ಆದಿಚುಂಚನಗಿರಿ ಮಠಾಧೀಶರಾದ ಪದ್ಮಭೂಷಣ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಜೀವನ ಚರಿತ್ರೆ ಕುರಿತ ಚಿತ್ರ ತಯಾರಿಗೆ ಭಾರೀ ಸಿದ್ಧತೆ ನಡೆಯುತ್ತಿದೆ.
ಶಿರ್ಡಿ ಸಾಯಿಬಾಬಾ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಖ್ಯಾತರಾಗಿರುವ ಓಂ ಸಾಯಿಪ್ರಕಾಶ್ ಈ ಚಿತ್ರದ ನಿರ್ದೇಶಕರು. ಬಿ.ವಿ. ನರಸಿಂಹಯ್ಯ ಅವರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸ್ವಾಮೀಜಿಯವರ ಬಗ್ಗೆ ಅಪಾರ ಮಾಹಿತಿಯನ್ನು ಕಲೆಹಾಕಲಾಗಿದೆ. ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದೆ.
PR
ಈ ಚಿತ್ರಕ್ಕೆ ಬಾಲಗಂಗಾಧರನಾಥ ಸ್ವಾಮೀಜಿಯವರು ಸಕಲ ಸಹಕಾರ ನೀಡಿದ್ದಾರೆ. ದೇಶ-ವಿದೇಶಗಳಲ್ಲಿರುವ ಭಕ್ತಾದಿಗಳ ಮನಸ್ಸಿಗೆ ನೋವಾಗದಂತೆ ಎಚ್ಚರ ವಹಿಸಿ ಉತ್ತಮವಾಗಿ ತೆರೆಗೆ ತನ್ನಿ ಎಂದು ಸ್ವಾಮೀಜಿ ಸಲಹೆ ನೀಡಿದ್ದಾರಂತೆ.
ಸ್ವಾಮೀಜಿಯವರ ಜೀವನ ಚರಿತ್ರೆಯ ಸಿನಿಮಾ ಮಾಡುತ್ತಿರುವುದು ನನ್ನ ಪುಣ್ಯ, ಜೀವನದ ಸಾರ್ಥಕ ಕ್ಷಣ. ಅವರ ಸೇವಾ ಭಾವನೆ, ಚಾರಿತ್ರಿಕ, ಪೌರಾಣಿಕ, ಜಾನಪದ ಹಿನ್ನೆಲೆಯನ್ನು ಚಿತ್ರದಲ್ಲಿ ತೋರಿಸಲಾಗುವುದು ಎಂದು ಸಾಯಿಪ್ರಕಾಶ್ ಹೇಳಿದ್ದಾರೆ.
ಚಿತ್ರದಲ್ಲಿ ಹಿರಿಯ ನಟ ಅಂಬರೀಶ್ ಸೇರಿದಂತೆ, ಮತ್ತಿತರ ಹಿರಿಯ ನಟ-ನಟಿಯರನ್ನು ಅಭಿನಯಿಸುವಂತೆ ಕೇಳಿಕೊಳ್ಳಲಾಗುತ್ತದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.