ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಸಂಗೀತ ಗಂಗೆಯಲ್ಲಿ ಲೀನವಾದ 'ಗಾಯನ ಗಂಗೆ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಗೀತ ಗಂಗೆಯಲ್ಲಿ ಲೀನವಾದ 'ಗಾಯನ ಗಂಗೆ'
ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಲೋಕದ ಸಾಮ್ರಾಜ್ಞಿ ಗಂಗೂಬಾಯಿ ಹಾನಗಲ್‌ 1913 ಮಾರ್ಚ್ 5ರಂದು ಹಾನಗಲ್‌ನಲ್ಲಿ ಜನಿಸಿದ್ದರು. ಇವರ ತಂದೆ ಚಿಕ್ಕೂರಾವ್ ನಾಡಗೀರ, ತಾಯಿ ಅಂಬಾಬಾಯಿ.

ಗಂಗೂಬಾಯಿ ಎಳೆವೆಯಲ್ಲಿಯೇ ಸಂಗೀತ ಕ್ಷೇತ್ರದತ್ತ ಒಲವು ಬೆಳೆಸಿಕೊಂಡಿದ್ದರು. ಅವರು ತಮ್ಮ ಪ್ರಾಥಮಿಕ (5ನೇ ತರಗತಿ) ಶಿಕ್ಷಣವನ್ನು ಧಾರವಾಡದಲ್ಲಿ ಆಲೂರು ವೆಂಕಟರಾಯರು ಸ್ಥಾಪಿಸಿದ ರಾಷ್ಟ್ರೀಯ ಶಾಲೆಯಲ್ಲಿ ಪೂರೈಸಿದ್ದರು. 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ, ಹಾನಗಲ್ ಅವರು ಮಹಾತ್ಮಾ ಗಾಂಧೀಜಿಯವರ ಎದುರು ಸ್ವಾಗತ ಗೀತೆಯನ್ನು ಹಾಡಿ ಗಾಂಧೀಜಿ ಹಾಗೂ ನೆರೆದ ಸಭಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

PTI
ಗಂಗೂಬಾಯಿ ತಾಯಿ ಅಂಬಾಬಾಯಿ ಸ್ವತಃ ಕರ್ನಾಟಕ ಸಂಗೀತದ ಗಾಯಕಿ. ತಾಯಿಗೆ ಗಂಗೂಬಾಯಿ ಹಿಂದೂಸ್ತಾನಿ ಸಂಗೀತ ಕಲಿಸುವ ಆಸೆ ಇತ್ತು. ಆ ಕಾಣರದಿಂದಾಗಿ ಆರಂಭದಲ್ಲಿ ದತ್ತೋಪಂತ ದೇಸಾಯಿ, ಕೃಷ್ಣಾಚಾರ್ಯ ಹುಲಗೂರ ಅವರಿಂದ ಸಂಗೀತ ಶಿಕ್ಷಣ ಪಡೆದ ಗಂಗೂಬಾಯಿ ನಂತರ ಸುಪ್ರಸಿದ್ಧ ಕಿರಾನಾ ಘರಾನಾ ಗಾಯಕರಾದ ಸವಾಯಿ ಗಂಧರ್ವ ಅವರ ಶಿಷ್ಯೆಯಾದರು. ತನ್ನ ಕರ್ನಾಟಕ ಸಂಗೀತ ಪದ್ದತಿ ಮಗಳ ಮೇಲೆ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ತಾಯಿ ಹಾಡುವುದನ್ನೇ ನಿಲ್ಲಿಸಿಬಿಟ್ಟಿದ್ದರು.!. ಇಂತಹ ತ್ಯಾಗಮಯಿ ತಾಯಿ 1932ರಲ್ಲಿ ವಿಧಿವಶರಾದರು. ಈ ಘಟನೆ ಗಂಗೂಬಾಯಿವರ ಮೇಲೆ ತೀವ್ರ ಆಘಾತ ಉಂಟುಮಾಡಿತ್ತು. ಕೆಲವು ವರ್ಷದ ನಂತರ ತಂದೆ ಚಿಕ್ಕೂರಾಯರೂ ಕಾಲವಾದರು.

1929ರಲ್ಲಿ ಹುಬ್ಬಳ್ಳಿಯ ವಕೀಲ ಗುರುನಾಥ ಕೌಲಗಿ ಅವರೊಂದಿಗೆ ಹಸೆಮಣೆ ಏರಿದ್ದರು. 1932ರಲ್ಲಿ ಎಚ್.ಎಂ.ವಿ. ಗ್ರಾಮಾಫೋನ್ ಕಂಪೆನಿ ಆಹ್ವಾನ ಮೇರೆಗೆ ಗಂಗೂಬಾಯಿ ಮುಂಬಯಿಗೆ ತೆರಳಿದರು. ಅಲ್ಲಿಂದ ಗಂಗೂಬಾಯಿಯವರ ಸಂಗೀತ ದಿಗ್ವಿಜಯ ಆರಂಭವಾಗುವ ಮೂಲಕ ದೇಶ-ವಿದೇಶಗಳಲ್ಲಿ ಜನಮನ್ನಣೆ ಪಡೆದರು.

ಸಂಗೀತಲೋಕದ ಮಹಾರಾಣಿ ಎಂಬ ಕೀರ್ತಿಗೆ ಗಂಗೂಬಾಯಿ ಭಾಜನರಾಗಿದ್ದರು ಕೂಡ ಅವರ ಜೀವನಯಾತ್ರೆ ಅನೇಕ ಸಂಕಷ್ಟಗಳಿಂದ ತುಂಬಿತ್ತು. ಗಂಗಜ್ಜಿಗೆ ಕೃಷ್ಣಾ, ಬಾಬೂ ಹಾಗೂ ನಾರಾಯಣ ಸೇರಿದಂತೆ ಮೂರು ಮಕ್ಕಳು. ಹುಬ್ಬಳ್ಳಿಯಲ್ಲಿ ತೆಗೆದುಕೊಂಡ ಮನೆ ಒತ್ತೆ ಹಾಕಿದ್ದರಿಂದ, ಸಾಲ ತೀರಿಸಲಾಗದೆ ಮನೆ ಹರಾಜಿಗೆ ಬಂದಿತ್ತು. ಆಗ ಉಪೇಂದ್ರ ನಾಯಕ ಎಂಬುವರೊಬ್ಬರು ತಾವೇ ಆ ಮನೆಯನ್ನು ಪಡೆದು, ಅದನ್ನು ಗಂಗೂಬಾಯಿ ಕುಟುಂಬಕ್ಕೆ ಮರಳಿಸಿ, ಹಣವನ್ನು ಅನುಕೂಲವಾದ ಹಾಗೆ ಕೊಡಿ ಎಂದಿದ್ದರು. ಈ ಸಮಯದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಪತಿ ಕೌಲಗಿ ಗಂಗೂಬಾಯಿ ಅವರು ದೆಹಲಿಗೆ ಸಂಗೀತ ಕಾರ್ಯಕ್ರಮಕ್ಕೆ ಹೋದಾಗಲೇ 1966 ಮಾರ್ಚ್ 6ರಂದು ವಿಧಿವಶರಾಗಿದ್ದರು.

ಹೀಗೆ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕದ ಮಹಾರಾಣಿಯಾಗಿ ಅಪಾರ ಅಭಿಮಾನಿಗಳನ್ನು ಪಡೆದಿದ್ದ ಗಂಗಜ್ಜಿ ಮಂಗಳವಾರ ಬೆಳಿಗ್ಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ವಿಧಿವಶರಾಗುವ ಮೂಲಕ ಸಂಗೀತ ಲೋಕ ಬಡವಾಗಿದೆ. ಬುಧವಾರ ಹುಬ್ಬಳ್ಳಿಯ ಕೇಶವಪುರದ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಗಂಗಜ್ಜಿಗೆ ಸಂದ ಪ್ರಮುಖ ಪ್ರಶಸ್ತಿಗಳು:

1962ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

1971 ಪದ್ಮಭೂಷಣ ಪ್ರಶಸ್ತಿ

1973-ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

1948-ಮಧ್ಯಪ್ರದೇಶ ಸರ್ಕಾರದಿಂದ ತಾನಸೇನ ಪ್ರಶಸ್ತಿ

1992-ಕರ್ನಾಟಕ ಸರ್ಕಾರದಿಂದ ಕನಕ-ಪುರಂದರ ಪ್ರಶಸ್ತಿ

1993-ಸಂಗೀತರತ್ನ ಟಿ.ಚೌಡಯ್ಯ ಸ್ಮಾರಕ ರಾಷ್ಟ್ರ ಪ್ರಶಸ್ತಿ

2002-ಪದ್ಮವಿಭೂಷಣ ಪ್ರಶಸ್ತಿ ಸೇರಿದಂತೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪದವಿ, ದೆಹಲಿ ವಿಶ್ವವಿದ್ಯಾಲಯ ಡಾಕ್ಟರೇಟ್ ಸೇರಿದಂತೆ 50ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಯೋತ್ಪಾದನೆಯೇ ಇಲ್ಲದಿದ್ದರೆ ಮಾತುಕತೆ "ಸಮಗ್ರ" ಹೇಗೆ?
ಸಂಗೀತ 'ಭೈರವಿ' ಡಿ.ಕೆ. ಪಾಟ್ಟ್ ಅಮ್ಮಾಳ್
ಉತ್ತರ ಪ್ರದೇಶ 'ಮಾಯಾ' ಜಾಲ: ತತ್ತರಿಸುತ್ತಿದೆ ಪ್ರಜಾಪ್ರಭುತ್ವ
ಕನ್ನಡಿಗ 'ಮುನಿಯ'ಲಿಲ್ಲ, ಆದರೂ ಅನ್ಯಾಯ ನಿಲ್ಲಲಿಲ್ಲ
ನಿಮ್ಮ ಅಭಿಪ್ರಾಯ ಬೇಕಾಗಿದೆ, ದಯವಿಟ್ಟು ಕ್ಲಿಕ್ ಮಾಡಿ
ಮಳೆ ಕ್ಷೀಣ: 'ಕಾವೇರ'ಲಿದೆಯೇ ತ.ನಾಡು-ಕರ್ನಾಟಕ !