ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಬೆಂಗ್ಳೂರಲ್ಲಿಲ್ಲದ ಸರ್ವಜ್ಞಗೆ ಚೆನ್ನೈಯಲ್ಲಿ ಸ್ವಾಗತಿಸಲು ಬನ್ನಿ! (Sarvajna in Chennai | Bangalore | Thiruvalluvar | Kannada)
20 ಶತಮಾನಗಳಷ್ಟು ಹಿಂದೆಯೇ ಸಮಾನತೆ, ಸೌಹಾರ್ದತೆ ಬೋಧಿಸಿದ ತಮಿಳು ಸಂತ ಕವಿ ತಿರುವಳ್ಳುವರ್ ಮತ್ತು 16ನೇ ಶತಮಾನದಲ್ಲಿ ಇದೇ ಮೌಲ್ಯಗಳ ಬೋಧನೆ ಮೂಲಕ ಕನ್ನಡಿಗರ ಮನದಲ್ಲಿ ಅಜರಾಮರವಾಗಿಬಿಟ್ಟಿರುವ ಸರ್ವಜ್ಞ ಕವಿಯ ಪ್ರತಿಮೆಗಳು ಕಾವೇರಿ ಸೇರಿದಂತೆ ಹಲವಾರು ವಿವಾದಗಳ ಸುಳಿಯಲ್ಲಿ ಕಚ್ಚಾಡುತ್ತಿರುವ ಕನ್ನಡಿಗ ಮತ್ತು ತಮಿಳರನ್ನು ಕೂಡಿಸಿ ಒಲಿಸಲಿ ಎಂಬ ಹಾರೈಕೆಯೊಂದಿಗೆ, ಚೆನ್ನೈಯಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕಿಂತಲೂ ಸುಂದರವಾಗಿಸುವುದೀಗ ಕನ್ನಡಿಗರಿಗೆ ದೊರೆತಿರುವ ಅವಕಾಶ. ಇದಕ್ಕಾಗಿ ಹೆಮ್ಮೆ ಪಡೋಣ. ಬೆಂಗಳೂರಲ್ಲಿ ತಿರುವಳ್ಳುವರ್ ಸ್ಥಾಪನೆಯಾಗಿದೆ, ಇನ್ನುಳಿದಿರುವುದು ಚೆನ್ನೈಯಲ್ಲಿ ಸರ್ವಜ್ಞನನ್ನು ಸಾಂಗೋಪಾಂಗವಾಗಿ ಪ್ರತಿಷ್ಠಾಪಿಸುವುದು. ರಾಜಕೀಯವನ್ನು ಒಂದು ಕ್ಷಣ ಮರೆತು, ಈ ಐತಿಹಾಸಿಕ ಹೆಮ್ಮೆಯ, ಗೌರವದ, ಅಭಿಮಾನದ ಕ್ಷಣಗಳನ್ನು ಯಶಸ್ವಿಯಾಗಿಸಲು ಸಕಲರೂ ಪ್ರಯತ್ನಿಸಬೇಕಾಗಿದೆ. (ಚಿತ್ರ: ಸರ್ವಜ್ಞ ಪ್ರತಿಮೆ ಅನಾವರಣ ನಿಮಿತ್ತ ಸಭಾ ಕಾರ್ಯಕ್ರಮ ನಡೆಯಲಿರುವ ಐಸಿಎಫ್ ಮೈದಾನದಲ್ಲಿ ಸಿದ್ಧತೆಗಳು)
ನಮ್ಮಲ್ಲಿಲ್ಲದ್ದು ಅಲ್ಲಿ: ಕನ್ನಡದ ಮನಸ್ಸುಗಳು ಹೆಮ್ಮೆ ಪಡುವ ಐತಿಹಾಸಿಕ ಕ್ಷಣಕ್ಕೆ ವೇದಿಕೆಯೊಂದು ತಮಿಳುನಾಡಿನಲ್ಲಿ ಸಿದ್ಧವಾಗುತ್ತಿರುವುದು ವಿಶೇಷ ಮತ್ತು ಹೆಗ್ಗಳಿಕೆಯೂ ಹೌದು. ತಮಿಳುನಾಡಿನಲ್ಲಿ ಅಲ್ಲಲ್ಲಿ ಮಹಾನ್ ಕವಿ ತಿರುವಳ್ಳುವರ್ ಪ್ರತಿಮೆಗಳಿವೆ (ಅದಕ್ಕಾಗಿಯೇ ಸ್ಥಾಪನೆಯಾಗಿರುವ ವಳ್ಳುವರ್ ಕೊಟ್ಟಂ ಎಂಬುದು ಚೆನ್ನೈಯ ಕೇಂದ್ರಸ್ಥಾನದಲ್ಲಿದೆ), ಅಂಥದ್ದೇ ಒಂದು ಪ್ರತಿಮೆಯು ಬೆಂಗಳೂರಿನಲ್ಲೂ ಸ್ಥಾಪನೆಯಾಯಿತು ಎಂದಷ್ಟೇ ಭಾವಿಸಿಕೊಳ್ಳಬಹುದಾದರೆ, ಕನ್ನಡಿಗರು ಈ ತಮಿಳರಿಗಿಂತಲೂ ಹೆಚ್ಚು ಹೆಮ್ಮೆ ಪಡುವ ಸಂಭ್ರಮಕ್ಕೊಂದು ಕಾರಣವಿದೆ. ಬೆಂಗಳೂರಲ್ಲಿಯೂ ಇಲ್ಲದ, ಕಳೆದ ಏಳು ವರ್ಷಗಳಿಂದ ಕನ್ನಡ ಭವನದ ನೆಲಮಾಳಿಗೆಯಲ್ಲಿ ಧೂಳಿನಲ್ಲಿ ಮುಳುಗಿ ಮಲಗಿದ್ದ ಸರ್ವಜ್ಞ ಪ್ರತಿಮೆಯು ತಮಿಳರ ರಾಜಧಾನಿಯಲ್ಲಿ ನೆಲೆಗೊಳ್ಳುತ್ತಿಲ್ಲವೇ? ಅದು ಕೂಡ ಮೂರ್ತಿ ಪೂಜೆಯನ್ನು ವಿರೋಧಿಸುತ್ತಲೇ ರಾಜಕೀಯ ಮಾಡುತ್ತಿರುವ ದ್ರಾವಿಡ ಪಕ್ಷಗಳ ತವರೂರಲ್ಲಿ! ಅದಕ್ಕಾಗಿಯೇ ಚೆನ್ನೈ ಕನ್ನಡಿಗರು ಎಲ್ಲ ನೋವುಗಳನ್ನು ನುಂಗಿ ಸಂಭ್ರಮಿಸುತ್ತಿದ್ದಾರೆ.
ಹೌದು. ಸರ್ವಜ್ಞನಿಗೆ ಅಯನಾವರಂ ಜಾಗ ಪ್ರಶಸ್ತವಲ್ಲ ಮತ್ತು ಚೆನ್ನೈ ಕನ್ನಡಿಗರಿಗೆ ತಮ್ಮ ಕನ್ನಡ ಘನತೆ ಎತ್ತಿ ಹಿಡಿದು ತೋರಿಸುವ ಅವಕಾಶವೊಂದನ್ನು ನೀಡಲಾಗಿಲ್ಲ ಎಂಬ ಕೊರಗು ಬಿಟ್ಟರೆ, ಚೆನ್ನೈ ಕನ್ನಡಿಗ ಹೆಮ್ಮೆಯಿಂದಿದ್ದಾನೆ. ಎದೆಯುಬ್ಬಿಸಿ ನಡೆಯುತ್ತಿದ್ದಾನೆ. ಮೇಲೆ ಹೇಳಿದ ಕಾರಣಕ್ಕೆ ಕನ್ನಡದ ರಾಜಧಾನಿಗಿಂತಲೂ ಹೆಚ್ಚು ಹೆಮ್ಮೆ ಪಡಬೇಕಾದವರು ನಾವು ಎಂದುಕೊಳ್ಳುತ್ತಿದ್ದಾನೆ. ಎಷ್ಟೇ ತಕರಾರು ಇದ್ದರೂ, ಈಗ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಇದೆ, ಆ ಕಾರಣಕ್ಕಾಗಿಯಾದರೂ ಚೆನ್ನೈಯಲ್ಲಿ ಸರ್ವಜ್ಞ ಇರಬೇಕು ಎಂಬ ಧೋರಣೆಯೂ ಜೊತೆಗಿದೆ.
ಕಾವೇರಿ ನೀರಿಗಾಗಿ ದಶಕಗಳ ಕಾಲದಿಂದ ಬಡಿದಾಡಿಕೊಳ್ಳುತ್ತಿದ್ದ ಉಭಯ ರಾಜ್ಯಗಳ ನಡುವೆ ಈ ಪ್ರತಿಮೆ ಸ್ಥಾಪನೆಯಿಂದ ಸೌಹಾರ್ದತೆಯ ಹೊಸ ಮಿಂಚು ಹರಿಯುತ್ತದೆ ಎಂದು ಸರಕಾರವು ಹೇಳುತ್ತಿದೆ ಎಂದಾದರೆ ಯಾರಿಗೆ ಬೇಡ? ಹಾಗಂತ, ತಿರುವಳ್ಳುವರ್ ಪ್ರತಿಮೆಗೆ ಬೆಂಗಳೂರಿನಲ್ಲಿ ವಿರೋಧ ಎದುರಾಗಿ ದೊಡ್ಡ ರಂಪಾಟವೇ ಆಗಿತ್ತು. ಆದರೆ ಚೆನ್ನೈಯಲ್ಲಿ? ತಮಿಳರ‌್ಯಾರೂ ಸರ್ವಜ್ಞ ಪ್ರತಿಮೆಯನ್ನು ವಿರೋಧಿಸಿಲ್ಲ ಎಂಬುದನ್ನು ಕೂಡ ಇಲ್ಲಿ ಗಮನಿಸಬೇಕು. ಮತ್ತು ಸ್ವತಃ ಕರುಣಾನಿಧಿಯೇ ಈ ಕುರಿತು ನೀಡಿರುವ ಭರವಸೆಯ ಮಾತುಗಳನ್ನೂ ಸದ್ಯಕ್ಕೆ ನಂಬಿಕೊಳ್ಳಬೇಕು.
ವಿಶಾಲ ಸ್ಥಳಕ್ಕೆ ಕಾರ್ಯಕ್ರಮ ವರ್ಗಾವಣೆ: ಅಷ್ಟು ಮಾತ್ರವೇ ಅಲ್ಲ. ಬೆಂಗಳೂರಿಗೆ ಭೇಟಿ ನೀಡಿದಾಗ ಕನ್ನಡಿಗರು, ಕರ್ನಾಟಕ ಸರಕಾರ ತೋರಿದ ಆದರಾಭಿಮಾನಕ್ಕೆ ತಮಿಳುನಾಡು ಮುಖ್ಯಮಂತ್ರಿಯ ಮನಸ್ಸು ಕರಗಿದಂತೆ ತೋರುತ್ತಿದೆ. ಬೆಂಗಳೂರಿನಲ್ಲಿ ಕನ್ನಡಿಗರು ತೋರಿದ ಹೃದಯ ವೈಶಾಲ್ಯದಿಂದ ಅವರ ಮನಸ್ಸಿನಲ್ಲಿ ಬಹುಶಃ ತಪ್ಪಿತಸ್ಥ ಭಾವನೆ ಮೂಡಿರಬೇಕೇನೋ... ಅದಕ್ಕೇ ಚೆನ್ನೈಗೆ ಮರಳಿದ ತಕ್ಷಣ, ಸರ್ವಜ್ಞ ಪ್ರತಿಮೆ ಇರುವ ಜಾಗಕ್ಕೆ ಹೋಗಿ, ಇಲ್ಲಿ ಸಭಾ ಕಾರ್ಯಕ್ರಮ ನಡೆಸಲು ಜಾಗ ಸಾಲದು ಎಂದು ಅರಿತುಕೊಂಡಿದ್ದಾರೆ. ಇದಕ್ಕಾಗಿ ಜೀವಾ ಉದ್ಯಾನದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಮತ್ತು ಸಾಕಷ್ಟು ವಿಶಾಲವಾದ ಐಸಿಎಫ್ ಮೈದಾನ (ಆರ್‌ಪಿಎಫ್ ಪೆರೇಡ್ ಮೈದಾನ)ದಲ್ಲಿ ಸಭಾ ಕಾರ್ಯಕ್ರಮಕ್ಕೆ ಏರ್ಪಾಡು ಮಾಡುವಂತೆ ತಕ್ಷಣವೇ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಸರ್ವಜ್ಞ ಪ್ರತಿಮೆಗೆ ಅಯನಾವರಂ ಯಾಕೆ ಪ್ರಶಸ್ತ ಅಲ್ಲ ಎಂದು ವೆಬ್‌ದುನಿಯಾ ಈ ಹಿಂದೆಯೇ ವಿಶ್ಲೇಷಿಸಿತ್ತು. ಇಕ್ಕಟ್ಟಾದ ಓಣಿಗಳ ನಡುವೆ ಬರುವ ಜನಸಂದೋಹ ನಿಯಂತ್ರಿಸುವುದು ಕೂಡ ಕಷ್ಟ ಎಂಬುದು ಕರುಣಾನಿಧಿಗೂ ಅರಿವಾಗಿದೆಯೆಂಬಂತೆ ತೋರುತ್ತಿದೆ. ಇದಕ್ಕಾಗಿ, ಅಗಲವಾದ ರಸ್ತೆಗಳಿಂದ ಆವೃತವಾಗಿರುವ ಪ್ರದೇಶವನ್ನು ಕರ್ನಾಟಕದಿಂದ ಬರುವ ಕನ್ನಡಿಗರೆದುರು ತಮ್ಮ ಹೃದಯವೈಶಾಲ್ಯವನ್ನು ಪ್ರಕಟಿಸಲು ಆಯ್ದುಕೊಂಡಿದ್ದಾರೆ ಕರುಣಾನಿಧಿ. ಅತ್ಯುತ್ತಮ ಕಾರ್ಯಕ್ರಮ ಎಂದು ಕನ್ನಡಿಗರು ಶ್ಲಾಘಿಸುವಂತಾಗಬೇಕು, ಆ ಮೂಲಕ ಜೀವಾ ಉದ್ಯಾನ ಪ್ರಶಸ್ತವಲ್ಲ ಎಂಬ ಕೊರಗನ್ನು ನಿವಾರಿಸಬೇಕೆಂಬ ಉದ್ದೇಶದಲ್ಲಿ ವಿಶಾಲವಾದ ಪೆಂಡಾಲ್ ಒಂದು ಐಸಿಎಫ್ ಮೈದಾನದಲ್ಲಿ ಸಿದ್ಧವಾಗುತ್ತಿದೆ.
ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬಂದಷ್ಟೇ ಜನಸಾಗರವು ಈ ಅಯನಾವರಂ ಉದ್ಯಾನ ಪ್ರದೇಶದ ಪುಟ್ಟ ಜಾಗದಲ್ಲಿ ಸೇರುವುದು ಖಂಡಿತಾ ಸಾಧ್ಯವಿರಲಿಲ್ಲ ಮತ್ತು ನಮ್ಮ ತವರೂರಾಗಿರುವ ಕರ್ನಾಟಕದಿಂದ ಬರುವ ಕನ್ನಡಿಗರು, ತಮಿಳುನಾಡಿನ ಕನ್ನಡಿಗರನ್ನು ಸೇರಿಕೊಂಡು ಆ ಪ್ರದೇಶವನ್ನೇ ತುಂಬಿ ತುಳುಕುವಂತೆ ಮಾಡಬಲ್ಲರೇ ಎಂಬ ನಿರೀಕ್ಷೆಯೂ ಅವರದ್ದಿರಬಹುದು. ಹೀಗಾಗಿ ವಿಶಾಲ ಮೈದಾನದ ವ್ಯವಸ್ಥೆಯಾಗಿದೆ.
ಜೀವ ತಳೆದ ಜೀವಾ ಪಾರ್ಕ್: ಕನಿಷ್ಠಪಕ್ಷ ಸರ್ವಜ್ಞನ ಹೆಸರಿನಲ್ಲಾದರೂ ಜೀವಾ ಪಾರ್ಕ್‌ಗೆ ಮರು ಜೀವ ಬಂದಿದೆ. ಕರ್ನಾಟಕದಿಂದ ಬರುವ ಕನ್ನಡಿಗರ ಮನ ತಣಿಸಲೆಂದು ಉದ್ಯಾನವು ಕೂಡ ಇನ್ನಿಲ್ಲದಂತೆ ಸಿಂಗಾರಗೊಳ್ಳುತ್ತಿದೆ. ಆ.11ರ ಮಂಗಳವಾರ ಅಲ್ಲಿಗೆ ಬೆಳಿಗ್ಗೆ ಭೇಟಿ ನೀಡಿದಾಗ ದೊರೆತ ಚಿತ್ರಾವಳಿಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ವಾಕಿಂಗ್ ಪಾತ್, ಹಚ್ಚಹಸುರಿನ ಹುಲ್ಲು ಹಾಸು, ದೀಪಾಲಂಕಾರ, ಕಬ್ಬಿಣದ ಫೆನ್ಸಿಂಗ್ ಇತ್ಯಾದಿ ಕಾರ್ಯಗಳು ಭರದಿಂದ ಸಾಗುತ್ತಿರುವುದನ್ನು ಕಾಣಬಹುದು.
ತಿರುವಳ್ಳುವರ್‌ಗೆ ದೊರೆತಂತಹ ಪ್ರೈಮ್ ಲೊಕೇಶನ್‌ನಲ್ಲಿ ನಾವು ಅವಕಾಶ ಕೊಟ್ಟಿಲ್ಲ ಎಂದು ಕೆಲವೇ ಕೆಲವು ತಮಿಳರು ಒಳಗಿಂದೊಳಗೇ ತಾವೇ ಗೆದ್ದೆವೆಂಬ ಹಮ್ಮಿನಿಂದ ಬೀಗಿದರೂ, 18 ವರ್ಷಗಳಿಂದ ಮುಸುಕು ಸರಿಸಲು ಕಾಯುತ್ತಿದ್ದ ತಿರುವಳ್ಳುವರ್ ಬೆಂಗಳೂರಿನಲ್ಲಿ ಕಣ್ಣು ಬಿಟ್ಟ ಕಾರಣದಿಂದಲಾದರೂ, ಏಳೆಂಟು ವರ್ಷಗಳಿಂದ ಮುಕ್ತಿ ಕಾಣದೆ ಬೆಂಗಳೂರಿನ ಕನ್ನಡ ಭವನದ ನೆಲ ಮಾಳಿಗೆಯಲ್ಲಿ ಬಿದ್ದಿದ್ದ ಸರ್ವಜ್ಞನ ಪ್ರತಿಮೆಗೆ ಕೊನೆಗೂ ಮದರಾಸಿನಲ್ಲಿ ನೆಲೆ ಸಿಕ್ಕಿದೆ ಎಂಬ ಸಂತೃಪ್ತಿಯೂ ಕನ್ನಡಿಗರಲ್ಲಿದೆ.
ಕನ್ನಡಿಗರು ಹೆಮ್ಮೆ ಪಡುವ ಕಾರ್ಯಕ್ರಮವಾಗಲಿ: ರಾಜ್ಯಗಳ ಮಧ್ಯೆ ಇರುವ ವಿವಾದಗಳ ಹೊಗೆಯಲ್ಲಿ ಉಭಯ ಭಾಷಿಗರ ನಡುವಿನ ಸಂಬಂಧವೇಕೆ ಹದಗೆಡಬೇಕು ಎಂಬುದರತ್ತ ಯೋಚಿಸಿದರೆ, ಬೆಂಗಳೂರಿನಲ್ಲಾಗಲೀ, ಚೆನ್ನೈಯಲ್ಲಾಗಲೀ ಕನ್ನಡಿಗರು ಮತ್ತು ತಮಿಳರು ಸೌಹಾರ್ದತೆಯಿಂದಲೇ ಜೀವಿಸುತ್ತಿಲ್ಲವೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಹೀಗಾಗಿ, ಇದು ಮನಸ್ಸುಗಳ ನಡುವಣ ದ್ವೇಷವಲ್ಲ, ಇದರ ಹಿಂದೆ ರಾಜಕೀಯದ ಚೆಲ್ಲಾಟವೂ ಇದೆ ಎಂಬುದು ಸಾಮಾನ್ಯ ಕನ್ನಡಿಗನ ಅಭಿಮತ. ಇದೇ ಕಾರಣಕ್ಕೆ, ಕಳೆದ ಲೇಖನಕ್ಕೆ ಕಾಮೆಂಟ್ ಹಾಕಿದ್ದ ವೆಂಕಟೇಶ್ ಹೆಸರಿನ ಕನ್ನಡಿಗರೊಬ್ಬರು, ದಯವಿಟ್ಟು ಚೆನ್ನೈನ ಸರ್ವಜ್ಞ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹೋಗಿ, ನಮ್ಮ ಕನ್ನಡದ ಪೆರ್ಮೆಯನ್ನು ಎತ್ತಿ ಹಿಡಿಯಿರಿ ಅಂತ ಕೋರಿಕೊಂಡಿದ್ದಾರೆ.
ಅವರು ಹೇಳಿರುವಂತೆ, ನಮ್ಮ ಅನೇಕ ಇಲ್ಲಗಳ ಪಟ್ಟಿ ಮಾಡಿ ನೋಡಿದರೂ, ಅತ್ತ ಬಹುಸಂಖ್ಯೆಯ ತಮಿಳರು ತಮಿಳುನಾಡಿನಿಂದ ಬರುತ್ತಿದ್ದಾರೆ. ನಮ್ಮ ಕನ್ನಡಿಗರು ಯಾರನ್ನೋ ಬೈಯುತ್ತಾ ಕಾಲಹರಣ ಮಾಡುತ್ತಿದ್ದೇವೆ. ಯಾರೂ ಕರೆಯುವ ಅಗತ್ಯವಿಲ್ಲ. ನಮ್ಮ ಕನ್ನಡದ ಕೆಲಸ. ಹೋಗಿ ಭಾಗವಹಿಸಿ. ಮುಖ್ಯಮಂತ್ರಿಗಳನ್ನು ಬೈದರೆ ಏನು ಉಪಯೋಗ? ಆಸಕ್ತಿಯೇ ಇಲ್ಲ ಅನ್ನೋ ನಗೆಪಾಟಲಿಗೆ ಗುರಿಯಾಗೋದನ್ನ ತಪ್ಪಿಸಿರಪ್ಪ. ನಮ್ಮ ದಮ್ಮಯ್ಯ. ಹೋಗಿ ಅಟೆಂಡ್ ಮಾಡಿ ಬನ್ನಿ ಅಂತಲೂ ಕಳಕಳಿಯಿಂದ ಕೇಳಿಕೊಂಡಿದ್ದಾರೆ.
ಮತ್ತೊಬ್ಬರು ನಾಗ್ ಹೆಸರಿನಲ್ಲಿ ಮಾಡಿದ ಕಾಮೆಂಟಿನಲ್ಲಿ, ಮೊದಲು ನಾವು ಕನ್ನಡಿಗರು 2 ಲಕ್ಷ ಮಂದಿ ಚೆನ್ನೈಗೆ ಹೋಗಬೇಕು ಮತ್ತು ನಮ್ಮ ಒಗ್ಗಟ್ಟು ತೋರಿಸಬೇಕು ಎಂಬ ಕಳಕಳಿ ವ್ಯಕ್ತಪಡಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಹೆಸರಿನ ಕಾಮೆಂಟಿಗರೊಬ್ಬರಂತೂ, "ಆತ್ಮೀಯ ಅನಿವಾಸಿ ಕನ್ನಡಿಗರೇ, ನಿಮ್ಮ ಕಷ್ಟ ಸುಖಕ್ಕೆ ನಿಮ್ಮ ನೆಲದ ನಿಮ್ಮ ಸಹೋದರರಾದ ನಾವಿದ್ದೇವೆ, ದೇವರು ನಮ್ಮ ಕನ್ನಡಿಗರಿಗೆ ಎಷ್ಟೇ ಕಷ್ಟ ಕೊಟ್ಟರು ತಾಯಿ ಭುವನೇಶ್ವರಿಯ ಆಶೀರ್ವಾದವಿದೆ" ಎಂದು ಸ್ಫೂರ್ತಿ ತುಂಬಿದ್ದಾರೆ.
ಈಗ ಆಗಿದ್ದು ಆಗಿದೆ, ದ್ವೇಷ ಮರೆತು ಹೊಸ ಯುಗಕ್ಕೆ ನಾಂದಿ ಹಾಡೋಣ. ಸರ್ವಜ್ಞ ಪ್ರತಿಮೆ ಅನಾವರಣವಾಯಿತೆಂದಾಕ್ಷಣ ಸೌಹಾರ್ದತೆ ಮೂಡಿತು ಎಂದಾಗುವುದಿಲ್ಲ. ಸರ್ವಜ್ಞನ ವಚನಗಳು ಈಗಾಗಲೇ ತಮಿಳಿಗೆ ಭಾಷಾಂತರವಾಗಿದೆ ಅಂತ ಕರುಣಾನಿಧಿ ಹೇಳಿದ್ದಾರೆ. ಅದು ತಮಿಳುನಾಡಿನ "ಐದನೇ ತರಗತಿವರೆಗೆ ಕಡ್ಡಾಯ ತಮಿಳು" ಭಾಷೆಯ ಪಠ್ಯದಲ್ಲಿ ಸೇರಿಕೊಳ್ಳಲಿ, ಆ ಬಳಿಕ ತಿರುವಳ್ಳುವರ್ ಅವರ ದ್ವಿಪದಿಗಳ ಸಂಗ್ರಹ ತಿರುಕ್ಕುರಳ್ ಕನ್ನಡಕ್ಕೆ ಭಾಷಾಂತರವಾಗಿ ಕನ್ನಡಿಗರೂ ಅದರ ಸಾರ-ಸತ್ವವನ್ನು ಅರಿತುಕೊಳ್ಳುವಂತಾಗಲಿ. ಹೀಗೆ ಮುಂದಿನ ಪೀಳಿಗೆಯಲ್ಲಿ ಉಭಯ ರಾಜ್ಯಗಳ ಸೌಹಾರ್ದತೆಗೆ ಪೂರಕ ವೇದಿಕೆಯೊಂದು ಅಡಿಪಾಯವಾಗಲಿ. ಬೈಬಲ್ ಮತ್ತು ಕುರಾನ್ ನಂತರ ಅತೀ ಹೆಚ್ಚು ಭಾಷೆಗಳಿಗೆ ಅನುವಾದಗೊಂಡ ತಿರುಕ್ಕುರಳ್ ಕೃತಿಯ ಮಹತ್ವ ಏನೆಂಬುದು ಕನ್ನಡಿಗರಿಗೂ ಅರಿವಾಗಲಿ.
ಆ ಮೇಲೆ ಇದ್ದೇ ಇದೆ ಹೋರಾಟ: ಕರ್ನಾಟಕಕ್ಕೆ ಸಿಗಬಹುದಾದ ನೆರವಿಗೆ ತಮಿಳುನಾಡು ರಾಜಕಾರಣಿಗಳು ಅಡ್ಡಗಾಲು ಹಾಕುವುದು ನಿಂತರೆ ಮತ್ತು ಎಲ್ಲವೂ ತಮಿಳುನಾಡಿಗೇ ಬೇಕು, ಕರ್ನಾಟಕಕ್ಕೆ ಸಿಗಬಾರದು ಅಂತೆಲ್ಲಾ ಮನೋಭಾವದ ಹಿಂದೆಯೂ ಇರುವುದು ರಾಜಕಾರಣಿಗಳೇ. ಇದಕ್ಕೆ ಉಭಯ ರಾಜ್ಯಗಳ ಜನರ ನಡುವಣ ಸ್ನೇಹ-ಸೌಹಾರ್ದತೆ ಬಲಿಯಾಗಬಾರದು. ತಮಿಳು ರಾಜಕಾರಣಿಗಳು, ಅಧಿಕಾರಿಗಳು ಪಟ್ಟು ಹಿಡಿದು, ಕೇಂದ್ರದ ಕುತ್ತಿಗೆ ಪಟ್ಟಿ ಹಿಡಿದು, ತಮ್ಮ ರಾಜ್ಯಕ್ಕೆ ಬೇಕಾದ್ದನ್ನು ಮಾಡಿಸಿಕೊಳ್ಳುತ್ತಾರೆ. ಅದೇ ರೀತಿ ಕರ್ನಾಟಕಕ್ಕೂ ಸಕಲ ಸೌಲಭ್ಯಗಳು ದೊರೆಯುವಂತೆ ಮಾಡಬೇಕಿರುವುದು ಕರ್ನಾಟಕ ರಾಜಕಾರಣಿಗಳು. ನಮಗೇನಾದರೂ ಅನ್ಯಾಯವಾಗಿದೆ ಎಂದಾದರೆ ಅದು ತಮಿಳು ರಾಜಕಾರಣಿಗಳಿಂದ ಮತ್ತು ಸುಮ್ಮನಿರುವ ನಮ್ಮ ಜನಪ್ರತಿನಿಧಿಗಳಿಂದಲೇ ಹೊರತು ಸಾಮಾನ್ಯ ತಮಿಳರಿಂದ ಅಲ್ಲ ಎಂಬುದನ್ನೂ ಗಮನಿಸಬೇಕು.
ಪ್ರತಿ ಬಾರಿಯೂ ಕಾವೇರಿ ವಿಷಯವು ಕಾವೇರಿದಾಗ ಮೊದಲು ಗುರಿಯಾಗುವುದು ಎರಡೂ ರಾಜ್ಯಗಳ ಬಸ್ಸುಗಳು, ಪರಭಾಷಾ ಚಿತ್ರ ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳು. ಆದರೆ, ಈಗ ಹೊಸದೊಂದು ಸಾಧ್ಯತೆಯು ಸೇರ್ಪಡೆಯಾಗಿದೆ. ಈ ಪ್ರತಿಮೆಯೂ ಜನರ ಭಾವವಿಕಾರಕ್ಕೆ ಗುರಿಯಾಗದಿರಲಿ, ಪ್ರತಿಮೆಗಳ ರಕ್ಷಣೆಗಳ ಬಗ್ಗೆ ಉಭಯ ರಾಜ್ಯಗಳೂ ಬದ್ಧತೆಯಿಂದ ಕ್ರಮ ಕೈಗೊಳ್ಳಲಿ ಎಂದು ಹಾರೈಸೋಣ.
ಅದೆಲ್ಲ ಆದ ಬಳಿಕ, ನಮ್ಮ ಮುಖ್ಯಮಂತ್ರಿಗಳು ಭರವಸೆ ನೀಡಿದಂತೆ, ಕಾವೇರಿ ವಿವಾದವಾಗಲೀ, ಹೊಗೇನಕಲ್ ವಿವಾದವಾಗಲೀ ಮತ್ತು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವುದಕ್ಕೆ ಚೆನ್ನೈ ಹೈಕೋರ್ಟಿನಲ್ಲಿ ಹೂಡಿರುವ ದಾವೆಯ ಕುರಿತಾಗಲೀ, ಮಾತುಕತೆ ಮೂಲಕ ಪರಿಹಾರ ಕಂಡುಕೊಂಡು, ತಮ್ಮ ಕನ್ನಡದ ಬಗೆಗಿನ ಕಾಳಜಿಯನ್ನು ದೃಢಪಡಿಸಲಿ.
ಇದರ ಅನುಸಾರ, ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಕರುಣಾನಿಧಿ ಅವರು ಉಭಯ ರಾಜ್ಯಗಳ ನಡುವೆ ಕುದಿಯುತ್ತಿರುವ ವಿವಾದವನ್ನು ಮಾತಿನ ಮೂಲವೇ ನ್ಯಾಯಯುತವಾಗಿ ಶಮನಗೊಳಿಸಬಹುದು ಎಂಬ ಮಾತು ಕೊಟ್ಟಿದ್ದಾರೆ. ಮಾತು ಉಳಿಸಿಕೊಂಡರೆ ಅವರು ರಾಜ್ಯವನ್ನು ಆಳಬಹುದು.
ಕಾರ್ಯಕ್ರಮ ಮೊದಲು ಯಶಸ್ವಿಯಾಗಲಿ, ಅನ್ಯಾಯದ ವಿರುದ್ಧ ಹೋರಾಟ ಮತ್ತೆ ಮುಂದುವರಿಸೋಣ.