ಚೆಲುವು ಒಲವಿನ ಆಗುಂಬೆಯ ನೋಡಬನ್ನಿ
|
|
|
webdunia
|
|
|
|
|
|
|
ದಕ್ಷಿಣದ ಚಿರಾಪುಂಜಿ ಎಂಬ ಖ್ಯಾತಿಹೊತ್ತಿರುವ ಆಗುಂಬೆ ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದು ಅತೀ ಹೆಚ್ಚು ಮಳೆ ಸುರಿಯುವ ಪ್ರದೇಶವಾಗಿದ್ದು ರಾಜ್ಯದ ''ಚಿರಾಪುಂಜಿ' ಎಂದು ಕರೆಸಿಕೊಂಡಿದೆ. ಈ ದಟ್ಟಾರಣ್ಯ ಚಾರಣಿಗರಿಗೆ ಆಪ್ಯಾಯಮಾನ.
ತೀರ್ಥಹಳ್ಳಿ ತಾಲೂಕಿನಲ್ಲಿರುವ ಹಸಿರು ಹೊದಿಕೆಯ ಈ ಬೆಟ್ಟ ಮಳೆಸಂಶೋಧನಾ ಕೇಂದ್ರವಾಗಿದ್ದು, ಇದು ರಾಷ್ಟ್ರದ ಏಕೈಕ ತಾಣವಾಗಿದೆ. ಆಗುಂಬೆ ಕಾಳಿಂಗ ಸರ್ಪಗಳ ನೆಲೆವೀಡೆಂದೂ ಕರೆಸಿಕೊಂಡಿದೆ. ಆಗುಂಬೆಯಲ್ಲಿ ಅಮೂಲ್ಯವಾದ ಗಿಡಮೂಲಿಕೆಗಳು ಇದ್ದು, ಇಲ್ಲಿನ ಪ್ರದೇಶವೊಂದನ್ನು, ಈ ಗಿಡಮೂಲಿಕೆಗಳ ರಕ್ಷಣೆಗಾಗಿ ರಕ್ಷಿತಾರಣ್ಯವೆಂದು ಪರಿಗಣಿಸಲಾಗಿದೆ.
ರಾಷ್ಟ್ರದಲ್ಲಿ ಚಿರಾಪುಂಜಿ ಬಿಟ್ಟರೆ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಆಗುಂಬೆ. ಇಲ್ಲಿ ವಾರ್ಷಿಕ 7,640 ಮಿಮೀಟರ್ ಮಳೆಯಾಗುತ್ತದೆ. 1946ರ ಆಗಸ್ಟ್‌ನ ಒಂದೇ ತಿಂಗಳಲ್ಲಿ 4508 ಮಿಲಿಮೀಟರ್ ಮಳೆ ದಾಖಲಾಗಿದೆ.ಪಶ್ಚಿಮಘಟ್ಟ ಮತ್ತು ಮಲೆನಾಡಿನ ಭಾಗವಾಗಿರುವ ಆಗುಂಬೆಯಲ್ಲಿ ಸೂರ್ಯಾಸ್ತವನ್ನು ನೋಡುವುದೇ ಒಂದು ಚಂದ.
ರೊಮುಲಸ್ ವೈಟೇಕರ್ ಎಂಬವರು ಇಲ್ಲಿ ಎಂಟು ಎಕರೆ ಜಾಗ ಖರೀದಿಸಿ ಕಾಳಿಂಗ ಸರ್ಪ ಸಂಶೋಧನಾ ಕೇಂದ್ರ. ವೈಟೇಕರ್ ಅವರು ತಮ್ಮ ತಾಯಿಯಿಂದ ಉಯಿಲಿನ ಮೂಲಕ ಬಂದ ಹಣದಿಂದ ವಿನಾಶದಂಚಿನಲ್ಲಿರುವ ಕಾಳಿಂಗ ಸರ್ಪಗಳ ಮೂಲಭೂತ ಜೈವಿಕತೆಯನ್ನು ಅಧ್ಯಯನ ಮಾಡುವ ಸಂಶೋಧನಾ ಕೇಂದ್ರವನ್ನು ಹುಟ್ಟುಹಾಕಿದ್ದು, ಇಲ್ಲಿ ವಿವಿಧ ರಂಗಳ ತಜ್ಞರನ್ನು ಸಂಶೋಧನೆಗಾಗಿ ಆಹ್ವಾನಿಸಲಾಗುತ್ತದೆ. ಕಾಳಿಂಗ ಸರ್ಪ ಅಭಯಧಾಮವನ್ನು ಸ್ಥಾಪಿಸಲು ಕರ್ನಾಟಕಕ್ಕೆ ನೆರವಾಗುವುದು ಅವರ ಉದ್ದೇಶ. ಅವರ ಈ ಸಂಶೋಧನಾ ಕೇಂದ್ರದ ಯತ್ನಕ್ಕಾಗಿ ವೈಟೇಕರ್ ಅವರಿಗೆ ಬ್ರಿಟನ್ನಿನ ಉನ್ನತ ಸಂಗೋಪನಾ ಪ್ರಶಸ್ತಿಯಾಗಿರುವ ವೈಟ್ಲೀ ಪ್ರಶಸ್ತಿ 2005ರಲ್ಲಿ ಲಭಿಸಿದೆ.
ಆರ್.ಕೆ. ನಾರಾಯಣ್ ಬರೆದಿರುವ ಮಾಲ್ಗುಡಿ ಡೇಸ್ ಆಧಾರದಲ್ಲಿ ಶಂಕರ್ ನಾಗ್ ನಿರ್ದೇಶಿಸಿದ್ದ ಮಾಲ್ಗುಡಿ ಡೇಸ್ ಧಾರಾವಾಹಿಯ ಕೆಲವು ಕಂತುಗಳು ಈ ಪರಿಸರದಲ್ಲಿ ಚಿತ್ರಿತವಾಗಿತ್ತು. 2004ರಲ್ಲಿ ಕವಿತಾ ಲಂಕೇಶ್ ನಿರ್ದೇಶನದಲ್ಲಿ ನಡೆದ ಮಾಲ್ಗುಡಿ ಡೇಸ್‌ನ ಹೊಸ ಕಂತುಗಳ ಚಿತ್ರೀಕರಣವೂ ಇದೇ ಪರಿಸರದಲ್ಲಿ ನಡೆದಿದೆ.
ಶಿವಮೊಗ್ಗದ ತೀರ್ಥಹಳ್ಳಿಯ ಎನ್ಎಚ್-13ರಲ್ಲಿ ಆಗುಂಬೆ ಬೆಟ್ಟವಿದೆ. 14 ಚೂಪಾದ ತಿರುವುಗಳನ್ನು ಹೊಂದಿರುವ ರಸ್ತೆಯ ಬದಿಯಲ್ಲಿ ಸೂರ್ಯಾಸ್ತಮಾನವನ್ನು ವೀಕ್ಷಿಸಲು ಅನುಕೂಲವಾಗುವಂತೆ ತಾಣಗಳನ್ನು ನಿರ್ಮಿಸಲಾಗಿದೆ. ಅರಬ್ಬೀ ಸಮುದ್ರದಲ್ಲಿ ಪ್ರತಿಫಲಿಸುವ ಸೂರ್ಯಾಸ್ತಮಾನದ ಮನಮೋಹಕ ದೃಶ್ಯವನ್ನು ಸವಿಯುವುದೇ ರೋಮಾಂಚನಕಾರಿ.
|
|
|
|