ಬೆಂಗಳೂರಿನ ಅರಮನೆ ಆವರಣದಲ್ಲಿ ಜೂನ್ ಆರರಂದು ಸೋಮವಾರ ಕೇವಲ ಹನ್ನೆರಡು ತಾಸುಗಳಲ್ಲೇ ಚಿತ್ರೀಕರಣ ಮುಗಿಸಿ ಹೊಸ ಗಿನ್ನಿಸ್ ಮತ್ತು ಲಿಮ್ಕಾ ದಾಖಲೆ ಬರೆಯಲು ಹೊರಟ 'ಪೊಲೀಸ್ ಸ್ಟೋರಿ-3' ಚಿತ್ರತಂಡ ಹನ್ನೆರಡು ಗಂಟೆಗೆ ಇನ್ನೂ 8 ನಿಮಿಷಗಳು ಬಾಕಿ ಇರುವಂತೆಯೇ ಚಿತ್ರೀಕರಣವನ್ನು ಪೂರ್ತಿಗೊಳಿಸಿ ಕುಂಬಳಕಾಯಿ ಒಡೆದು ಸಂಭ್ರಮಿಸಿತು.
ಅವಧಿಯೊಳಗೆ ಚಿತ್ರವನ್ನು ಮುಗಿಸಬೇಕೆಂಬ ಒತ್ತಡದಲ್ಲಿದ್ದ ನಿರ್ದೇಶಕರು, ಛಾಯಾಗ್ರಾಹಕರು, ಕಲಾವಿದರು ಮತ್ತು ಅಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಮಂದಿ ಕಾರ್ಮಿಕರು ಒಂದು ನಿಮಿಷ ಕೂಡಾ ಕಾಲಹರಣ ಮಾಡದೆ ನಿಗದಿತ ಗುರಿ ತಲುಪಲು ನಡೆಸಿದ ಅವಿರತ ಶ್ರಮ ಸಫಲವಾಯಿತು.
'ಪೊಲೀಸ್ ಸ್ಟೋರಿ-3' ಚಿತ್ರಕ್ಕೆ ಒಟ್ಟು ಆರು ಮಂದಿ ನಿರ್ದೇಶಕರು, ಆರು ಮಂದಿ ಛಾಯಾಗ್ರಾಹಕರು, ಸುಮಾರು 80 ಮಂದಿ ಕಲಾವಿದರು ಹಾಗೂ 650ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಕಾರ್ಯ ನಿರ್ವಹಿಸಿದರು. ಹದಿನೈದು ಕ್ಯಾಮರಾಗಳು, ಐದು ಜಿಮ್ಮಿ ಜಿಪ್‌ಗಳು ಹಾಗೂ ಆರು ಯೂನಿಟ್‌ಗಳನ್ನಿಟ್ಟುಕೊಂಡು ಚಿತ್ರೀಕರಣವನ್ನು ಪೂರ್ಣಗೊಳಿಸಲಾಯಿತು.
ಸಾಧು ಕೋಕಿಲ ನಿರ್ದೇಶನದ ಜೊತೆಗೆ ಅಭಿನಯವನ್ನೂ ಮಾಡಿದರು. ಅರಮನೆ ಆವರಣದ ಬೆಟ್ಟದ ತಪ್ಪಲಿನಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಸಾಧು ವಿಪರೀತ ಟೆನ್ಷನ್‌ನಲ್ಲಿದ್ದು ಮೈಕ್ ಹಿಡಿದು ಕೂಗಾಡುತ್ತಲೇ ಇದ್ದರು. ಅವರ ಪ್ರಚಂಡ ವೇಗಕ್ಕನುಗುಣವಾಗಿ ಕಲಾವಿದರು ನಟಿಸಿದ್ದು ವಿಶೇಷವೆನ್ನಬೇಕು.
ಛಾಯಾಗ್ರಾಹಕ ಕೃಷ್ಣಕುಮಾರ್ ಬಹಳ ವಿಶ್ವಾಸದಿಂದಲೇ ಕ್ಯಾಮರಾವನ್ನು ಅತ್ತಿಂದಿತ್ತ ಓಡಾಡಿಸುತ್ತಲೇ ಇದ್ದರು. ಇವರೆದುರು ನಾಯಕ ಕಿಚ್ಚ ಸುದೀಪ್, ಖಳನಟ ಮನೋಜ್ ಸೇರಿದಂತೆ ಇತರ ವಿಲನ್ ಪಾತ್ರಧಾರಿಗಳು ಅಭಿನಯಿಸಿದರು.
ಸಪೋಟ ಗಾರ್ಡನ್‌ನಲ್ಲಿ ಐಟಂ ಸಾಂಗ್ ಮತ್ತು ಅರಮನೆ ಆವರಣದ ಮುಂಭಾಗದಲ್ಲಿ ಡ್ಯುಯೆಟ್ ಸಾಂಗ್ ಚಿತ್ರೀಕರಣವೂ ಇದೇ ವೇಳೆ ನಡೆಯಿತು.
ಇನ್ನೊಂದು ಕಡೆ ಹೊಡೆದಾಟದ ದೃಶ್ಯಗಳನ್ನು ನಿರ್ದೇಶಿಸುತ್ತಿದ್ದ ಯುವ ನಿರ್ದೇಶಕ ಲಕ್ಕಿ ಶಂಕರ್ ಯುವ ನಟರನ್ನೆಲ್ಲಾ ಒಂದೆಡೆ ಕಲೆ ಹಾಕಿ ಎಲ್ಲ ದೃಶ್ಯಗಳನ್ನು ತರಾತುರಿಯಲ್ಲೇ ಚಿತ್ರೀಕರಿಸುತ್ತಿದ್ದರು. ಬುಲೆಟ್ ಪ್ರಕಾಶ್, ವಿಜಯ ಸಾರಥಿ, ಶಂಕರ್ ಭಟ್ ಒಂದೊಂದೇ ಟೇಕ್‌ನಲ್ಲಿ ತಮ್ಮ ಡೈಲಾಗ್ ಡೆಲಿವರಿ ಮಾಡಿದರು.
ಮಧ್ಯಾಹ್ನದ ವೇಳೆ ಮಳೆ ಸುರಿದು ಚಿತ್ರತಂಡವನ್ನು ಆತಂಕಕ್ಕೀಡು ಮಾಡಿತಾದರೂ ಮಳೆ ನಿಂತ ತಕ್ಷಣವೇ ಚಿತ್ರೀಕರಣವನ್ನು ಮುಂದುವರಿಸಲಾಯಿತು. ಕೊನೆಯ ಕ್ಲೈಮ್ಯಾಕ್ಸ್ ಆಕ್ಷನ್ ಸನ್ನಿವೇಶವನ್ನು ಥ್ರಿಲ್ಲರ್ ಮಂಜು ಕೇವಲ ಹದಿನೈದು ನಿಮಿಷಗಳಲ್ಲೇ ಮುಗಿಸಿದರು. ಮುಂಜಾನೆ 6 ಗಂಟೆಗೆ ಆರಂಭವಾದ ಚಿತ್ರೀಕರಣ ಸಂಜೆ ಗಂಟೆ 5.52ಕ್ಕೆ ಮುಕ್ತಾಯಗೊಂಡಿತು.