ಆಂಧ್ರಪ್ರದೇಶದ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲ ತಂದು ಕೊಟ್ಟು, ಎರಡು ಬಾರಿಗೆ ಮುಖ್ಯಮಂತ್ರಿಗಾದಿ ಏರಿದ್ದ ವೈ.ಎಸ್.ರಾಜಶೇಖರ್ ರೆಡ್ಡಿ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಹೊಡೆತ ಬಿದ್ದಂತಾಗಿದೆ.
ಹಾಲಿ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ಆರ್ ಸಾವು ಆಂಧ್ರದಾದ್ಯಂತ ದುಃಖದ ಕರಾಳಛಾಯೆ ಮೂಡಿಸಿದೆ. ಹೀಗೆ ದೇಶದ ಪ್ರಭಾವಿ ರಾಜಕಾರಣಿಯಾಗಿದ್ದ ಕಾಂಗ್ರೆಸ್‌ನ ಮಾಧವರಾವ್ ಸಿಂದಿಯಾ, ತೆಲುಗುದೇಶಂ ಪಕ್ಷದ ಜಿಎಂಸಿ ಬಾಲಯೋಗಿ, ಹರಿಯಾಣ ಸಚಿವ ಒ.ಪಿ.ಜಿಂದಾಲ್ ಹಾಗೂ ಸಂಜಯ್ ಗಾಂಧಿ, ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಕುಮಾರಮಂಗಲಂ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಮಾಧವರಾವ್ ಸಿಂದಿಯಾ: ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಸಚಿವರಾಗಿದ್ದ ಮಾಧವರಾವ್ ಸಿಂದಿಯಾ ಅವರು ಸೆ.30, 2001ರಲ್ಲಿ ಕಾನ್ಪುರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿಯೇ ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದ್ದರು.
ಸಿಂದಿಯಾ ಅವರೊಂದಿಗೆ ಆರು ಮಂದಿ ಜತೆಗಿದ್ದು, ಅವರೆಲ್ಲರು ಮೃತಪಟ್ಟಿದ್ದರು. ಖಾಸಗಿ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದಾಗ ಉತ್ತರ ಪ್ರದೇಶ ಸಮೀಪದ ಮಣಿಪುರದಲ್ಲಿ ಈ ದುರಂತ ನಡೆದಿತ್ತು.
ಬಾಲಯೋಗಿ: ಲೋಕಸಭಾ ಸ್ಪೀಕರ್ ಹಾಗೂ ತೆಲುಗು ದೇಶಂ ಪಕ್ಷ(ಟಿಡಿಪಿ)ದ ಮುಖಂಡರಾಗಿದ್ದ ಜಿಎಂಸಿ ಬಾಲಯೋಗಿ ಕೂಡ ಹೆಲಿಕಾಪ್ಟರ್ ದುರಂತದಲ್ಲಿ ಮಡಿದಿದ್ದರು. ಮಾರ್ಚ್ 2, 2002ರಂದು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಈ ಹೆಲಿಕಾಪ್ಟರ್ ದುರಂತ ಸಂಭವಿಸಿತ್ತು.
ಬೆಲ್ 206 ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದ ಬಾಲಯೋಗಿಯವರು ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿತ್ತು. ಹೆಲಿಕಾಪ್ಟರ್ ಅನ್ನು ಸೂಕ್ತ ಸ್ಥಳದಲ್ಲಿ ಇಳಿಸಲು ಪೈಲಟ್‌ಗೆ ಸಾಧ್ಯವಾಗದೆ ಇದ್ದ ಕಾರಣ ಈ ಘಟನೆ ನಡೆದಿತ್ತು.
ಒ.ಪಿ.ಜಿಂದಾಲ್: ಪ್ರತಿಷ್ಠಿತ ಕೈಗಾರಿಕೋದ್ಯಮಿ, ಹರಿಯಾಣ ಸಚಿವ ಒ.ಪಿ.ಜಿಂದಾಲ್ ಅವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಸಹ ಮಾರ್ಚ್ 31, 2005ರಂದು ದುರಂತಕ್ಕೀಡಾಗುವ ಮೂಲಕ ವಿಧಿವಶರಾಗಿದ್ದರು. ಈ ದುರ್ಘಟನೆ ಉತ್ತರ ಪ್ರದೇಶ ಸಮೀಪದ ಸಾಹಾರಾನ್‌ಪುರದಲ್ಲಿ ನಡೆದಿತ್ತು.
ಸಂಜಯ್-ಕುಮಾರಮಂಗಲಂ:1973ರಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದ ಎಸ್.ಕುಮಾರಮಂಗಲಂ ನವದೆಹಲಿ ಸಮೀಪ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದಿದ್ದರು. ಅದೇ ರೀತಿ 1980ರಲ್ಲಿ ಇಂದಿರಾ ಪುತ್ರ ಸಂಜಯ್ ಗಾಂಧಿ ಕೂಡ ಹೆಲಿಕಾಪ್ಟರ್ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದರು.
ಕೂದಲೆಳೆಯ ಅಂತರದಲ್ಲಿ ಪಾರಾದ ಅದೃಷ್ಟವಂತರು!: ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಅಹಮ್ಮದ್ ಪಟೇಲ್, ಕೇಂದ್ರ ಸಚಿವ ಪ್ರಥ್ವೀರಾಜ್ ಚೌಹಾಣ್ ಮತ್ತು ಕುಮಾರಿ ಸೆಲ್ಜಾ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಕೂದಲೆಳೆಯ ಅಂತರದಿಂದ ಪಾರಾಗುವ ಮೂಲಕ ಸಾವಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದರು.
ಅದೇ ರೀತಿ ಕಳೆದ ವರ್ಷ ರಾಂಪುರದತ್ತ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಕೂಡ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದರು.