ಇಂಟರ್ನೆಟ್ ಈಗ ಕಂಪ್ಯೂಟರ್‌ಗಳಿಗೆ ಸೀಮಿತವಾಗಿಲ್ಲ ಎಂಬುದು ತೀರಾ ಹಳೆ ಸುದ್ದಿ. ಆದರೆ ಕಂಪ್ಯೂಟರ್‌ನಲ್ಲಿ ನಿರ್ವಹಿಸಬಹುದಾದ ಬಹುತೇಕ ಇಂಟರ್ನೆಟ್ ಕಾರ್ಯಗಳನ್ನು ಮೊಬೈಲ್‌ಗಳ ಮೂಲಕವೇ ಮಾಡಿ ಮುಗಿಸಬಹುದು ಎಂಬುದರ ಕುರಿತು ಇಲ್ಲಿದೆ ಅಲ್ಪ ಮಾಹಿತಿ.
ಮೊಬೈಲ್‌ನಲ್ಲಿ ಏನೆಲ್ಲ ಸಾಧ್ಯ? ಏನು ಅಸಾಧ್ಯ ಎಂಬುದನ್ನು ಪ್ರಶ್ನಿಸುವ ಕಾಲ ದೂರವಿಲ್ಲ ಎನ್ನಬಹುದು. ಯಾವುದೇ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್ ಪರದೆಯಲ್ಲಿ ನೋಡುವ ರೀತಿಯಲ್ಲಿಯೇ ಮೊಬೈಲ್‌ನಲ್ಲೂ ನೋಡಲು ಸಾಧ್ಯ. ದುಬಾರಿಯೆನಿಸಿದರೂ ಹೋದಲ್ಲೆಲ್ಲ ನೋಡಬಹುದಾದ ಕಾರಣ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಇಂಟರ್ನೆಟ್ ಜನಪ್ರಿಯವಾಗುತ್ತಿದೆ.
PR
ಯಾವುದೇ ಸುದ್ದಿ ವೆಬ್‌ಸೈಟ್‌ಗಳು, ಇ-ಮೇಲ್‌ಗಳು, ವಿಕಿಪೀಡಿಯಾ, ಯೂಟ್ಯೂಬ್, ಸಾಮಾಜಿಕ ಸಂಪರ್ಕ ತಾಣಗಳು (ಆರ್ಕುಟ್, ಟ್ವಿಟ್ಟರ್, ಫೇಸ್‌ಬುಕ್, ಬಿಗ್ ಅಡ್ಡಾ ಇತ್ಯಾದಿ), ಶಾಪಿಂಗ್, ಬ್ಯಾಂಕಿಂಗ್, ಗೇಮ್ಸ್, ಸೇರಿದಂತೆ ಎಲ್ಲವನ್ನೂ ಮೊಬೈಲ್‌ನಲ್ಲೇ ವೀಕ್ಷಿಸಲು ಸಾಧ್ಯವಿದೆ.
ಬಹುತೇಕ ಹ್ಯಾಂಡ್‌ಸೆಟ್‌ಗಳಲ್ಲಿ ಯೂನಿಕೋಡ್ ಸೌಲಭ್ಯವಿರುವುದರಿಂದ ಕನ್ನಡ, ತಮಿಳು, ತೆಲುಗು, ಹಿಂದಿ ಮುಂತಾದ ಪ್ರಾಂತೀಯ ಭಾಷೆಗಳ ವೆಬ್ ತಾಣಗಳನ್ನೂ ನೋಡಬಹುದಾಗಿದೆ. ಅಲ್ಲದೆ ಕನ್ನಡದಲ್ಲೇ ಇ-ಮೇಲ್ ಮಾಡುವ ವ್ಯವಸ್ಥೆಯನ್ನೂ ಮೊಬೈಲ್‌ಗಳು ಹೊಂದಿವೆ.
ಜಿಪಿಆರ್ಎಸ್ ಪಡೆಯುವುದು ಹೇಗೆ? ಈಗೀಗ ಜಿಪಿಆರ್ಎಸ್ ಸೌಲಭ್ಯವನ್ನು ಹೊಂದಿರದ ಮೊಬೈಲ್‌ಗಳೇ ಕಡಿಮೆ. ನೋಕಿಯಾ, ಎಲ್‌ಜಿ, ಸ್ಯಾಮ್‌ಸಂಗ್, ಸೋನಿ ಎರಿಕ್ಸನ್ ಮುಂತಾದ ಕಂಪನಿಗಳು ತಮ್ಮ ಹ್ಯಾಂಡ್‌ಸೆಟ್‌ಗಳಲ್ಲಿ ಅಗತ್ಯ ತಾಂತ್ರಿಕತೆಯನ್ನು ಅಳವಡಿಸಿರುತ್ತವೆ.
ಆದರೆ ಬಳಕೆದಾರರು ಇಂಟರ್ನೆಟ್ ಸೇವೆಯನ್ನು ಪಡೆಯಬೇಕಾದರೆ ಮೊಬೈಲ್‌ಗಳಿಗೆ ಸೇವಾದಾರಿಂದ (ವೊಡಾಫೋನ್, ಏರ್‌ಟೆಲ್, ಬಿಎಸ್‌ಎನ್‌ಎಲ್, ರಿಲಯೆನ್ಸ್ ಇತ್ಯಾದಿ) ಜಿಪಿಆರ್‌ಎಸ್ ಸಂಪರ್ಕವನ್ನು ಪಡೆದುಕೊಳ್ಳಬೇಕು.
ಭಾರ್ತಿ ಏರ್‌ಟೆಲ್.. ಏರ್‌ಟೆಲ್ ಸೇವಾದಾರರ ಸಂಪರ್ಕವನ್ನು ಪಡೆದಿರುವ ಪ್ರೀಪೇಡ್ ಬಳಕೆದಾರರು, ತಮಗೆ ಜಿಪಿಆರ್‌ಎಸ್ ಸೌಲಭ್ಯ ಬೇಕೆಂದಾದಲ್ಲಿ GPRSACT ಎಂದು ಟೈಪಿಸಿ 511 ನಂಬರಿಗೆ ಎಸ್‌ಎಂಎಸ್ ಮಾಡಬೇಕು. ಈ ಸೇವೆಯನ್ನು ರದ್ದು ಮಾಡಬೇಕಾದಲ್ಲಿ ಅದೇ ನಂಬರಿಗೆ GPRSDEACT ಎಂದು ಮೆಸೇಜ್ ಕಳುಹಿಸಬಹುದು.
PR
ಏರ್‌ಟೆಲ್ ಲೈವ್ ಸಂಪರ್ಕ ಬೇಕಾದಲ್ಲಿ LIVEACT ಎಂದು ಬರೆದು 511 ನಂಬರಿಗೆ ಎಸ್‌ಎಂಎಸ್ ಮಾಡಬೇಕು. ಈ ಸೇವೆಯನ್ನು ಸ್ಥಗಿತಗೊಳಿಸಲು LIVEDEACT ಎಂದು ಬರೆದು ಅದೇ ಸಂಖ್ಯೆಗೆ ಸಂದೇಶ ಕಳುಹಿಸಬಹುದು. ಈ ಬಗ್ಗೆ ಸಂದೇಹಗಳಿದ್ದಲ್ಲಿ ಗ್ರಾಹಕರ ಸೇವಾ ವಿಭಾಗಕ್ಕೆ ಕರೆ ಮಾಡಿ ವಿವರಗಳನ್ನು ಪಡೆಯಬಹುದಾಗಿದೆ.
ವೊಡಾಫೋನ್.. ವೊಡಾಫೋನ್ (ಹಚ್) ಪ್ರೀಪೇಡ್ ಗ್ರಾಹಕರು ACT VL ಎಂದು ಟೈಪಿಸಿ 144 ನಂಬರ್‌ಗೆ ಎಸ್‌ಎಂಎಸ್ ಮಾಡಬೇಕು. ಪೋಸ್ಟ್‌ಪೇಡ್ ಬಳಕೆದಾರರು ACT VL ಎಂದು ಬರೆದು 111 ನಂಬರ್‌ಗೆ ಕಳುಹಿಸಬೇಕು ಅಥವಾ ಗ್ರಾಹಕರ ಸೇವಾಕೇಂದ್ರಕ್ಕೆ ಕರೆ ಮಾಡಿ ಸಲಹೆಗಳನ್ನು ಪಡೆದುಕೊಳ್ಳಬಹುದು.
ರಿಲಯೆನ್ಸ್ ಜಿಎಸ್‌ಎಂ.. ಈ ಸೇವಾದಾರರ ಸಂಪರ್ಕ ಹೊಂದಿರುವ ಗ್ರಾಹಕರು ಮೊಬೈಲ್ ಸಿಮ್ ಮೆನುವಿನಲ್ಲಿರುವ R-WORLDನೊಳಗೆ ಹೋಗಿ Get Settings ಪಡೆದುಕೊಳ್ಳಬೇಕು. ನಂತರ ಜಿಪಿಆರ್‌ಎಸ್ ಸೆಟ್ಟಿಂಗ್ಸ್ ಎಂಬಲ್ಲಿ ಸೆಟ್ಟಿಂಗ್‌ಗಾಗಿ ಮನವಿ ಸಲ್ಲಿಸಬಹುದಾಗಿದೆ.
ಕಂಪ್ಯೂಟರ್‌ನಂತೆ ನೋಡಬೇಕೇ? ಬಹುತೇಕ ಮೊಬೈಲ್ ಹ್ಯಾಂಡ್‌ಸೆಟ್‌ಗಳು ಹೊಂದಿರುವ ಬ್ರೌಸರುಗಳು ಆಕರ್ಷಕವಾಗಿಲ್ಲ ಮತ್ತು ಗ್ರಾಹಕ ಸ್ನೇಹಿಯಾಗಿರುವುದಿಲ್ಲ. ನೂತನ ಮಾದರಿಯ ಹ್ಯಾಂಡ್‌ಸೆಟ್‌ಗಳಲ್ಲಿ ಇತರ ಕಂಪನಿಗಳ ಬ್ರೌಸರುಗಳನ್ನು ಅಳವಡಿಸಿರಲಾಗುತ್ತದೆ. ಹಾಗಿಲ್ಲದ ಹ್ಯಾಂಡ್‌ಸೆಟ್ ಹೊಂದಿರುವವರು ಇಂಟರ್ನೆಟ್‌ನಿಂದ ಬ್ರೌಸರುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
PR
ಪ್ರಸಕ್ತ ಮೊಬೈಲ್ ಬ್ರೌಸರುಗಳಲ್ಲಿ 'ಒಪೇರಾ ಮಿನಿ' (Opera mini) ಹೆಚ್ಚು ಜನಪ್ರಿಯ ಮತ್ತು ಗ್ರಾಹಕ ಸ್ನೇಹಿಯಾಗಿದೆ. ಜಿಪಿಆರ್‌ಎಸ್ ಸಂಪರ್ಕ ಪಡೆದುಕೊಂಡ ನಂತರ ಒಪೇರಾ ವೆಬ್‌ಸೈಟ್‌ನಿಂದ ಬ್ರೌಸರನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಇತರ ಬ್ರೌಸರುಗಳು ಕೂಡ ಲಭ್ಯವಿದೆ.
ಮೊಬೈಲ್ ಇಂಟರ್ನೆಟ್ ದುಬಾರಿ.. ಕಂಪ್ಯೂಟರ್‌ನಂತೆ ಮೊಬೈಲ್‌ನಲ್ಲೇ ಪ್ರಪಂಚವನ್ನು ಸುತ್ತಾಡಬಹುದಾದರೂ ಮಾಮೂಲಿ ಇಂಟರ್ನೆಟ್ ಸಂಪರ್ಕಕ್ಕಿಂತ ಇದು ತೀರಾ ದುಬಾರಿ ಮತ್ತು ನಿಧಾನ. ಬಹುತೇಕ ಸೇವಾದಾರರು ಪ್ರತೀ ಕಿಲೋ ಬೈಟ್‌ಗೆ ಒಂದು ಪೈಸೆಯಂತೆ ದರ ವಿಧಿಸುತ್ತಾರೆ.
ಒಂದು ಸಾಧಾರಣ ವೆಬ್ ಪುಟವನ್ನು ತೆರೆಯಬೇಕಾದರೆ 50ರಿಂದ 70 ಕೆ.ಬಿ.ಯಷ್ಟು ಡೌನ್‌ಲೋಡ್ ಅಗತ್ಯವಿರುತ್ತದೆ. ಅಂದರೆ ಒಂದು ಪುಟವನ್ನು ತೆರೆದಾಗ ಸರಿಸುಮಾರು 70 ಪೈಸೆಯನ್ನು ಸೇವಾದಾರರು ವಿಧಿಸುತ್ತಾರೆ. ಕೆಲವು ಕಂಪನಿಗಳು ಜಿಪಿಆರ್ಎಸ್ ಪ್ಯಾಕೇಜ್‌ಗಳನ್ನೂ ನೀಡುತ್ತಿವೆ.
ಕಂಪ್ಯೂಟರ್ ಇಂಟರ್ನೆಟ್‌ಗೆ ಹೋಲಿಸಿದಾಗ ಮೊಬೈಲ್ ಇಂಟರ್ನೆಟ್ ತೀರಾ ನಿಧಾನ. ಇ-ಮೇಲ್ ಅಥವಾ ತಕ್ಷಣದ ಸುದ್ದಿಗಳನ್ನು ಅಂತರ್ಜಾಲದಲ್ಲಿ ನೋಡಲು ಹೆಚ್ಚು ಉಪಯುಕ್ತ.
3ಜಿ, ವೈ-ಫೈ ಸೌಲಭ್ಯಗಳು ಕಾರ್ಯಗತಗೊಂಡ ನಂತರ ಮೊಬೈಲ್ ಇಂಟರ್ನೆಟ್ ಹೆಚ್ಚು ಗ್ರಾಹಕ ಸ್ನೇಹಿಯಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.