ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಮಾವನ ಮಗಳೂ ಕಸಿನ್, ದೊಡ್ಡಪ್ಪನ ಮಗಳೂ ಕಸಿನ್..!
(Lifestyle | Relationships | Indian relationships | Bhuvan Puduvettu)
ರಕ್ತಸಂಬಂಧಕ್ಕೆ ಬೆಲೆ ಕಟ್ಟಲಾದೀತೇ? ಅದರಲ್ಲೂ ಅಪ್ಪ-ಅಮ್ಮ, ಗಂಡ-ಹೆಂಡತಿ, ಅಣ್ಣ-ತಮ್ಮ, ಅಕ್ಕ-ತಂಗಿ, ಅಜ್ಜ-ಅಜ್ಜಿ ಮುಂತಾದ ಸಂಬಂಧಗಳಂತೂ ಒಂದೇ ಮನೆಯಲ್ಲಿ ಕಷ್ಟಗಳನ್ನು ಮರೆತು ಬೆರೆಯುವ ಜೀವಗಳು. ಕಾಲದ ಜತೆ ಸಂಬಂಧಗಳ ಆತ್ಮೀಯತೆಗಳು, ಬಗೆಗಳು ಬದಲಾಗುತ್ತಿರುವುದನ್ನು ಒಪ್ಪಿಕೊಳ್ಳುತ್ತಾ, ಸಂಬಂಧಗಳ ವಿಚಾರದಲ್ಲಿ ನಾಡು ನುಡಿ ಹೇಗೆ ಭಿನ್ನ ಎಂದು ತಿಳಿದುಕೊಳ್ಳುವ ಯತ್ನವಿದು.
ನಾವು ಕನ್ನಡಿಗರಂತೂ ಮೊದಲೇ ಪರಭಾಷಾಭಿಮಾನಿಗಳು. ಇತರ ಭಾಷೆಗಳ ಎಲ್ಲವೂ ನಮಗೆ ನಮ್ಮಲ್ಲಿರುವುದಕ್ಕಿಂತ ಇಷ್ಟ. ಇದಕ್ಕೆ ಆಧುನಿಕೀಕರಣದ ಲೇಪ ಮತ್ತಷ್ಟು ಬಳಿದು ಕನ್ನಡಿಗ ಎಂದು ಹೇಳಿಕೊಳ್ಳುವುದು ಅಥವಾ ಕನ್ನಡ ಮಾತನಾಡುವುದು ಅಪಮಾನ, ಅವಿದ್ಯಾವಂತರ ಲಕ್ಷಣ ಎಂದು ಬಹುತೇಕರು ನಿರ್ಧರಿಸಿಯಾಗಿದೆ.
ಇದೇ ನಿಟ್ಟಿನಲ್ಲಿ ಕನ್ನಡದ ಕಂಪು ಮಾಸುತ್ತಿರುವುದನ್ನು ಕಾಣುತ್ತಿದ್ದೇವೆ. ಅಪ್ಪನ ಜಾಗದಲ್ಲಿ ಡ್ಯಾಡಿ, ಅಮ್ಮನ ಜಾಗದಲ್ಲಿ ಮಮ್ಮಿ ಪದಗಳು ನಮ್ಮ ನಡುವೆ ಜಾಗ ಪಡೆದಿವೆ. ಅಮ್ಮ ಎಂಬ ಎರಡೂವರೆ ಅಕ್ಷರಗಳ ಶಬ್ದ ಉಂಟು ಮಾಡುವ ಮಮಕಾರವನ್ನು ಮಮ್ಮಿ ಎಂಬ ಮುರುಕು ಆಂಗ್ಲ ಪದ ಖಂಡಿತ ನೀಡದು. ಅಪ್ಪ ಎಂಬ ಪದಕ್ಕೆ ಡ್ಯಾಡಿ ಎನ್ನುವುದು ಸಮಾನ ಭಾವನೆಯನ್ನು ಉಕ್ಕಿಸುವುದೂ ಸಾಧ್ಯವಿಲ್ಲ.
ಅದು ಅಷ್ಟು ಪರಿಣಾಮಕಾರಿ ಸಂಬಂಧವನ್ನು ಬಿಂಬಿಸುವುದಿಲ್ಲ ಎಂದು ಅಪ್ಪ-ಅಮ್ಮ ಎಂದು ಕರೆಯುವ ನನ್ನಂತವರಷ್ಟೇ ವಾದಿಸಬಹುದು. ಯಾಕೆಂದರೆ ಮಕ್ಕಳು ಡ್ಯಾಡಿ-ಮಮ್ಮಿ ಎಂದು ಕರೆಯುವುದನ್ನು ಹೇಳಿಕೊಡುವವರು ಹೆತ್ತವರು ತಾನೇ? ನನ್ನ ಗಂಡ ಎನ್ನುವುದಕ್ಕಿಂತ My hubby ಎಂದೋ, ಪತ್ನಿ - ಹೆಂಡತಿಗಿಂತ Wife ಅಥವಾ Mrs ಎನ್ನುವುದೇ ಹೆಚ್ಚು ಘನತೆ - ಕಾರ್ಪೊರೇಟ್ ಲುಕ್ ಕೊಡುತ್ತದೆ ಎಂಬ ಭಾವವೂ ಜತೆಗಿರುವಾಗ ಕನ್ನಡ ಮತ್ತು ಭಾವನೆಗಳಿಗೆ ಮಹತ್ವ ಕಡಿಮೆಯಾಗುವುದು ಕೂಡ ಅಸಹಜವೇನಲ್ಲ.
ಸಂಬಂಧವೆಂದ ಕೂಡಲೇ ಅಲ್ಲಿ ಹತ್ತು ಹಲವಾರು ಮಗ್ಗುಲುಗಳು, ಕವಲುಗಳು. ಇಂಗ್ಲೀಷ್ ಪ್ರಭಾವದಿಂದ ಸಂಬಂಧಗಳನ್ನು ಗುರುತಿಸಿಕೊಳ್ಳುವಲ್ಲಿ ಮಾತ್ರ ನಾವು ವಿಫಲರಾಗುತ್ತಿರುವುದು ಮಾತ್ರವಲ್ಲ, ಸಂಬಂಧಗಳನ್ನು ನಿರ್ಲಕ್ಷಿಸುವುದನ್ನೂ ಆರಂಭಿಸಿ ಹಲವು ಕಾಲಗಳೇ ಕಳೆದಿವೆ.
ಸಂಬಂಧಿಗಳೆಂದರೆ ಊಟಕ್ಕೆಂದೇ ಮನೆಗೆ ಬಂದವರು ಎಂಬ ರೀತಿಯ ಭಾವನೆ, ಕಾಲದ ಜಂಜಾಟದಲ್ಲಿ ಸಮಯದ ಅಭಾವ ಎಂಬ ಲೇಪನ ಮುಂತಾದ ಹತ್ತು ಹಲವು ಕಾರಣಗಳಿಂದ ಸರಿಯಾಗಿ ಮುಖವನ್ನೂ ನೋಡದೆ ಯಾವುದೋ ಒಂದು ಅಂಕಲ್, ಆಂಟಿ ಅಥವಾ ಕಸಿನ್ ಎಂಬ ಪದಗಳನ್ನು ಎಸೆದು ನಿರಾಳವಾಗುವವರು ಈಗ ಅಪರೂಪವಲ್ಲ.
ಆದರೆ ಕನ್ನಡ ಹಾಗಲ್ಲ, ಸಂಬಂಧಗಳ ವಿಚಾರದಲ್ಲಿ ಆಂಗ್ಲ ಭಾಷೆಗಿಂತ ಹೆಚ್ಚಿನ ಸ್ಪಷ್ಟತೆಯನ್ನು ನಮ್ಮ ಮಾತೃಭಾಷೆ ಹೊಂದಿದೆ. ಇಲ್ಲಿ ಕೇವಲ ಕನ್ನಡವನ್ನಷ್ಟೇ ತೆಗೆದುಕೊಂಡರೇ ಪರಿಪೂರ್ಣವೆನಿಸದು. ಭಾರತೀಯ ಸಂಸ್ಕೃತಿಯಲ್ಲಿ ಗುರುತಿಸಲ್ಪಡುವ ಸಂಬಂಧಗಳಿಗೆ ಆಂಗ್ಲ ಭಾಷೆಯ ಪದಗಳು ಸೂಚಿಸುವ ಸಂಬಂಧಗಳು, ವ್ಯಾಖ್ಯಾನಗಳು ಆತ್ಮೀಯತೆಯನ್ನು ತಂದು ಕೊಡಲಾರವು.
ಇಲ್ಲಿ ನೆನಪಿಡಬೇಕಾದ ಮತ್ತೊಂದು ಅಂಶವೆಂದರೆ ಅಣ್ಣ, ತಮ್ಮ, ತಂಗಿ ಅಥವಾ ಅಕ್ಕ ಮುಂತಾದ ಪದಗಳಿಗೆ ಸಮಾನಾರ್ಥಕ ಪದಗಳು ಇಂಗ್ಲೀಷಿನಲ್ಲಿದ್ದರೂ, ಅವುಗಳನ್ನು ಬಳಸುವ ಬದಲು ಹೆಸರು ಹಿಡಿದೇ ಕರೆಯುವ ವಿಶೇಷತೆಯನ್ನು ಆ ಭಾಷೆ ಹೊಂದಿರುವುದು. ನಮ್ಮ ನಾಡು ನುಡಿ ಹಾಗಲ್ಲ, ನಮಗಿಂತ ಹಿರಿಯ ಸಂಬಂಧಿಕರಿದ್ದಲ್ಲಿ ಅವರ ಹೆಸರು ಕರೆಯುವ ಬದಲು ಸಂಬಂಧದಿಂದಲೇ ಕರೆಯುತ್ತೇವೆ. ಉದಾಹರಣೆಗೆ ಅಣ್ಣ, ಅಕ್ಕ, ಅತ್ತಿಗೆ ಮುಂತಾದುವು.
ಸಹೋದರಿ - sister, ಅಕ್ಕ - elder sister, ತಂಗಿ - younger sister, ಸಹೋದರ - brother, ಅಣ್ಣ - elder brother, ತಮ್ಮ - younger brother -- ಇಲ್ಲಿ ಅಕ್ಕ ಮತ್ತು ಅಣ್ಣ ಎಂಬುದನ್ನು ನಾವು ಅವರನ್ನು ಕರೆಯಲು ಬಯಸುತ್ತೇವೆ. ಉಳಿದ ಪದಗಳು ಸಂಬಂಧಗಳನ್ನು ಗುರುತಿಸಲು ಮಾತ್ರ ಬಳಕೆಯಾಗುತ್ತವೆ. ಆದರೆ ಆಂಗ್ಲ ಭಾಷೆಯಲ್ಲಿ ಈ ಎಲ್ಲಾ ಪದಗಳು ಬಹುತೇಕ ಸಂದರ್ಭಗಳಲ್ಲಿ ಸಂಬಂಧ ಗುರುತಿಸಲು ಮಾತ್ರ ಬಳಕೆಯಾಗುತ್ತವೆ.
ಇದೇ ರೀತಿ ಅತ್ತೆ - ಮಾವ (father in law - mother in law) ಎಂಬ ಶಬ್ದಗಳು. ಇದು ಸಂಬಂಧವನ್ನು ಗುರುತಿಸುವುದು ಮತ್ತು ಕರೆಯುವುದಕ್ಕೂ ಬಳಕೆಯಾಗುತ್ತವೆ. ಆಂಗ್ಲ ಭಾಷೆಯಲ್ಲಿ ಇವುಗಳು ಕೂಡ ಗುರುತಿಸುವುದಕ್ಕಷ್ಟೇ ಬಹುತೇಕ ಸೀಮಿತವಾಗುತ್ತದೆ.
ಇನ್ನು ಗಂಡ - husband, ಹೆಂಡತಿ - wife, ಮಗ - son, ಮಗಳು - daughter, ಮಗಳ ಗಂಡ ಅಳಿಯ - son in law, ಮಗನ ಹೆಂಡತಿ ಸೊಸೆ - daughter in law ಕಥೆಯೂ ಭಿನ್ನವಲ್ಲ.
ಮಕ್ಕಳ ಮನಸ್ಸನ್ನು ಹೆತ್ತವರಿಂತ ಹೆಚ್ಚಾಗಿ ಅಜ್ಜ-ಅಜ್ಜಿಯವರು ಸರಿಯಾಗಿ ಅರ್ಥ ಮಾಡಿಕೊಂಡಿರುತ್ತಾರೆ, ಮಕ್ಕಳಿಗೆ ಬೇಕಾದ ತಾಳ್ಮೆ ಅವರಲ್ಲಿರುತ್ತದೆ ಎಂಬ ಮಾತಿಗೆ ಅವೇ ಪದಗಳು ಸೂಕ್ತ. ಮನೆಯಲ್ಲೇ ಸಿಗುವ ಈ ಹಿರಿ ಜೀವಗಳನ್ನು grand father ಮತ್ತು grand mother ಎನ್ನಲಾಗುತ್ತದೆ. ಇದಕ್ಕೂ ಮಿಕ್ಕಿದ ಪೀಳಿಗೆಯೊಂದು ಉಳಿದಿದ್ದರೆ (ಮುತ್ತಜ್ಜ - ಮುತ್ತಜ್ಜಿ) ಅವರನ್ನು great grandfather, great grandmother ಎಂದು ಇಂಗ್ಲೀಷರ ಭಾಷೆಯಲ್ಲಿ ಗುರುತಿಸಲಾಗುತ್ತದೆ.
ಸೋದರ ಸೊಸೆ, ಸಹೋದರ ಅಥವಾ ಸಹೋದರಿ ಮಗಳು Niece. ಸೋದರಳಿಯ, ಸಹೋದರ ಅಥವಾ ಸಹೋದರಿಯ ಮಗನನ್ನು Nephew ಎನ್ನಲಾಗುತ್ತದೆ.
ಗೊಂದಲದ ಸಂಬಂಧಗಳು... ಸಂಬಂಧಗಳೆಂದರೆ ಇಷ್ಟಕ್ಕೆ ಮುಗಿಯುವುದಿಲ್ಲ. ಮನೆಯೊಳಗೆ ಅಥವಾ ಮನೆಯ ಹೊರಗೂ ಹತ್ತಾರು ಸಂಬಂಧಗಳ ಕವಲುಗಳು ನಮ್ಮ ಸುತ್ತ ಸುತ್ತಿಕೊಂಡಿರುತ್ತದೆ. ಕೆಲವರಿಗೆ ಅಪಥ್ಯವಾದರೆ, ಇನ್ನು ಕೆಲವರಿಗೆ ಆತ್ಮೀಯ.
ನಮ್ಮ ನೆಲದ ಸೊಗಡಿನ ಸಂಬಂಧಗಳಿಗೂ, ವಿದೇಶಗಳ ಸಂಬಂಧಗಳಿಗೂ ಅಜಗಜಾಂತರ ವ್ಯತ್ಯಾಸ. ಹಾಗಾಗಿ ಅದೇ ಪದಗಳನ್ನು ನಾವು ಬಳಸಿದರೆ ಗೊಂದಲವಷ್ಟೇ ನಮಗೆ ಕಾಣ ಸಿಗುತ್ತವೆ. ಅವುಗಳನ್ನು ಈ ಕೆಳಗಿನವುಗಳಲ್ಲಿ ಕಾಣಬಹುದು.
ಗಂಡನ ಅಕ್ಕ, ಅಣ್ಣನ ಹೆಂಡತಿ (ಅತ್ತಿಗೆ) sister in law. ತಮ್ಮನ ಹೆಂಡತಿ, ಗಂಡನ ತಂಗಿ, ಹೆಂಡತಿಯ ತಂಗಿಯೂ (ನಾದಿನಿ) sister in law. ಅಕ್ಕನ ಗಂಡ, ಗಂಡನ ಅಣ್ಣ, ಹೆಂಡತಿಯ ಅಣ್ಣ (ಭಾವ) brother in law. ತಂಗಿಯ ಗಂಡ, ಗಂಡನ ತಮ್ಮ, ಹೆಂಡತಿಯ ತಮ್ಮನೂ (ಮೈದುನ, ಷಡ್ದಕ) ಅದೇ.
ಇದೆಲ್ಲಕ್ಕಿಂತಲೂ ಹೆಚ್ಚು ಗೊಂದಲ ತಂದಿರುವುದು cousin ಎಂಬುದು. ಮಾವನ ಮಗಳೂ ಕಸಿನ್, ದೊಡ್ಡಪ್ಪನ ಮಗಳೂ ಕಸಿನ್. ನಮ್ಮ ಸಂಸ್ಕೃತಿಯ ಪ್ರಕಾರ ಇವೆರಡೂ ಸಂಬಂಧಗಳು ಭಿನ್ನ. ಮಾವನ ಮಗಳನ್ನು ಮದುವೆಯಾಗಬಹುದಾದ ಸಂಬಂಧ ಎಂದು ಗುರುತಿಸಬಹುದಾದರೆ, ದೊಡ್ಡಪ್ಪನ ಅಥವಾ ಚಿಕ್ಕಪ್ಪನ ಮಗಳನ್ನು ಸಹೋದರಿ ಎಂದೇ ಹೇಳಲಾಗುತ್ತದೆ.
ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮನ, ಸೋದರ ಮಾವ- ಸೋದರತ್ತೆಯ ಮಗ-ಮಗಳು ಅಥವಾ ರಕ್ತಸಂಬಂಧಿಗಳಿಗೂ ಆಂಗ್ಲ ಭಾಷೆಯಲ್ಲಿ ಕಸಿನ್ ಎಂಬ ಸಂಬೋಧನೆಯನ್ನು ಬಳಸಬಹುದಾಗಿದೆ.
ಈ Aunt ಎಂಬ ಆಂಗ್ಲ ಪದ ಬಹುಪಯೋಗಿ. ಬಹುತೇಕ ಎಲ್ಲರ ಬಾಯಿಯಲ್ಲೂ ನಲಿದಾಡುವ ಪದದಲ್ಲಿ ಇದರದ್ದು ಮೊದಲ ಸ್ಥಾನ. ವಾಸ್ತವದಲ್ಲಿ ತಾಯಿಯ ಸಹೋದರನ ಪತ್ನಿ - ತಂದೆಯ ಸಹೋದರಿ (ಸೋದರತ್ತೆ), ತಂದೆಯ ತಮ್ಮನ ಹೆಂಡತಿ - ತಾಯಿಯ ತಂಗಿ (ಚಿಕ್ಕಮ್ಮ), ತಂದೆಯ ಅಣ್ಣನ ಹೆಂಡತಿ - ತಾಯಿಯ ಅಕ್ಕನನ್ನು (ದೊಡ್ಡಮ್ಮ) ಆಂಟಿ ಎಂದು ಇಂಗ್ಲೀಷಿನಲ್ಲಿ ಕರೆಯಲಾಗುತ್ತದೆ. ಎಲ್ಲಾ ಸಂಬಂಧಗಳನ್ನೂ ಒಂದೇ ಕುಣಿಕೆಯಲ್ಲಿ ಎಸೆದು ಬಿಡುವ ಅಸ್ತ್ರವಿದು.
ನಂತರದ ಸ್ಥಾನದಲ್ಲಿರುವ Uncle ಕೂಡ ಇದೇ ಬೆಟ್ಟದಿಂದ ಅಗೆದದ್ದು. ತಾಯಿಯ ಸಹೋದರ (ಸೋದರ ಮಾವ), ತಂದೆಯ ಸಹೋದರಿಯ ಗಂಡ (ಮಾವ), ಚಿಕ್ಕಮ್ಮ ಅಥವಾ ತಾಯಿಯ ತಂಗಿಯ ಗಂಡ, ತಂದೆಯ ತಮ್ಮ (ಚಿಕ್ಕಪ್ಪ), ತಂದೆಯ ಅಣ್ಣ, ದೊಡ್ಡಮ್ಮ ಅಥವಾ ತಾಯಿಯ ಅಕ್ಕನ ಗಂಡನನ್ನು (ದೊಡ್ಡಪ್ಪ) ಅಂಕಲ್ ಎಂದೇ ಕರೆಯಲಾಗುತ್ತದೆ.
ಮಲ ಸಂಬಂಧಗಳು: ತಂದೆ ಅಥವಾ ತಾಯಿ ಎರಡನೇ ಅಥವಾ ಹೆಚ್ಚಿನ ಮದುವೆ ಮಾಡಿಕೊಂಡಾಗ ಇಂತಹ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಈ ರೀತಿಯ ಸಂಬಂಧದಿಂದಾದ ತಂದೆಯನ್ನು ಮಲತಂದೆ step father ಎಂದೂ, ಮಲತಾಯಿಯನ್ನು step mother ಎಂದೂ ಸಂಬೋಧಿಸಲಾಗುತ್ತದೆ.
ಅದೇ ರೀತಿ ಮಲಮಗನನ್ನು step son (ಸವತಿಯ ಮಗ), ಮಲಮಗಳನ್ನು step daughter ಎಂದರೆ, ಮಲಸಹೋದರಿಯನ್ನು half-sister, ಮಲಸಹೋದರನನ್ನು half-brother ಎನ್ನುತ್ತೇವೆ.
ಸವತಿ ಅಥವಾ ಗಂಡನ ಇನ್ನೊಂದು ಪತ್ನಿಯನ್ನು co-wife ಎಂದರೆ, ಪತ್ನಿಯ ಇನ್ನೊಬ್ಬ ಗಂಡನನ್ನು co-husband ಎಂದು ಕರೆಯಲಾಗುತ್ತದೆ.
ನಾವು ಗುರುತಿಸುವ ಸಂಬಂಧಗಳ ರೀತಿಗೂ, ಆಂಗ್ಲ ಭಾಷೆಯಲ್ಲಿರುವ ಸಂಬಂಧಗಳ ವ್ಯಾಖ್ಯಾನಕ್ಕೂ ಇಷ್ಟೊಂದು ಅಂತರಗಳು ಮತ್ತು ಗೊಂದಲಗಳಿರುವಾಗ ನಮ್ಮ ಭಾಷೆಯೇ ನಮಗೆ ಚೆಂದ, ಏನಂತೀರಿ?