ದಶಕದ ಹಿಂದೆ ಬಂದಿದ್ದ 'ಪೊಲೀಸ್ ಸ್ಟೋರಿ' ಸಾಕಷ್ಟು ಹೆಸರು ಗಳಿಸಿತ್ತು. ಸಾಯಿಕುಮಾರ್ ಅವರ ಅಭಿನಯ, ಅವರು ಗಂಟಲು ಹರಿದುಕೊಂಡು ಸಂಭಾಷಣೆ ಒಪ್ಪಿಸುತ್ತಿದ್ದ ವೈಖರಿ ಪ್ರೇಕ್ಷಕರನ್ನು ಮರುಳು ಮಾಡಿತ್ತು.
ಅಲ್ಲಿ ಹೊಸತನಕ್ಕೆ ಸಾಕಷ್ಟು ಅವಕಾಶವೂ ಇತ್ತು. ಅದೇ ವರಸೆಯಲ್ಲಿ ಐದಾರು ವರ್ಷಗಳ ನಂತರ 'ಪೊಲೀಸ್ ಸ್ಟೋರಿ ಭಾಗ-2' ಬಂತು. ಆದರೆ ಭಾಗ ಒಂದರಷ್ಟು ಕ್ರೇಜ್ ಉಳಿಸಿಕೊಳ್ಳುವಲ್ಲಿ ಅದು ಸಫಲವಾಗಲಿಲ್ಲ. ಪರಿಣಾಮವಾಗಿ 'ಪೊಲೀಸ್ ಸ್ಟೋರಿ ಭಾಗ-2' ಸೋತಿತು.
ಈಗ ಅದೇ ತಂಡ 'ಪೊಲೀಸ್ ಸ್ಟೋರಿ ಭಾಗ-3' ತೆಗೆಯಲು ಸಜ್ಜಾಗಿದೆ. ಆದರೆ ಕೊಂಚ ಬದಲಾವಣೆ ಆಗಿದೆ. ನಾಯಕ ಸಾಯಿಕುಮಾರ್ ಅವರ ಬದಲಿಗೆ ಸುದೀಪ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ತಂತ್ರಜ್ಞಾನ ಬಳಗ ಹಾಗೇ ಉಳಿದುಕೊಳ್ಳಲಿದೆ.
'ಕೆಂಪೇಗೌಡ' ಚಿತ್ರದ ನಂತರ ಸುದೀಪ್ ಅವರನ್ನು ಹೆಚ್ಚು ಹೆಚ್ಚು ಪೊಲೀಸ್ ಪಾತ್ರಗಳೇ ಹುಡುಕಿಕೊಂಡು ಬರುತ್ತಿವೆ. ಇನ್ನೀಗ 'ಪೊಲೀಸ್ ಸ್ಟೋರಿ ಭಾಗ-3' ಯಾವ ರೀತಿ ಕಮಾಲ್ ಮಾಡಲಿದೆ ಎಂಬುದನ್ನು ಕಾದುನೋಡಬೇಕು.