ಟೇ ಹೇಳಬಲ್ಲೆ ಎನ್ನುತ್ತಾರವರು.
ಚಿರಂಜೀವಿಗೂ ನೋಡಬೇಕಂತೆ... ಹೀಗೆ ಕರ್ನಾಟಕದಲ್ಲಿ ಭಾರೀ ಅಲೆಯನ್ನೆಬ್ಬಿಸಿರುವ ಮೈಲಾರಿಯನ್ನು ನೋಡಲು ಮೆಗಾಸ್ಟಾರ್ ಚಿರಂಜೀವಿ ಕೂಡ ಕಾಯುತ್ತಿದ್ದಾರೆ. ಸ್ವತಃ ಅವರೇ ಮುಂದೆ ಬಂದು ಮೈಲಾರಿ ಹಿಟ್ ಆಗಲಿ ಎಂದು ಹಾರೈಸಿದ್ದಾರೆ. ಇದು ಮೈಲಾರಿ ಜಾಹೀರಾತುಗಳಲ್ಲಿ ಈಗ ರಾರಾಜಿಸುತ್ತಿವೆ.
ಚಿರಂಜೀವಿ ಹಾರೈಕೆಯನ್ನು ಸಂತಸದಿಂದಲೇ ಸ್ವೀಕರಿಸಿರುವ ಶಿವಣ್ಣ, ಕೃತಜ್ಞತೆ ಸಲ್ಲಿಸಿದ್ದಾರೆ. ಅದನ್ನೂ ಜಾಹೀರಾತುಗಳಲ್ಲಿ ಪ್ರಕಟಿಸಲಾಗಿದೆ.
'ನನ್ನ ಮೇಲೆ ಇಷ್ಟೊಂದು ಅಭಿಮಾನವಿಟ್ಟಿರುವ ಚಿರಂಜೀವಿಯವರಿಗೆ ನಾನು ಕೃತಜ್ಞ. ಕುಟುಂಬ ಪರಿವಾರ ಸಮೇತವಾಗಿ ನೋಡುವಂತಹ ಚಿತ್ರವಿದು. ಕ್ಲಾಸ್ ಮೂವಿಗೆ ಮಾಸ್ ಟಚ್ ಕೊಟ್ಟ ಆರ್. ಚಂದ್ರು, ನಿರ್ಮಾಪಕ ಶ್ರೀನಿವಾಸ್, ಶ್ರೀಕಾಂತ್ ಹಾಗೂ ಚಿತ್ರತಂಡಕ್ಕೆ ನನ್ನ ವಂದನೆ' ಎಂದು ಶಿವಣ್ಣ ಹೇಳಿದ್ದಾರೆ.
ಬದಲಾವಣೆ ನನಗೂ ಬೇಕಿತ್ತು... ಹೀಗೆಂದು ಹೇಳಿರುವುದು ಶಿವಣ್ಣ. ಸದಾ ಹೊಡೆಬಡಿ ಮತ್ತು ಹಳ್ಳಿ ಹುಡುಗನ ಪಾತ್ರಗಳಲ್ಲಿ ಕಾಣಿಸಿಕೊಂಡು ಏಕತಾನತೆ ಅನುಭವಿಸುತ್ತಿದ್ದೇನೆ. ಅವುಗಳಿಂದ ಹೊರ ಬರಲು ಮೈಲಾರಿಯಿಂದ ಸಾಧ್ಯವಾಗಿದೆ. ಖಂಡಿತಾ ಇದು ಅಭಿಮಾನಿಗಳಿಗೆ ಇಷ್ಟವಾಗಲಿದೆ ಎಂದಿದ್ದಾರೆ.
ಸದಾ, ಸಂಜನಾ ನಾಯಕಿಯರಾಗಿರುವ ಈ ಚಿತ್ರ ಡಿಸೆಂಬರ್ 24ರಂದು ಶುಕ್ರವಾರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಚಂದ್ರುವನ್ನು ನಂಬಿ ಸುಮಾರು ನಾಲ್ಕು ಕೋಟಿ ರೂಪಾಯಿ ಸುರಿದಿರುವುದು ಕೆ.ಪಿ. ಶ್ರೀಕಾಂತ್.
ಬೇರೆಬೇರೆ ಲುಕ್‌ಗಳು ಪ್ರೇಕ್ಷಕರನ್ನು ಆಕರ್ಷಿಸುತ್ತವೆ. ಆದರೆ ಈ ಗೆಟಪ್‌ಗಳ ಕಾರಣದಿಂದಲೇ ಚಿತ್ರ ಓಡುತ್ತದೆ ಎಂದು ಅರ್ಥವಲ್ಲ. ಇಲ್ಲಿ ಚಿತ್ರಕಥೆಯ ಅಂಶವೂ ಪ್ರಮುಖವಾಗಿರುತ್ತದೆ. ಆ ನಿಟ್ಟಿನಲ್ಲಿ ಚಂದ್ರು ಅವಿರತ ಶ್ರಮವಹಿಸಿ ಭಿನ್ನ ನಿರೂಪನೆ ಮಾಡಿದ್ದಾರೆ. ಹಿಟ್ ಆಗುವ ಭರವಸೆ ನನ್ನಲ್ಲಿದೆ ಎಂದಿದ್ದಾರೆ ಶಿವಣ್ಣ.
ಡ್ಯಾನ್ಸ್ ವಿಚಾರದಲ್ಲಿ ಶಿವಣ್ಣ ಯಾವತ್ತೂ ಹಿಂದೆ ಬಿದ್ದವರಲ್ಲ. ಆದರೆ ಮೈಲಾರಿಯಲ್ಲಿ ಕೆಲವು ಹೊಸ ಸ್ಟೆಪ್ಪುಗಳನ್ನು ಹ್ಯಾಟ್ರಿಕ್ ಹೀರೋ ಪರಿಚಯಿಸಿದ್ದಾರೆ. ತೆಲುಗು ಚಿತ್ರಗಳಲ್ಲಿ ಅಲ್ಲು ಅರ್ಜುನ್ ನರ್ತಿಸಿದಂತಹ ಕೆಲವು ವಿಶಿಷ್ಟ ಹೆಜ್ಜೆಗಳನ್ನು ಹಾಕಿದ್ದೇನೆ. ಈ ಎಲ್ಲಾ ಬದಲಾವಣೆಗಳಿಗೂ ಕಾರಣ ಕ್ರಿಯಾಶೀಲ ನಿರ್ದೇಶಕ ಚಂದ್ರು. ಇನ್ನಷ್ಟು ಚಿತ್ರಗಳನ್ನು ಅವರ ಜತೆ ಮಾಡಬೇಕೆನ್ನುವುದು ನನ್ನ ಆಸೆ. ಈ ಚಿತ್ರದಲ್ಲಿ ನಾನು ಹೊಸ ಹೀರೋ ರೀತಿಯಾಗಿ ಬರುತ್ತಿದ್ದೇನೆ ಎನ್ನುವ ಅಪಾರ ವಿಶ್ವಾಸ ಅವರಲ್ಲಿದೆ.
ಬೇರೆ ಭಾಷೆಗಳಿಗೆ ಹೋಗಲ್ಲ... ಸುದೀಪ್, ಉಪೇಂದ್ರ ಅವರಂತೆ ಶಿವಣ್ಣ ಕೂಡ ದಕ್ಷಿಣ ಭಾರತದ ಇತರ ಭಾಷೆಗಳ ಚಿತ್ರರಂಗಕ್ಕೆ ಹೋಗುವ ಆಲೋಚನೆ ಇದೆಯೇ ಎಂಬ ಪ್ರಶ್ನೆಗೆ, ನನಗೆ ಇತರೆಡೆಯಿಂದ ಆಹ್ವಾನಗಳು ಹಲವು ಬಂದಿವೆ. ಆದರೆ ನನಗೆ ಇಲ್ಲಿ ಮಾಡಲು ಸಾಕಷ್ಟು ಕೆಲಸವಿರುವುದರಿಂದ ಬೇರೆಡೆಗೆ ಹೋಗುವ ಪ್ರಶ್ನೆ ನನ್ನ ಮುಂದಿಲ್ಲ. ಹಾಗಾಗಿ ಎಲ್ಲೂ ಹೋಗುತ್ತಿಲ್ಲ ಎಂದಿದ್ದಾರೆ.
ಹಾಗೆಂದು ನಾನು ಕೇವಲ ನಟನಾಗಿಯೇ ಉಳಿಯುತ್ತೇನೆ ಎಂದುಕೊಳ್ಳಬೇಡಿ. ನನಗೂ ಸಿನಿಮಾ ನಿರ್ದೇಶಿಸುವ ಆಸೆಯಿದೆ. ಅದಕ್ಕೆ ಇನ್ನೂ ಒಂದಷ್ಟು ಸಮಯ ಬೇಕಾಗಿದೆ. ಒಂದಲ್ಲ ಒಂದು ದಿನ ನಿರ್ದೇಶನ ಮಾಡುತ್ತೇನೆ ಎನ್ನುವ ಶಿವಣ್ಣನಿಗೆ, ಅವರಿಂದಾಗಿ ನಿರ್ಮಾಪಕರು ನಷ್ಟ ಅನುಭವಿಸಿದ್ದಾರೆ ಎಂಬ ಮಾತುಗಳು ತೀವ್ರ ಅಸಮಾಧಾನಕ್ಕೆ ಕಾರಣವಾಗಿವೆ.
ಹಾಗೆ ನಾನೊಬ್ಬ ಫ್ಲಾಪ್ ಹೀರೋ ಆಗಿದ್ದಿದ್ದರೆ, ನಿರ್ಮಾಪಕರು ನನ್ನ ಬಳಿ ಬರುತ್ತಿರಲಿಲ್ಲ. ನನ್ನಿಂದಾಗಿ ಯಾವುದೇ ನಿರ್ಮಾಪಕರು ನಷ್ಟ ಅನುಭವಿಸಿಲ್ಲ. ನಿರ್ಮಾಪಕರು ಮತ್ತೆ ಮತ್ತೆ ನನ್ನ ಬಳಿಗೆ ಬರುತ್ತಿದ್ದಾರೆಯೇ ಹೊರತು, ದೂರ ಸರಿಯುತ್ತಿಲ್ಲ ಎಂದು ಎದೆ ತಟ್ಟಿ ಹೇಳುತ್ತಿದ್ದಾರೆ.