ಪ್ರೀತಿಯ ಮಹಾಪೂರ, ಕಣ್ಣಲ್ಲಿ ನೀರು ತರಿಸುವ ಸೆಂಟಿಮೆಂಟ್, ಮಧುರವಾದ ಹಾಡುಗಳು, ಉತ್ತಮ ಎನ್ನಬಲ್ಲ ಸಂಗೀತ, ಹಾಡಿಗೆ ತಕ್ಕನಾಗಿ ಹೆಜ್ಜೆ ಹಾಕುವುದನ್ನು ನೋಡಿದಾಗ ಜೊತೆಗಾರ ಓಕೆ. ಒಂದು ಕೌಟುಂಬಿಕ ಚಿತ್ರವಾಗಿ ಇದು ಗೆಲ್ಲುವಲ್ಲಿ ಸಂಶಯವಿಲ್ಲ.
ಮಾಸ್ ಪ್ರೇಕ್ಷಕರನ್ನು ಇದು ಸಂಪೂರ್ಣ ಹೊರಗಿಟ್ಟು ಮಾಡಿದ ಚಿತ್ರ. ಗಟ್ಟಿಯಾಗಿ ಒಂದು ಹೊಡೆದಾಟವಿಲ್ಲ, ಗದರಿಸುವ ಮಾತಿಲ್ಲ, ರೋಷ ದ್ವೇಷ ವಿಪರೀತ ಕಡಿಮೆ. ಒಂದು ರೀತಿ ಶಾಂತ ಕಡಲಿನಂತೆ ಈ ಚಿತ್ರವಿದೆ. ಪ್ರೀತಿಸಿದ, ಪ್ರೀತಿಸುವ ಹಾಗೂ ಪ್ರೀತಿಸಲು ಅಣಿಯಾಗುತ್ತಿರುವವರು ನೋಡಬಹುದಾದ ಚಿತ್ರ.
ಬಹಳ ನಿರೀಕ್ಷೆ ಇರಿಸಿಕೊಂಡು ಹೋದರೆ ಖಂಡಿತ ಮೋಸ ಆಗುತ್ತದೆ. ಎರಡೂವರೆ ಗಂಟೆ ಬೇರೆ ಕಡೆ ಕೂರಲು ಮನಸ್ಸಿಲ್ಲ. ಚಿತ್ರ ಮಂದಿರಕ್ಕೆ ಹಣ ಕೊಟ್ಟು ಬಂದಿದ್ದೇನೆ ಎನ್ನುವವರಿಗೆ ಅಷ್ಟು ಹೊತ್ತು ಮನರಂಜನೆ ನೀಡುವ ಎಲ್ಲಾ ಸಾಮರ್ಥ್ಯ ಚಿತ್ರಕ್ಕಿದೆ. ಸೀಟಿನಿಂದ ಕದಲದಂತೆ ಕೂರಿಸುವ ಸಾಮರ್ಥ್ಯ ಈ ಚಿತ್ರಕ್ಕಿರುವ ಕಾರಣ ಹೆಚ್ಚಿನ ಹೊಗಳಿಕೆ ಅಗತ್ಯವಿಲ್ಲ ಅಂತನಿಸುತ್ತದೆ.
ರಮ್ಯಾ- ಪ್ರೇಮ್ ಒಂದು ಯಸಸ್ವಿ ಜೋಡಿ ಅನ್ನುವುದನ್ನು ಈ ಚಿತ್ರದ ಮೂಲಕವೂ ತೋರಿಸಿಕೊಟ್ಟಿದ್ದಾರೆ. ಚಿತ್ರದ ತುಂಬಾ ಇಡಿ ಇಡಿಯಾಗಿ ಮಿಂಚಿದ್ದಾರೆ. ನಿರ್ದೇಶಕ ಸಿಗಮಣಿ ಕಾರ್ಯ ಇಲ್ಲಿ ಅತ್ಯುತ್ತಮವಾಗಿದೆ. ಕಿತ್ತಾಡುತ್ತಾ, ಸದಾ ಒಂದಾಗುವ ಯುವ ಪ್ರೇಮಿಗಳನ್ನು ಇವರು ಚಿತ್ರದಲ್ಲಿ ಉತ್ತಮವಾಗಿ ಬಿಂಬಿಸಿದ್ದಾರೆ. ಪ್ರೇಮ್ ಎಂಬ ನಟನನ್ನು ಇವರು ಇನ್ನಷ್ಟು ಪ್ರೇಮಿಯಾಗಿಯೇ ಕಾಣುವಂತೆ ಮಾಡಿ ಗೆದ್ದಿದ್ದಾರೆ.
ನಂಜುಂಡ ಅವರ ಸಂಭಾಷಣೆ ಸಹ ಉತ್ತಮವಾಗಿದೆ. ಸೆಂಟಿಮೆಂಟ್ ಹಾಗೂ ಪ್ರೀತಿಯ ಸನ್ನಿವೇಶದಲ್ಲಿ ಇವರು ತಮ್ಮ ಕೆಲಸ ಮೆರೆದಿದ್ದಾರೆ. ಆಶಿಷ್ ವಿದ್ಯಾರ್ಥಿ ಕೊಂಚ ಅತಿರೇಕ ಅನ್ನಿಸಿದರೆ ಅದರಲ್ಲಿ ನಿಮ್ಮ ತಪ್ಪಿಲ್ಲ. ಆದರೂ ರಮ್ಯಾ ತಂದೆ ಪಾತ್ರಕ್ಕೆ ಅಂಥ ರೋಲ್ ಅವಶ್ಯ ಅನ್ನಿಸುತ್ತದೆ. ಅದೇಕೋ ಜೂಲಿ ಲಕ್ಷ್ಮಿ ಅವರು ಚಿತ್ರದುದ್ದಕ್ಕೂ ಸಪ್ಪೆಯಾಗಿ ಗೋಚರಿಸುತ್ತಾರೆ. ಸುಧಾ ಬೆಳವಾಡಿ, ಪದ್ಮಜಾ ರಾವ್ ಮತ್ತೆ ಮಿಂಚಿದ್ದಾರೆ. ಸಾಧು ಕೋಕಿಲಾ, ದೊಡ್ಡಣ್ಣ ದ್ವಿತೀಯಾರ್ಧದಲ್ಲಿ ಸಾಕಷ್ಟು ನಗಿಸುತ್ತಾರೆ. ಸುಜಿತ್ ಶೆಟ್ಟಿ ಸಂಗೀತ ಕೇಳುವಂತಿದೆ. ಛಾಯಾಗ್ರಹಣಕ್ಕೆ ಆಯ್ಕೆ ಮಾಡಿಕೊಂಡ ತಾಣ ಉತ್ತಮವಾಗಿದೆ. ಒಟ್ಟಾರೆ ಚಿತ್ರ ಸಾಂಸಾರಿಕ ನೋಡುಗರಿಗೆ ಹಿಡಿಸುವಲ್ಲಿ ಸಂಶಯವಿಲ್ಲ.