ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಸೂಪರ್' ಕದ್ದ ಕತೆ; ಉಪೇಂದ್ರ ಮೇಲೆ ಗಂಭೀರ ಆರೋಪ (Upendra | Super | Rajshekar | KANFIDA)
ಸುದ್ದಿ/ಗಾಸಿಪ್
Bookmark and Share Feedback Print
 
'ಸೂಪರ್' ಚಿತ್ರದ ಮೂಲಕ ತನ್ನ ಸೂಪರ್ ನಿರ್ದೇಶನವನ್ನು ತೋರಿಸಿದ್ದ ಉಪೇಂದ್ರ, ಚಿತ್ರಕ್ಕಾಗಿ ಬಳಸಿದ ಕಥೆ ಕಳ್ಳತನ ಮಾಡಿದ್ದೇ? ಅಂತಹ ಶಂಕೆಯೊಂದು ಈಗ ಮೂಡಿರುವುದು ನಿರ್ದೇಶಕರೊಬ್ಬರು ತಗಾದೆ ಎಬ್ಬಿಸಿರುವುದರಿಂದ.

'ಸೂಪರ್' ಚಿತ್ರದ ಕಥೆ ನನ್ನದು ಎಂದು ನಿರ್ದೇಶಕ ರಾಜಶೇಖರ್ ಎಂಬವರು ಹೇಳಿಕೊಂಡು ರಾದ್ದಾಂತ ಎಬ್ಬಿಸುವುದರೊಂದಿಗೆ ಹತ್ತು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ ರಿಯಲ್ ಸ್ಟಾರ್ ಉಪೇಂದ್ರ ವಿವಾದಕ್ಕೆ ಸಿಲುಕಿದ್ದಾರೆ.

ನನ್ನ ಕಥೆಯನ್ನು ಕದ್ದು ಉಪೇಂದ್ರ ಸೂಪರ್ ಎಂಬ ಚಿತ್ರವನ್ನು ಮಾಡಿದ್ದಾರೆ. ನನ್ನ ಅನುಮತಿಯಿಲ್ಲದೆ ಕಥೆಯನ್ನು ಬಳಸಿದ್ದಾರೆ ಎಂದು ಆರೋಪಿಸಿರುವ ರಾಜಶೇಖರ್, ಉಪೇಂದ್ರ ಮನೆಯೆದುರೇ ಬಂದು ಗಲಾಟೆ ಎಬ್ಬಿಸಿದ್ದಾರೆ. ಇವರಿಗೆ ಕರ್ನಾಟಕ ಚಿತ್ರ ನಿರ್ದೇಶಕರ ಸಂಘ ಮತ್ತು ಬರಹಗಾರರ ಸಂಘಟನೆಯ ಕೆಲವು ಅಧಿಕಾರಿಗಳು ಕೂಡ ಬೆಂಬಲ ನೀಡಿದ್ದಾರೆ.

ಆರೋಪಗಳನ್ನು ಸ್ವತಃ ಉಪೇಂದ್ರ ತಳ್ಳಿ ಹಾಕಿದ್ದಾರೆ. ಸೂಪರ್ ಚಿತ್ರದ ಕಥೆ ನನ್ನದೇ. ನಾನು ಇತರರ ಕಥೆಯನ್ನು ಕಾಪಿ ಮಾಡಿಲ್ಲ. ನಿಮ್ಮ ಕಥೆಯನ್ನು ನಾನು ಸೂಪರ್ ಚಿತ್ರದಲ್ಲಿ ಬಳಸಿಕೊಂಡಿದ್ದೇನೆ ಎಂಬ ಕುರಿತು ಪುರಾವೆಗಳಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಸವಾಲು ಹಾಕಿದ್ದಾರೆ.
PR

ನಿರ್ದೇಶಕ ರಾಜಶೇಖರ್ ಅವರ ಸಹಾಯಕರಾಗಿರುವ ಬಾಹುಬಲಿಯವರ ಪ್ರಕಾರ, ಕೆಲ ವರ್ಷಗಳ ಹಿಂದೆ ಉಪ್ಪಿಗೆ ಹೇಳಲಾಗಿದ್ದ ಕಥೆಯನ್ನು ಅವರು ಲಪಟಾಯಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ರಾಜಶೇಖರ್ ಅವರು ಕಥೆಯೊಂದನ್ನು ಉಪೇಂದ್ರ ಅವರಿಗೆ ಹೇಳಿದ್ದರು. ಆದರೆ ಸಂಭಾವನೆ ಮತ್ತು ಬಜೆಟ್ ವಿಚಾರದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈ ಬಿಡಲಾಗಿತ್ತು.

ಆದರೆ ಅದೇ ಕಥೆಯನ್ನು 'ಸೂಪರ್' ಚಿತ್ರಕ್ಕೆ ಅಳವಡಿಸಲಾಗಿದೆ. ಚಿತ್ರಕಥೆಯನ್ನು ಬದಲಾಯಿಸಲಾಗಿದೆ. ರಾಜಶೇಖರ್ ಅವರ ಕಥೆಯಲ್ಲಿ ಬದಲಾದ ಭಾರತದ ಕಥೆ 2020ಕ್ಕೆ ಎಂದಿತ್ತು. ಆದರೆ ಸೂಪರ್ ಚಿತ್ರದಲ್ಲಿ 2030 ಎಂದಿದೆ ಎಂದು ಬಾಹುಬಲಿ ಆರೋಪಿಸಿದ್ದಾರೆ.

ರಾಜಶೇಖರ್ ಅವರ ಕಥೆಗೆ ಇನ್ನೊಬ್ಬ ನಿರ್ದೇಶಕ ಕೆ.ವಿ. ರಾಜು ಚಿತ್ರಕಥೆ ಬರೆಯಬೇಕಿತ್ತು.

ಇಂತಹ ಆರೋಪಗಳಿಗೆ ಕರ್ನಾಟಕ ಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್ ಪ್ರತಿಕ್ರಿಯೆ ನೀಡಿರುವುದು ಹೀಗೆ.

ಸೂಪರ್ ಚಿತ್ರದ ಕಥೆ ಉಪೇಂದ್ರ ಅವರದ್ದಲ್ಲ ಎನ್ನುವ ಗಾಳಿಸುದ್ದಿಗಳು ಕೇಳಿ ಬಂದಿವೆ. ಆದರೆ ಈ ಬಗ್ಗೆ ಯಾರೊಬ್ಬರೂ ಲಿಖಿತ ದೂರು ನೀಡಿಲ್ಲ. ನಾವು ಕ್ರಮ ಕೈಗೊಳ್ಳಬೇಕೆಂದರೆ ನಮಗೆ ಲಿಖಿತ ದೂರಿನ ಅಗತ್ಯವಿದೆ. ಅವರು ತಮ್ಮ ಕಥೆಯ ಹಕ್ಕುಗಳನ್ನು ಪುರಾವೆಯಾಗಿ ತೋರಿಸಬೇಕಾದ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಇನ್ನೊಬ್ಬ ವ್ಯಕ್ತಿ ಕೂಡ, ಸೂಪರ್ ಚಿತ್ರದ ಕಥೆ ನನ್ನದು ಎಂದು ಟಿವಿ ಚಾನೆಲ್‌ಗಳಿಗೆ ಎಡತಾಕುತ್ತಿರುವ ವಿಚಾರ ಉಪ್ಪಿ ಕಿವಿಗೆ ಬಿದ್ದಿದೆ. ಚಿತ್ರವೊಂದು ಸೂಪರ್ ಹಿಟ್ ಆಗುತ್ತಿದ್ದಂತೆ ಇಂತಹ ಆರೋಪಗಳು ಬರುವುದು ಸಾಮಾನ್ಯ ಎಂದು ಅವರು ನಿರ್ಲಕ್ಷ್ಯದ ಉತ್ತರ ನೀಡಿ ಸುಮ್ಮನಾಗಿದ್ದಾರೆ.

ಇಂತಹ ವಿವಾದಗಳು ಹೊಸತಲ್ಲ...
ಸಾಮಾನ್ಯವಾಗಿ ಸಿನಿಮಾವೊಂದು ಭಾರೀ ಹಿಟ್ ಆದಂತಹ ಸಂದರ್ಭಗಳಲ್ಲಿ ಯಾರಾದರೊಬ್ಬರು, ಚಿತ್ರದ ಕಥೆ ನನ್ನದು ಎಂದು ಗುಲ್ಲೆಬ್ಬಿಸುವುದು ಇದೇ ಮೊದಲಲ್ಲ. ಸ್ವತಃ ಉಪೇಂದ್ರರಿಗೆ ಇಂತಹ ಅನುಭವಗಳು ಈ ಹಿಂದೆ ಆಗಿವೆ.

ಉಪ್ಪಿ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್-ಪ್ರೇಮಾ ಅಭಿನಯದ 'ಓಂ' ಚಿತ್ರ ತೆರೆ ಕಂಡ ನಂತರ ಪತ್ರಕರ್ತ ರವಿ ಬೆಳಗೆರೆ, ಆ ಚಿತ್ರದ ಕಥೆ ನನ್ನದು ಎಂದು ಹೇಳಿಕೊಂಡಿದ್ದರು.

ಇತ್ತೀಚೆಗಷ್ಟೇ ರಜನಿಕಾಂತ್ 'ಎಂದಿರನ್' ತೆರೆ ಕಂಡಾಗಲೂ ಇದೇ ರೀತಿ ಆಗಿತ್ತು. ಆ ಚಿತ್ರದ ಕಥೆ ನಿರ್ದೇಶಕ ಶಂಕರ್ ಅವರದ್ದಲ್ಲ, ಕಳ್ಳತನದ ಮಾಲು ಎಂದು ಆರೋಪ ಮಾಡಲಾಗಿತ್ತು.

ಇಂತಹ ಆರೋಪಗಳ ಹಿಂದೆ ಮೇಲ್ನೋಟಕ್ಕೆ ಕಾಣುವುದು ಪ್ರಚಾರದ ಹಂಬಲ. ಆದರೂ ಸಂಬಂಧಪಟ್ಟವರು ದೂರು ನೀಡಿ ತಮ್ಮ ಕಥೆಯೇ ಮೂಲ ಎಂದು ಸಾಬೀತುಪಡಿಸಿದರೆ ಮಾತ್ರ ಆರೋಪಗಳಲ್ಲಿ ಹುರುಳಿವೆ ಎಂದು ನಂಬಬಹುದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉಪೇಂದ್ರ, ಸೂಪರ್, ರಾಜಶೇಖರ್, ಬಾಹುಬಲಿ, ಕೆವಿ ರಾಜು, ಬಾಹುಬಲಿ