ಸಾಹಸಸಿಂಹ ವಿಷ್ಣುವರ್ಧನ್ ಕೊನೆಯ ಚಿತ್ರ 'ಆಪ್ತರಕ್ಷಕ' ತೆಲುಗಿನಲ್ಲಿ 'ನಾಗವಲ್ಲಿ'ಯಾಗಿ ರಿಮೇಕ್ ಆಗಿರುವುದು ಗೊತ್ತೇ ಇದೆ. ಈ ಚಿತ್ರವೀಗ ತಮಿಳಿನಲ್ಲೂ ತಯಾರಾಗುವ ಲಕ್ಷಣಗಳು ಕಾಣಸಿಕೊಂಡಿವೆ.
'ಆಪ್ತಮಿತ್ರ'ದ ತಮಿಳು ಆವೃತ್ತಿ 'ಚಂದ್ರಮುಖಿ'ಯಲ್ಲಿ ನಾಯಕನಾಗಿದ್ದ ಸ್ಟೈಲ್‌ಕಿಂಗ್ ರಜನಿಕಾಂತ್ ಅವರು, ವಿಷ್ಣು ಅಗಲಿದ ಹೊತ್ತಿನಲ್ಲಿ ಹುಟ್ಟಿಕೊಂಡಿದ್ದ ಭೀತಿಯ ಮಾತುಗಳಿಂದಾಗಿ ಅದರ ಎರಡನೇ ಭಾಗದಲ್ಲಿ ನಟಿಸಲು ನಿರಾಕರಿಸಿದ್ದರು. ಆದರೆ ಅದನ್ನು ಅಜಿತ್ ಕುಮಾರ್ ಮಾಡಲಿದ್ದಾರೆ ಎಂಬ ಸುದ್ದಿಗಳು ಬಂದಿವೆ.
MOKSHA
ಆಪ್ತಮಿತ್ರ, ಆಪ್ತರಕ್ಷಕ, ಚಂದ್ರಮುಖಿ ಮತ್ತು ನಾಗವಲ್ಲಿ ಚಿತ್ರಗಳನ್ನು ನಿರ್ದೇಶಿಸಿರುವ ಪಿ. ವಾಸು ಅವರೇ ತಮಿಳಿನಲ್ಲೂ ನಿರ್ದೇಶಿಸಲಿದ್ದಾರೆ. ಈ ಸಂಬಂಧ ಮಾತುಕತೆಗಳು ನಡೆಯುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಮಾಹಿತಿ ಹೊರ ಬೀಳುವ ಸಾಧ್ಯತೆಗಳಿವೆ.
ವಿಕ್ಟರಿ ವೆಂಕಟೇಶ್ ನಾಯಕನಾಗಿರುವ 'ನಾಗವಲ್ಲಿ' ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿ, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದು ಬಾಕ್ಸಾಫೀಸಿನ ಗಳಿಕೆ ಮೇಲೆ ಪರಿಣಾಮವನ್ನೂ ಬೀರಿಲ್ಲ. ಸೂಪರ್ ಹಿಟ್ ಆಗುವುದು ಬಹುತೇಕ ಖಚಿತ.
30 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿದ್ದ ಇದರಲ್ಲಿ ಕನ್ನಡಿಗರೇ ಆಗಿರುವ ಅನೂಷ್ಕಾ ಶೆಟ್ಟಿ, ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಗುರುಕಿರಣ್ ಸಂಗೀತ ನೀಡಿದ್ದರು.
ತಮಿಳಿನಲ್ಲಿ ಆಪ್ತಮಿತ್ರದ ರಿಮೇಕ್ ಚಂದ್ರಮುಖಿ 2005ರಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಹಾಗಾಗಿ ಅದರ ಮುಂದುವರಿದ ಭಾಗ ಆಪ್ತರಕ್ಷಕ ಲಾಭ ತಂದುಕೊಡಬಹುದು ಎನ್ನುವುದು ನಿರ್ದೇಶಕರ ಲೆಕ್ಕಾಚಾರ.
ಇದೇ ನಿಟ್ಟಿನಲ್ಲಿ ನಾಗವಲ್ಲಿಯ ವಿಶೇಷ ಪ್ರದರ್ಶನವನ್ನು ವಾಸು ತಮಿಳಿನ ದಿಗ್ಗಜರಿಗೆ ಏರ್ಪಡಿಸಿದ್ದಾರೆ. ರಜನಿಕಾಂತ್ ಸೇರಿದಂತೆ ಹಲವರು ಇದನ್ನು ನೋಡಲಿದ್ದಾರೆ. ಆದರೆ ರಜನಿ ರಿಮೇಕ್ ಚಿತ್ರದಲ್ಲಿ ನಟಿಸುವುದಿಲ್ಲ.
ವಿಷ್ಣುವರ್ಧನ್ ಅವರ ಅಕಾಲಿಕ ಮರಣ ಮತ್ತು ಆಪ್ತರಕ್ಷಕ ಚಿತ್ರಕ್ಕೆ ಸಂಬಂಧ ಕಲ್ಪಿಸಿದ್ದುದರಿಂದ, ರಜನಿ ಅದರಲ್ಲಿ ನಟಿಸಲು ನಿರಾಕರಿಸಿದ್ದಾರೆ. ರಜನಿಯೇ ಅಜಿತ್ ಅವರನ್ನು ಹಾಕಿಕೊಂಡು ಚಿತ್ರ ಮಾಡುವಂತೆ ನಿರ್ದೇಶಕ ವಾಸು ಅವರಿಗೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
1993ರ ಮಲಯಾಳಂ ಚಿತ್ರ 'ಮಣಿಚಿತ್ರತಾಳ್'ನ್ನು ವಾಸು ಕನ್ನಡಕ್ಕೆ ಆಪ್ತಮಿತ್ರ ಹೆಸರಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ರಿಮೇಕ್ ಮಾಡಿದ್ದರು. ಮೂಲ ಚಿತ್ರದಲ್ಲಿ ಮೋಹನ್‌ಲಾಲ್, ಸುರೇಶ್ ಗೋಪಿ ಮತ್ತು ಶೋಭನಾ ನಟಿಸಿದ್ದರು.
ಕನ್ನಡದಲ್ಲಿ ಆಪ್ತಮಿತ್ರ ಭಾರೀ ಯಶಸ್ಸು ಕಾಣುತ್ತಿದ್ದಂತೆ ಅದು ತಮಿಳಿಗೆ 'ಚಂದ್ರಮುಖಿ'ಯಾಗಿ, ಬೆಂಗಾಲಿಗೆ 'ರಾಜಮಹಲ್' ಹಾಗೂ ಹಿಂದಿಗೆ 'ಭೂಲ್ ಭುಲಯ್ಯಾ' ಆಗಿ ರಿಮೇಕ್ ಆಗಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು.