ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಪ್ರೇಮವಿವಾಹ; ಕನಸುಗಳು ಬೆತ್ತಲಾಗುತ್ತಿಲ್ಲ, ಕತ್ತಲಾಗುತ್ತಿವೆ.. (Love marriage | Arranged marriage | Marriage failure | Bhuvan Puduvettu)
Bookmark and Share Feedback Print
 
- ಭುವನ್ ಪುದುವೆಟ್ಟು

ಅಜಯ್ ಮತ್ತು ಸುಮಾಳದ್ದು ಮೊದಲ ನೋಟದ ಪ್ರೀತಿ. ಕಾಲೇಜಿನಲ್ಲಾದ ಪ್ರೇಮ ಪರಸ್ಪರರು ತೊರೆಯಲಾಗದೆ ಮದುವೆಯೂ ಆದರು. ಆ ಮದುವೆಯ ಆಯಸ್ಸು ಪ್ರೀತಿಯಷ್ಟೂ ಇರಲಿಲ್ಲ. ಗಂಡನ ಹಿಂಸೆ ತಾಳಲಾರದೆ ಸುಮಾ ವಿಚ್ಛೇದನ ಪಡೆದುಕೊಂಡು ಒಂಟಿ ಜೀವನಕ್ಕೆ ಶರಣಾಗಿದ್ದಾಳೆ.

ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವರು ರಮೇಶ್-ಭಾವನಾ. ಹೊತ್ತಲ್ಲದ ಹೊತ್ತಿನಲ್ಲಿ ಹುಟ್ಟಿದ್ದ ಪ್ರೀತಿಗೆ ಮನೆಯವರ ವಿರೋಧವಿತ್ತು. ಯಾರ ಹಂಗೂ ಬೇಡವೆಂದು ಮದುವೆಯಾಗಿ ಸುಖ ಸಂಸಾರ ಸಾಗಿಸುತ್ತಿದ್ದರು. ಅದ್ಯಾವುದೋ ಕೆಟ್ಟ ಘಳಿಗೆಯಲ್ಲಿ ಒದರಿದ ಬುದ್ಧಿಯಿಂದ ಗಂಡನನ್ನು ಕೊಲೆ ಮಾಡಿ ಬಿಡುವ ಕಠಿಣ ನಿರ್ಧಾರಕ್ಕೆ ಪತ್ನಿ ಬಂದಿದ್ದಳು. ಇದಕ್ಕೆ ಸಾಥ್ ನೀಡಿದ್ದು ಆಕೆಯ ಎರಡನೇ ಪ್ರೇಮಿ.

** ** **

ಮೇಲೆ ನೀಡಲಾದ ಉದಾಹರಣೆಗಳು ಪ್ರೇಮ ವಿವಾಹದ ಎರಡು ಬರ್ಬರ ಫಲಿತಾಂಶಗಳು. ಹಾಗೆಂದು ಪ್ರೇಮ ವಿವಾಹಗಳೆಲ್ಲ ಹಾಗೆ ಎಂದು ಏಕರೂಪಿಯಾಗಿ ತಿಳಿದುಕೊಳ್ಳಬೇಕಾಗಿಲ್ಲ.

ಯಾವುದೋ ಇಂಜಿನಿಯರ್ ತನ್ನ ಪತ್ನಿಯನ್ನು ಬರ್ಬರವಾಗಿ ಕತ್ತು ಸೀಳಿ ಕೊಂದು ಹಾಕುತ್ತಾನೆ, ಹತ್ತಾರು ವರ್ಷಗಳ ಕಾಲ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ್ದವರು ಮದುವೆಯಾದ ಎರಡೇ ವರ್ಷಗಳಲ್ಲಿ ದುಷ್ಮನ್‌ಗಳಾಗಿ ಬದಲಾಗುತ್ತಾರೆ. ಅವರು ಕಂಡ ಕನಸಿನ ಜೀವನ ಮದುವೆಯ ನಂತರ ಅವರದ್ದಾಗುತ್ತಿಲ್ಲ. ಈ ರೀತಿ ಲವ್ ಮ್ಯಾರೇಜುಗಳು ಇತ್ತೀಚಿನ ದಿನಗಳಲ್ಲಿ ದುರಂತ ಅಂತ್ಯ ಕಾಣುತ್ತಿರುವುದು ಹೆಚ್ಚಾಗುತ್ತಿರುವುದು ಸುತ್ತ-ಮುತ್ತ ನಡೆಯುತ್ತಾ ಬಂದಿದೆ.

ಪ್ರೇಮ ವಿವಾಹ ಮತ್ತು ಗುರು-ಹಿರಿಯರು ನಿಶ್ಚಯಿಸಿ ಮಾಡಿದ ವಿವಾಹ -- ಎರಡರಲ್ಲೂ ನ್ಯೂನತೆಗಳಿವೆ. ವಿಫಲತೆಯೆನ್ನುವುದು ಮದುವೆಯ ಪ್ರಕಾರದಲ್ಲಿಲ್ಲ, ಅದು ಬದುಕುವ ರೀತಿಯಲ್ಲಿರುತ್ತದೆ; ಇಬ್ಬರ ಮನಸ್ಸೂ ಪರಿಪೂರ್ಣವಾಗಿದ್ದರೆ, ಹೊಂದಾಣಿಕೆಯಿದ್ದರೆ ಸಂಬಂಧಗಳು ಸ್ಥಿರವಾಗಿ ಉಳಿಯುತ್ತದೆ -- ಪ್ರೀತಿಸಿ ಮದುವೆಯಾಗಿ ಯಶಸ್ವಿಯಾದವರು ಅಥವಾ ಈ ಬಗ್ಗೆ ದೂರದಿಂದ ನೋಡಿದವರು ಹೇಳುವ ಮಾತಿದು. ಇದು ವಾಸ್ತವತೆಗೆ ಹತ್ತಿರವಾದಂತೆ ಭಾಸವಾದರೂ ಹಲವು ಅಂಶಗಳು ಮದುವೆಯ ಪ್ರಕಾರಗಳ ಮೇಲೆ ನಿಂತಿದೆ ಎನ್ನುವುದನ್ನು ಅಲ್ಲಗಳೆಯಲಾಗದು.
PR

ಪ್ರೀತಿಯೆಂದರೆ ಹಾಗೆ, ಅದರ ಆಳ-ಅಗಲವನ್ನು ಅಳೆದು ತೂಗುವುದು ಕಷ್ಟ. ಪ್ರೀತಿಯಲ್ಲಿ ಬಿದ್ದವರಿಗೆ ತಮ್ಮ ಪ್ರೀತಿಯೇ ಶ್ರೇಷ್ಠ, ನಮ್ಮಷ್ಟು ತೀವ್ರವಾಗಿ ಇನ್ಯಾರೂ ಪ್ರೀತಿ ಮಾಡಿರಲು ಸಾಧ್ಯವೇ ಇಲ್ಲ ಮತ್ತು ಪ್ರೀತಿಸುತ್ತಿರುವಾಗ ತಾವು ಮಾಡಿದ್ದೆಲ್ಲ ಸರಿ ಎಂಬ ಭಾವನೆ ತಲೆಗೆ ಅಡರುವುದು ಸಾಮಾನ್ಯ. ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದನ್ನು ಮರೆಸುವ ಭಾವ ತೀವ್ರತೆಯನ್ನು ಒದಗಿಸುವ ಶಕ್ತಿ ಪ್ರೀತಿಗೆ ಬಿಟ್ಟರೆ ಬೇರೆ ಇನ್ಯಾವುದಕ್ಕೂ ಇರಲಾರದು.

ಈ ಪ್ರೀತಿಗೆ ಪ್ರೇರಕವಾಗಿರುವ ಕಾಮವು ಕೆಲವರಲ್ಲಿ ಸುಪ್ತವಾಗಿದ್ದರೆ, ಹೆಚ್ಚಿನವರಲ್ಲಿ ವ್ಯಕ್ತ ರೀತಿಯಲ್ಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಂತೂ ಪ್ರೀತಿಗಾಗಿ ಕಾಮ ಎನ್ನುವುದರ ಬದಲು, ಕಾಮಕ್ಕಾಗಿ ಪ್ರೀತಿ ಎನ್ನುವ ಸ್ಥಿತಿ ಉಂಟಾಗಿರುವುದನ್ನು ಎಲ್ಲರೂ ನೋಡಿರುತ್ತೇವೆ.

ಇಂತಹ ಹಲವು ಕ್ಲಿಷ್ಟತೆಗಳ ನಡುವೆ ಕೆಲವು ಹರಕು-ಮುರುಕು ಪ್ರೀತಿಗಳು ನಾನಾ ಕಾರಣಗಳಿಂದಾಗಿ ಬಿದ್ದು ಹೋಗುತ್ತಿರುವುದಕ್ಕೆ ವಿಶೇಷ ಕಾರಣಗಳನ್ನು ಹುಡುಕಲಾಗದು. ಇವನ್ನೆಲ್ಲ ಯಶಸ್ವಿಯಾಗಿ ದಾಟಿದ ಪ್ರೀತಿಯಿದ್ದರೆ ಮದುವೆಯಲ್ಲಿ ಲೀನವಾಗುತ್ತದೆ. ಆ ಮೂಲಕ ಅಷ್ಟರತನಕ ಪ್ರೀತಿಯಲ್ಲಿ ವಿಹರಿಸುತ್ತಿದ್ದವರು ವಾಸ್ತವ ಜೀವನಕ್ಕೆ ಮರಳುತ್ತಾರೆ.

ಇಲ್ಲಿ ಕೆಲವರು ತಮ್ಮ ಮನೆ-ಮಂದಿಯ ಒಪ್ಪಿಗೆ ಪಡೆದೇ ವಿವಾಹವಾದರೆ, ಹೆಚ್ಚಿನವರಿಗೆ ಅದು ಸಾಧ್ಯವಾಗುವುದಿಲ್ಲ. ಹೀಗೆ ಮನೆಯವರನ್ನು ಧಿಕ್ಕರಿಸಿ ದಾಂಪತ್ಯ ಆರಂಭಿಸಿದವರಿಗೆ, ಗುರು-ಹಿರಿಯರ ಒಪ್ಪಿಗೆಯಿಂದ ಮದುವೆಯಾದವರು ಅನುಭವಿಸುವ ಎಲ್ಲಾ ಸುಖ-ಸಂತೋಷಗಳು ಒಲಿಯುವುದು ಕಷ್ಟ.

ಮದುವೆಯಾದ ದಂಪತಿಗಳಲ್ಲಿರುವ ಸಾಮಿಪ್ಯತೆಯ ದುಗುಡ-ದುಮ್ಮಾನಗಳು ಪ್ರೀತಿಸಿ ಮದುವೆಯಾದವರಲ್ಲಿ ಇರುವುದು ಅಪರೂಪ. ಅವರದ್ದು ಆಗಲೇ ಪರಿಚಯವಾಗಿ ಮೇಲ್ಮುಖವನ್ನು ತಿಳಿದುಕೊಂಡಿರುವ ಹಂತ. ಅವರು ಪ್ರೇಮಿಗಳಾಗಿದ್ದಾಗಲೇ ಒಂದಲ್ಲ ಒಂದು ರೀತಿಯಲ್ಲಿ ಹತ್ತಿರವಾಗಿ ವ್ಯಕ್ತಿತ್ವವನ್ನು ಅರಿತುಕೊಂಡಿರುತ್ತಾರೆ. ಹಾಗಾಗಿ ಅವರಿಗಿರುವ ನಂತರ ಹಂತ ವಾಸ್ತವತೆಯ ದರ್ಶನ.

ಅದು ತಾವು ಪ್ರೀತಿಯಲ್ಲಿ ಕಂಡ ಮುಗ್ಧ ಪ್ರೇಮದ ಲೇಪನವಿದ್ದ ಮುಖದ ತದ್ವಿರುದ್ಧ ಮುಖವೂ ಆಗಿರಬಹುದು. ಕಂಡ ತುಂಟತನಗಳು ನಂತರ ಪಥ್ಯವಾಗದೇ ಇರಬಹುದು. ಬದಲಾವಣೆ ಬೇಕೆನಿಸಬಹುದು.

ಬದಲಾವಣೆ ಜಗನಿಯಮ. ಇದರಿಂದ ಕಲ್ಲೂ ಹೊರತಲ್ಲ. ಹೊಂದಾಣಿಕೆ ಮಾಡಿಕೊಳ್ಳಬೇಕು ಎನ್ನುವುದು ಉಪದೇಶ, ಆದರೆ ಇದನ್ನು ವಾಸ್ತವದಲ್ಲಿ ಅಳವಡಿಸಿಕೊಳ್ಳುವುದು ಪ್ರಾಯೋಗಿಕವಾಗುತ್ತದೆ. ಹೇಳಿದಷ್ಟು ಸುಲಭದಲ್ಲಿ ಮಾಡಿ ಮುಗಿಸುವ ಕೆಲಸ ಇದಾಗಿರುವುದಿಲ್ಲ. ಬ್ಯಾಚುಲರ್ ಜೀವನದಲ್ಲಿದ್ದ ಆತುರದ ನಿರ್ಧಾರಗಳು, ಜವಾಬ್ದಾರಿಯಿರದ ಜೀವನಕ್ಕೆ ಅಪಾರ ತಾಳ್ಮೆ ಮತ್ತು ಹೊಣೆಗಾರಿಕೆಯನ್ನು ಹೊರಿಸಿಕೊಂಡು ಸಂಸಾರ ನೌಕೆಗೆ ಹುಟ್ಟು ಹಾಕುವುದು ಇಬ್ಬರ ಕರ್ತವ್ಯವೂ ಆಗಿರುತ್ತದೆ.

ಅದು ನಡೆಯದೇ ಹೋದಾಗ ಎಲ್ಲವೂ ಮತ್ತು ಯಾವುದೂ ಸರಿಯಿಲ್ಲ ಎಂಬ ಸ್ಥಿತಿಗೆ ಬದುಕು ಒರಗಬಹುದು. ಶಾಶ್ವತ ಅಂಗಿಯನ್ನು ತೊಟ್ಟುಕೊಂಡ ನಂತರ ನಮ್ಮ ಆಯ್ಕೆ ತಪ್ಪಾಯಿತೇನೋ, ದುಡುಕಿ ಬಿಟ್ಟೆ ಎಂಬ ಭಾವಗಳು ಕಾಡಬಹುದು.

ಹಾಗಿದ್ದರೆ ಈ ಪ್ರೇಮಿಗಳು ಹೆತ್ತವರ ಅನುಮತಿಯಿಲ್ಲದೆ ಮದುವೆಯಾದರೆ ಯಾವ ರೀತಿಯ ತೊಂದರೆಗಳನ್ನು ಎದುರಿಸುತ್ತಾರೆ ಮತ್ತು ಯಾಕಾಗಿ ಇಂತಹ ವಿವಾಹಗಳಲ್ಲಿ ಆಜನ್ಮಕ್ಕಾಗುವಷ್ಟಿದ್ದ ಪ್ರೀತಿಯ ಒರತೆಗಳು ಕೆಲವೇ ದಿನಗಳಲ್ಲಿ, ಕೆಲವರಿಗೆ ವರ್ಷಗಳಲ್ಲಿ ಬತ್ತಿ ಹೋಗುತ್ತವೆ ಎಂಬುದನ್ನು ನೋಡೋಣ.

** ಪುರುಷರು, ಬಹುತೇಕ ಮಹಿಳೆಯರು ಕೂಡ ಅತಿಯಾದ ಪೊಸೆಸಿವ್‌ನೆಸ್‌ನಿಂದ ಬಳಲುವುದು ಪ್ರೇಮ ವಿವಾಹಗಳಲ್ಲಿ ಸಾಮಾನ್ಯ. ಹೇಳಿಕೇಳಿ ಇದು ಪ್ರೇಮದ ಮೂಲಾಂಶಗಳಲ್ಲಿ ಒಂದಾಗಿರುವ ವಿಚಾರ. ಒಂದು ಹಂತದ ಈ ಪ್ರವೃತ್ತಿ ಒಳ್ಳೆಯದಾದರೂ, ಅತಿಯಾದರೆ ಅದೇ ಜೀವನಕ್ಕೆ ಮುಳುವಾಗುತ್ತದೆ. ಇದರ ಫಲಿತಾಂಶವೇ ಸಂಶಯ. ಸಂಸಾರದ ನೌಕೆ ನೀರು ಪಾಲಾಗಲು ಕಾರಣವಾಗುವ ವಿಚಾರವಿದು. ಆಕೆ/ಆತ ಯಾರ ಜತೆ ಮಾತನಾಡಿದರೂ ಅದಕ್ಕೊಂದು ಸಂಬಂಧ ಕಲ್ಪಿಸುವ ಹುಚ್ಚಾಟ ಹೆಚ್ಚಿದಂತೆ ಬಿರುಕು ಕೂಡ ದೊಡ್ಡದಾಗುತ್ತಾ ಹೋಗುತ್ತದೆ. ಅಂತಿಮವಾಗಿ ಎಲ್ಲಾ ಆಯ್ಕೆಗಳೂ ಮುಗಿದಿರುತ್ತವೆ.

** ಮದುವೆಯ ಮೊದಲೆಲ್ಲ ಕರೆದಲ್ಲಿಗೆಲ್ಲ ಗಂಟೆಗೂ ಮೊದಲು ಹಾಜರಾಗುತ್ತಿದ್ದವ ಮನೆಗೇ ಲೇಟಾಗಿ ಬರುತ್ತಿದ್ದಾನೆ. ಎಲ್ಲೆಲ್ಲೋ ಕರೆದುಕೊಂಡು ಹೋಗುತ್ತಿದ್ದಾತ ಕನಿಷ್ಠ ಸಿನಿಮಾಕ್ಕೂ ಹೋಗೋಣ ಎಂದು ಹೇಳುತ್ತಿಲ್ಲ. ಈತ ಬದಲಾಗುತ್ತಿದ್ದಾನೆ, ದೂರವಾಗುತ್ತಿದ್ದಾನೆ ಎಂಬ ಭೀತಿ ಪತ್ನಿಗೆ ಕಾಡಬಹುದು.

** ಇಬ್ಬರೇ ಇದ್ದರೆ ಜೀವನ ಸುಖವಾಗಿರುತ್ತದೆ. ನಮ್ಮನ್ನು ಕೇಳುವವರೇ ಇರುವುದಿಲ್ಲ ಎನ್ನುವ ಭಾವನೆ ಕೆಲವೇ ದಿನಗಳಲ್ಲಿ ಸುಳ್ಳಾಗಬಹುದು. ಹಿರಿಯರ ಜತೆಗಿಲ್ಲದ/ ಪ್ರತ್ಯೇಕವಾಗಿ ವಾಸಿಸುತ್ತಿರುವ ಗಂಡ/ ಹೆಂಡತಿಯ ಪ್ರಪಂಚ ತೀರಾ ಪುಟ್ಟದೆನಿಸಿ ಒಂಟಿತನ ಬಾಧಿಸಬಹುದು.
IFM

** ನಮ್ಮದು ಅಘೋಷಿತ ಪುರುಷ ಪ್ರಧಾನ ಸಮಾಜ. ಅದೆಷ್ಟೇ ರಸಿಕ ಶಿಖಾಮಣಿಯಾದರೂ ಬಹುತೇಕ ಪುರುಷರು ತಮ್ಮ ಪತ್ನಿ ಸಾವಿತ್ರಿಯಾಗಿರಬೇಕು ಮತ್ತು ನನ್ನನ್ನು ಗೌರವಿಸಬೇಕು ಎಂಬ ಆದಿ ನಿರೀಕ್ಷೆಯನ್ನು ಬಿಟ್ಟುಕೊಡಲಾರರು. ಆದರೆ ಪ್ರೀತಿಸಿ ಮಾಡಿಕೊಂಡ ಮದುವೆಯಲ್ಲಿ ಇದರ ನಿರೀಕ್ಷೆಗೆ ಸೂಕ್ತ ಪ್ರತಿಕ್ರಿಯೆ ಲಭಿಸುವುದು ಕಷ್ಟ. ಪ್ರಣಯ ಪಕ್ಷಿಗಳಾಗಿದ್ದ ಸಂದರ್ಭದಲ್ಲಿ ಗೌರವದ ಎಲ್ಲೆಯನ್ನು ದಾಟಿದವರು ವೈವಾಹಿಕ ಜೀವನದಲ್ಲಿ ಅದನ್ನು ನಿರೀಕ್ಷಿಸುವುದು ಸರಿಯಲ್ಲವಾದರೂ, ವಾಸ್ತವದಲ್ಲಿ ನಿರೀಕ್ಷಿಸುವುದು ಸಹಜ.

** ಪ್ರೀತಿಸಿ ಮದುವೆಯಾಗುವವರ ಮಾನಸಿಕ ಮದುವೆ ಮೊದಲೇ ನಡೆದಿರುತ್ತದೆ. ಅಧಿಕೃತ ಮದುವೆಯಷ್ಟೇ ಬಾಕಿ ಉಳಿದಿರುತ್ತದೆ. ಎಲ್ಲರ ಒಪ್ಪಿಗೆಯೊಂದಿಗೆ ನಡೆದ ಮದುವೆಯಲ್ಲಿರುವ ಅರ್ಧದಷ್ಟು ಕುತೂಹಲ ಆಗಲೇ ತಣಿದಿರುತ್ತದೆ. ಹಾಗಾಗಿ ಇವರದ್ದು ನೇರವಾಗಿ ವಾಸ್ತವತೆಗೆ ಮರಳುವ ಜೀವನವಾಗಿ ಬಿಡುವ ಸಾಧ್ಯತೆಗಳೇ ಹೆಚ್ಚು. ಮದುವೆಗೂ ಮೊದಲು ದೈಹಿಕ ಸಂಬಂಧವನ್ನೂ ಬೆಳೆಸಿಕೊಂಡಿದ್ದರೆ ನಿರೀಕ್ಷೆಗಳಿಗೆ ಅವಕಾಶವೇ ಇರುವುದಿಲ್ಲ.

** ಮನೆಯವರನ್ನು ಧಿಕ್ಕರಿಸಿ ಮದುವೆಯಾದವರಾದರೆ ಸಾಮಾನ್ಯವಾಗಿ ಇಬ್ಬರೇ ಪ್ರತ್ಯೇಕವಾಗಿ ವಾಸಿಸಬೇಕಾಗುತ್ತದೆ. ಇಬ್ಬರೇ ಎಂದರೆ ತಾವು ಬಾನಾಡಿ ಹಕ್ಕಿಗಳು ಎಂಬ ಕಲ್ಪನೆ ಕೆಲ ದಿನಗಳಲ್ಲೇ ಹುಸಿಯಾಗಬಹುದು. ಆರ್ಥಿಕ ಸಮಸ್ಯೆಗಳು ಎದುರಾದಾಗ, ಪತಿ-ಪತ್ನಿಯರ ನಡುವೆ ಕ್ಷುಲ್ಲಕ ಜಗಳಗಳು ಕಾಣಿಸಿಕೊಂಡಾಗ ಇತರರು ಇಲ್ಲದ ಮನೆಯಲ್ಲಿ ಸಮಸ್ಯೆ ಪರಿಹಾರ ಕಷ್ಟ. ಸಣ್ಣ ವಿಚಾರಗಳೂ ಅಹಂಗೆ ಬಿದ್ದು ಹೆಚ್ಚು ನೋವನ್ನು ತರುವ ಗಾಯಗಳಾಗಬಹುದು.

** ವೈವಾಹಿಕ ವಯಸ್ಸಿಗೆ ಬಂದ ಮಾತ್ರಕ್ಕೆ ತಾವು ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ತಿಳಿಯುವ ಜೋಡಿಯಲ್ಲಿ ಪ್ರೌಢತೆಯ ಸಮಸ್ಯೆಯೂ ಕಾಣಿಸಬಹುದು. ಹಿರಿಯರ ಸಲಹೆಗಳಿಲ್ಲದೆ ಮಕ್ಕಳಂತೆ ವರ್ತಿಸಲು ಹೋಗಿ ಪರಿಸ್ಥಿತಿ ಕೆಟ್ಟು ಹೋಗಬಹುದು.

** ಪ್ರೀತಿಯ ಮತ್ತೊಂದು ಮುಖವಾಗಿರುವ ದೈಹಿಕ ಆಕರ್ಷಣೆ ಕೆಲವೇ ದಿನಗಳಲ್ಲಿ ಮುಗಿದು ಹೋದಾಗ, ಪ್ರೀತಿ ಎಂದರೆ ಇಷ್ಟೇನಾ ಎಂಬ ಭಾವನೆ ಮೂಡುವ ಸಾಧ್ಯತೆಗಳಿವೆ. ಕೌಟುಂಬಿಕ ವಾತಾವರಣದಲ್ಲಿದ್ದರೆ ಇಂತಹ ಅಧ್ವಾನಕ್ಕೆ ಅವಕಾಶ ಕಡಿಮೆ. ತಮ್ಮದೇ ಆದ ಕರ್ತವ್ಯಗಳನ್ನು ನಿಭಾಯಿಸುವ ಹೊಣೆಗಾರಿಕೆಗಳು ಬೀಡುಬೀಸಾದ ವರ್ತನೆಗಳಿಗೆ ಕಡಿವಾಣ ಹಾಕುವುದರಿಂದ ಸಮತೋಲಿತ ರೀತಿಯಲ್ಲಿ ಸಂಸಾರ ಸಾಗಬಹುದು.

** ಒಂದು ಮನೆಯಲ್ಲಿ ಇಬ್ಬರೇ ಇರುವುದೆಂದರೆ ಸ್ವಾತಂತ್ರ್ಯವೆನ್ನುವುದು ಸಂತೋಷಕ್ಕೆ ಎಂದು ಭಾವಿಸಿದ್ದವರಿಗೆ ಅದು ಕೋಪ ಮತ್ತು ಮಾತು ನಿಯಂತ್ರಣ ತಪ್ಪುವುದಕ್ಕೂ ಅನ್ವಯವಾಗುತ್ತದೆ ಎಂದು ತಿಳಿದಾಗ ತಡವಾಗಿರುತ್ತದೆ. ಪರಿಪೂರ್ಣ ವ್ಯಕ್ತಿಯಿರದ ಜಗತ್ತಿನಲ್ಲಿ ಹುಳುಕುಗಳು ಕಂಡಾಗ ವ್ಯಂಗ್ಯ-ಲೇವಡಿಗಳೇ ಹೆಚ್ಚಾಗಿ ಮುಳುವಾಗಲೂ ಬಹುದು.

** ಪ್ರೇಮ ವಿವಾಹದಲ್ಲಿ ಜಾತಿ, ಅಂತಸ್ತು, ವಿದ್ಯೆ, ಅರ್ಹತೆ ಪ್ರಶ್ನೆಗಳು ಕೆಲವು ಬಾರಿ ನಗಣ್ಯವಾಗಿ ಬಿಡುತ್ತವೆ. ಆದರೆ ಮದುವೆಯ ಬಳಿಕ ಅಭಿರುಚಿ, ಆಸಕ್ತಿಗಳು ವಾಕರಿಕೆ ಹುಟ್ಟಿಸಿದರೆ ಅಂತಸ್ತು, ವಿದ್ಯೆ, ಅರ್ಹತೆಗಳು ದಂಪತಿಗಳಲ್ಲಿ ಪರಸ್ಪರ ಚುಚ್ಚುವಂತೆ ಮಾಡಬಹುದು. ಭಾವನೆಗಳಿಗೆ ಗೌರವ ಸಿಗುತ್ತಿಲ್ಲ ಎಂಬ ಭಾವವೂ ಕೊರೆಯಬಹುದು.

** ಸಾಮಾಜಿಕ ಮೌಲ್ಯಗಳ ಕೊರತೆ, ಕೌಟುಂಬಿಕ ಕಟ್ಟುಪಾಡುಗಳು ಇಲ್ಲದೇ ಇರುವುದು ಪ್ರೇಮ ವಿವಾಹದ ಮತ್ತೊಂದು ಮೈನಸ್ ಪಾಯಿಂಟ್. ಹಬ್ಬ-ಹರಿದಿನಗಳ ಆಚರಣೆ-ಸಂಭ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು ಅಥವಾ ಇತರ ಸಮಾರಂಭಗಳು ಇಬ್ಬರೇ ಇರುವ ಮನೆಯಲ್ಲಿ ಕಳೆಗಟ್ಟುವುದು ಕಷ್ಟ. ಏಕರಾಗದಲ್ಲಿ ಸಾಗುತ್ತಿರುವ ಸಂಸಾರಕ್ಕೆ ಈ ಅಂಶಗಳ ಕೊರತೆ ಮಾರಕವೆನಿಸಬಹುದು.

** ಹುಡುಗ ಅಥವಾ ಹುಡುಗಿಯನ್ನು ಪ್ರೀತಿಸಲು ಕಾರಣಗಳು ಇಲ್ಲ ಎಂದೇ ಹೇಳಲಾಗುತ್ತದೆ. ಆದರೂ ಬಹುತೇಕರ ಜೀವನದ ಪ್ರೀತಿಯ ಬಿರುಗಾಳಿಗೆ ಆಕರ್ಷಣೆಯೇ ಮೊದಲ ಅಂಶ. ಇಲ್ಲಿ ಹುಡುಗಿಯ ಚೆಲ್ಲುಚೆಲ್ಲು ನಡೆ-ನುಡಿಗಳು, ರೂಪ ಮತ್ತಿತರ ವಿಚಾರಗಳು, ಹುಡುಗನ ತುಂಟತನ, ಭಾವನೆಗಳಿಗೆ ಸ್ಪಂದಿಸುವ ರೀತಿಗಳು ಬೇಕೆನಿಸಬಹುದು. ಮದುವೆಯಾದ ನಂತರದ ವಾತಾವರಣದಲ್ಲಿ ಇದು ಮುಂದುವರಿಯುವುದು ಕಷ್ಟ.

** ಪ್ರೀತಿಸಿ ಮದುವೆಯಾದವರಿಗೆ ಮದುವೆಯ ನಂತರ ನಿರೀಕ್ಷಿಸಿದ ಪ್ರೀತಿ ಕಾಣದೇ ಇದ್ದಾಗ ಮತ್ತೆ ಪ್ರೀತಿಗಾಗಿ ಹಾತೊರೆಯುವ ಸಾಧ್ಯತೆಗಳು ಹೆಚ್ಚು. ಇದರ ಪರಿಣಾಮ ಮತ್ತೊಂದು ಪ್ರೇಮಕ್ಕೆ ಬೇಲಿ ಹಾರುವ ಅವಕಾಶ ಸೃಷ್ಟಿಯಾಗಬಹುದು ಅರ್ಥಾತ್ ಅಕ್ರಮ ಸಂಬಂಧಕ್ಕೆ ಹೇತುವಾಗಬಹುದು.

** ಕುಟುಂಬವನ್ನು ಎದುರು ಹಾಕಿಕೊಂಡು ಮಾಡಿಕೊಳ್ಳುವ ಮದುವೆಯಲ್ಲಿ ಇಬ್ಬರೂ ತಾವು ಸರ್ವಾಧಿಕಾರಿಗಳಂತೆ ವರ್ತಿಸುವ ಸಾಧ್ಯತೆಗಳು ಗರಿಷ್ಠ. ಪತ್ನಿಯಾದವಳು ತಾನು ಸ್ವತಂತ್ರಳೆಂಬ ವಾದಕ್ಕೆ ಪುಷ್ಠಿ ನೀಡುತ್ತಾ ಹೋದಂತೆಲ್ಲ ಪತಿಯಾದವನ ಪುರುಷ ಸಹಜ ಅಹಂಗೆ ಏಟು ಬಿದ್ದಂತಾಗಬಹುದು. ಆತ ವಿಧಿಸುವ ಕಟ್ಟುಪಾಡುಗಳು ಪತ್ನಿಯಾದವಳಿಗೆ ಇಷ್ಟವಾಗದೇ ಹೋಗಬಹುದು.

** ಅತ್ತೆಯಿಲ್ಲದ ಮನೆ, ಗಂಡ-ಹೆಂಡತಿ ಇಬ್ಬರೇ ಎಂಬುವುದು ಕಲ್ಪನೆಗೆ ಮಾತ್ರ ತುಂಬಾ ಹಿತವನ್ನು ನೀಡಬಹುದು. ವಾಸ್ತವದಲ್ಲಿ ಇಂತಹ ವಿಚಾರಗಳು ಕೂಡ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೂ ಪರಸ್ಪರ ಸಹಕಾರ ಮನೋಭಾವ ಇದ್ದಲ್ಲಿ ಸಮಸ್ಯೆಗಳಿರದು. ಅಡುಗೆ ಮನೆಯೆಂದರೆ ಪತ್ನಿಗೆ ಮಾತ್ರ ಮೀಸಲು ಎಂಬಂತಹ ವಿಚಾರ ಬಂದಾಗಲೆಲ್ಲ ಮನಸ್ಸುಗಳು ಮುನಿದುಕೊಳ್ಳಬಹುದು. ತುಂಬಿದ ಮನೆಯಲ್ಲಾದರೆ ಇಂತಹ ಪ್ರಶ್ನೆಗಳಿಗೆ ಅವಕಾಶ ಕಡಿಮೆ.

(ಇಲ್ಲಿ ಆರೆಂಜ್ಡ್ ಮ್ಯಾರೇಜ್ ಅಥವಾ ಹಿರಿಯರ ಒಪ್ಪಿಗೆಯಿಂದಾದ ಲವ್ ಮ್ಯಾರೇಜ್‌ಗಳಲ್ಲಿ ಉಂಟಾಗುವ ವೈಫಲ್ಯತೆಗಳನ್ನು ಚರ್ಚಿಸಲು ಹೋಗಿಲ್ಲ. ಕೇವಲ ಹೆತ್ತವರ ಒಪ್ಪಿಗೆಯಿಲ್ಲದೆ ಮದುವೆಯಾಗುವ ಪ್ರೇಮಿಗಳ ವಿಚಾರವನ್ನಷ್ಟೇ ತೆಗೆದುಕೊಳ್ಳಲಾಗಿದೆ)
ಸಂಬಂಧಿತ ಮಾಹಿತಿ ಹುಡುಕಿ