ದೂರವಾಣಿ ಗ್ರಾಹಕರಿಗೆ ಮೌಲ್ಯಾಧಾರಿತ ಸೇವೆಯನ್ನು ಒದಗಿಸುವ ವೇಳೆ ಕೆಲವೊಂದು ಗ್ರಾಹಕ ಹಿತಾಸಕ್ತಿಗಳನ್ನು ಪಾಲಿಸಬೇಕಿದೆ ಎಂದು ದೂರಸಂಪರ್ಕ ನಿಯಂತ್ರಣಾ ಸಂಸ್ಥೆ 'ಟ್ರಾಯ್' ಮಂಗಳವಾರ ದೂರವಾಣಿ ಸಂಸ್ಥೆಗಳಿಗೆ ನಿರ್ದೇಶನಗಳನ್ನು ನೀಡಿದೆ.
ಯಾವುದೇ ಮೌಲ್ಯಾಧಾರಿತ ಸೇವೆಯನ್ನು ಚಾಲ್ತಿಗೊಳಿಸುವ ಇಪ್ಪತ್ತನಾಲ್ಕು ತಾಸುಗಳ ಅವಧಿಯೊಳಗೆ ಗ್ರಾಹಕರಿಂದ ಎಸ್‌ಎಂಎಸ್, ಫ್ಯಾಕ್ಸ್ ಅಥವಾ ಲಿಖಿತ ರೂಪದಲ್ಲಿ ಸಮ್ಮತಿಯನ್ನು ಪಡೆದಿರಬೇಕಾಗುತ್ತದೆ ಎಂದು ದೂರವಾಣಿ ಸಂಸ್ಥೆಗಳಿಗೆ ಟ್ರಾಯ್ ನಿರ್ದೇಶಿಸಿದೆ.
ಮೌಲ್ಯಾಧಾರಿತ ಸೇವೆಗೆ ಗ್ರಾಹಕ ಸಮ್ಮತಿ ಸೂಚಿಸಿದ ನಂತರವಷ್ಟೇ ಸೇವೆಯನ್ನು ಅದಕ್ಕೆ ಶುಲ್ಕ ವಿಧಿಸಬೇಕು, ದೃಢೀಕರಣ ದೊರೆಯದಿದ್ದರೆ ಆ ಸೇವೆಯನ್ನು ನಿಲ್ಲಿಸಬೇಕು ಎಂದು ಟ್ರಾಯ್ ಸ್ಪಷ್ಟವಾಗಿ ಹೇಳಿದೆ.
ಅದಲ್ಲದೆ, ಆಯಾ ಸೇವೆಗಳ ಅಂತಿಮ ದಿನಾಂಕಕ್ಕಿಂತ ಮೂರು ದಿನಗಳ ಮೊದಲು ಎಸ್ಎಂಎಸ್ ಮೂಲಕ ಸೇವೆಯ ನವೀಕರಣ ಕುರಿತು ಗ್ರಾಹಕರಿಗೆ ತಿಳಿಯಪಡಿಸಬೇಕಾಗುತ್ತದೆ. ಒಂದು ವೇಳೆ ಚಂದಾದಾರಿಕೆಯ ನವೀಕರಣಕ್ಕಾಗಿ ಗ್ರಾಹಕನ ಪ್ರೀಪೇಯ್ಡ್ ಖಾತೆಯಲ್ಲಿ ತಕ್ಕಷ್ಟು ಮೌಲ್ಯವಿರದಿದ್ದರೆ, ಈ ಬಗ್ಗೆಯೂ ಗ್ರಾಹಕರಿಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಬೇಕು ಎಂದು ಅದು ಸೂಚಿಸಿದೆ.