ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ವೂಲ್ಫ್ಸ್‌ಬರ್ಗ್‌ನಲ್ಲಿ ವೋಕ್ಸ್‌ವ್ಯಾಗನ್ ಅದ್ಭುತ ಲೋಕ (Wolfsburg | Volkswagen | Car Manufacturing Unit | Webdunia in Germany)
ಅವಿನಾಶ್ ಬಿ. ಅಸಾಧಾರಣ ಯುವ ಪತ್ರಕರ್ತರ ಅರಿವು ಕಾರ್ಯಕ್ರಮದಡಿಯಲ್ಲಿ ಯೂರೋಪಿನ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ವೋಕ್ಸ್‌ವ್ಯಾಗನ್ (ಜರ್ಮನ್ ಭಾಷೆಯಲ್ಲಿ ಉಚ್ಚರಿಸುವುದು ಫೋಕ್ಸ್‌ವ್ಯಾಗನ್) ಆಹ್ವಾನದಡಿಯಲ್ಲಿ ವೆಬ್‌ದುನಿಯಾ ಪ್ರತಿನಿಧಿಯಾಗಿ ಅಲ್ಲಿಗೆ ದೊಡ್ಡ ಕನಸುಗಳ ಮೂಟೆಯೊಂದಿಗೆ ತೆರಳಿದ 19 ಮಂದಿ ಪತ್ರಕರ್ತರ ದಂಡಿಗೆ ಜರ್ಮನಿಯ ವೂಲ್ಫ್ಸ್‌ಬರ್ಗ್ ತಲುಪಿದಾಗ ಅಚ್ಚರಿಯೇ ಕಾದಿತ್ತು.
ಆ.31, 2010ರ ಅಪರಾಹ್ನ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿಳಿದು, ಹ್ಯಾನೋವರ್‌ಗೆ ಇನ್ನೊಂದು ವಿಮಾನದಲ್ಲಿ ಹೋಗಿ, ಅಲ್ಲಿಂದ ಐಷಾರಾಮಿ ಬಸ್ ಮೂಲಕ ಕಾರುಗಳ ತವರೂರು, ವೋಕ್ಸ್‌ವ್ಯಾಗನ್‌ನ ಮುಖ್ಯಾಲಯವಿರುವ ವೂಲ್ಫ್ಸ್‌ಬರ್ಗ್‌ನ (Wolfsburg) ಟ್ರಿಪ್ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ವಾಸ್ತವ್ಯವಿತ್ತು.
ಹೋಟೆಲಿನಿಂದ ಹೊರಗೆ ಕಣ್ಣು ಹಾಯಿಸಿದರೆ ಸಾಕು, ಕಾರ್ ಕಾರ್ ಕಾರ್... ಎಲ್ನೋಡಿ ಕಾರ್ ಅನ್ನೋ ಹಾಡು ನೆನಪಾಗಿಬಿಟ್ಟಿತು. ಸುಂದರ, ವಿಸ್ತಾರವಾದ, ಸ್ವಚ್ಛ ರಸ್ತೆಗಳು, ಶಿಸ್ತುಬದ್ಧ ಬಲಬದಿಯ ಚಾಲನೆ, ಅಪರೂಪಕ್ಕೊಮ್ಮೆ ಕಣ್ಣಿಗೆ ಕಾಣಿಸುವ ಮೋಟಾರು ಬೈಕುಗಳು, ಅದು ಬಿಟ್ಟರೆ ಬಸ್ಸು, ಲಾರಿ, ಟ್ರಾಮ್ ಮತ್ತು ಸೈಕಲ್‌ಗಳು. ಇವಿಷ್ಟು ಅಲ್ಲಿನ ಸಂಚಾರ ಲೋಕ. ಅರ್ಥವಾಯಿತೇ? ನಮ್ಮಲ್ಲಿರುವಷ್ಟು ಮೋಟಾರು ಬೈಕುಗಳ ಕ್ರೇಜ್ ಅಲ್ಲಿ ಯಾರಿಗೂ ಇರಲಿಲ್ಲ. ಬದಲಾಗಿ ಆರೋಗ್ಯಕ್ಕೆ, ಪರಿಸರಕ್ಕೆ ಪೂರಕವಾಗಿರುವ ಸೈಕಲ್ ತುಳಿಯುವ ಕಾಲುಗಳೇ ಹೆಚ್ಚಾಗಿದ್ದವು. ಸೈಕಲ್ ಸವಾರರಿಗೆಂದೇ ಪ್ರತ್ಯೇಕ ರಸ್ತೆ ಅಲ್ಲಿದೆ.
WD
ಉಳಿದುಕೊಂಡಿದ್ದ ಹೋಟೆಲ್ ಪಕ್ಕದಲ್ಲೇ ಕಾಣಿಸುತ್ತಿದೆ ಆರು ಚದರ ಕಿಲೋಮೀಟರ್ ವಿಶಾಲ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ವೋಕ್ಸ್‌ವ್ಯಾಗನ್ ಫ್ಯಾಕ್ಟರಿ. ಕೃತಕವಾಗಿ ನಿರ್ಮಿಸಲಾದ ಮಿತ್ತಲ್‌ಲ್ಯಾಂಡ್ ಕಾಲುವೆಯ ತೀರದಲ್ಲಿದೆ ಇದು. Volkswagen ಅಂದರೆ ಜರ್ಮನ್ ಭಾಷೆಯಲ್ಲಿ 'ಜನಸಾಮಾನ್ಯರ ವಾಹನ' ಎಂದು ಅರ್ಥ. ಇದಂತೂ ಪಕ್ಕಾ ನಿಜವಾಗಿಬಿಟ್ಟಿದೆ ಅಂತನ್ನಿಸಿತು ಜರ್ಮನಿಯಾದ್ಯಂತ. ಯಾಕೆಂದರೆ ಅಲ್ಲಿ ಕಂಡುಬರುವ ಶೇ.80ರಷ್ಟು ಕಾರುಗಳು ಕೂಡ ವೋಕ್ಸ್‌ವ್ಯಾಗನ್ ಕಂಪನಿಯವು!
ಕಾರಿನ ಫ್ಯಾಕ್ಟರಿ ಪ್ರದೇಶವೇ ಒಂದೂವರೆ ಚದರ ಕಿಮೀ ವ್ಯಾಪ್ತಿ ಹೊಂದಿದೆ. ಇಲ್ಲಿಗೆ ಸಂಪರ್ಕಿಸುವ ರಸ್ತೆಗಳ ಜಾಲವು ಕಾರಿನ ಉತ್ಪಾದನಾ ಘಟಕ, ಗೋದಾಮುಗಳು, ಆಡಳಿತಾಂಗ ಕಟ್ಟಡ ಮತ್ತು ಸುಮಾರು 75 ಕಿಮೀ ದೂರದಲ್ಲಿರುವ ಕಾರು ವಿತರಣಾ ಘಟಕಗಳನ್ನೂ ಸಂಪರ್ಕಿಸುತ್ತಿವೆ. ಫ್ಯಾಕ್ಟರಿಗೆ ಹೊಂದಿಕೊಂಡಂತೆಯೇ ಇದೆ ಅಲ್ಲಿನ ವೂಲ್ಫ್ಸ್‌ಬರ್ಗ್ ರೈಲು ನಿಲ್ದಾಣ. ಕಾರಿನ ಬಿಡಿಭಾಗಗಳಿಗೆ ಕಚ್ಚಾವಸ್ತು ಪೂರೈಕೆ ಮತ್ತು ತಯಾರಾದ ಬಿಡಿಭಾಗಗಳ ಸಾಗಾಟ, ಕಾರುಗಳ ಸಾಗಾಟ ಎಲ್ಲವೂ ಈ ರೈಲು ನಿಲ್ದಾಣದ ಸರಕು ವಿಭಾಗದ ಮೂಲಕವೇ ನಡೆಯುತ್ತದೆ.
ಈ ಫ್ಯಾಕ್ಟರಿಯು ವಿಶ್ವದ ಅತಿದೊಡ್ಡ ಕಾರು ತಯಾರಿಕಾ ಸಂಕೀರ್ಣ. ಹಿಂದೆಯೇ ಹೇಳಿದಂತೆ, ಇಲ್ಲಿ ಒಂದು ದಿನದಲ್ಲಿ 3400ಕ್ಕೂ ವಾಹನಗಳನ್ನು ತಯಾರಿಸಬಹುದು! ವೋಕ್ಸ್‌ವ್ಯಾಗನ್‌ನ ಜರ್ಮನಿಯ ಈ ಸ್ಥಾವರದಲ್ಲಿ ತಯಾರಿಸಲಾಗುವ ಕಾರುಗಳ ಮಾಡೆಲ್‌ಗಳೆಂದರೆ ದಿ ಗಾಲ್ಫ್, ಗಾಲ್ಫ್ ಪ್ಲಸ್, ಟೌರಾನ್ ಮತ್ತು ಟಿಗುವಾನ್. ಇಲ್ಲಿ ಕಾರುಗಳು ಮಾತ್ರವಲ್ಲದೆ, ಬಿಡಿಭಾಗಗಳನ್ನೂ ಉತ್ಪಾದಿಸಿ, ವಿಶ್ವದ ಇತರೆಡೆಗಳಲ್ಲಿರುವ ಕಾರು ತಯಾರಿಕಾ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ.
ಇದು ಯಂತ್ರಮಾನವರ ಬೀಡು....
WD
ಇಲ್ಲಿಗೆ ಒಳಹೊಕ್ಕು ನೋಡಿದರೆ, ಎಲ್ಲವೂ ಯಂತ್ರಮಾನವರಿಂದಲೇ ನಡೆಯುವ ಕೆಲಸ ಕಾರ್ಯಗಳು! ಬಿಡಿ ಭಾಗಗಳು ಕೂಡ ಅಚ್ಚಿನ ಮೂಲಕ ತಯಾರಾಗುತ್ತಲೇ ಇರುತ್ತವೆ, ಇವುಗಳನ್ನು ಒಂದೊಂದು ಕಾರು ಯುನಿಟ್‌ಗೆ ಜೋಡಿಸುವುದು ರೋಬೋಗಳೇ. ಅಂದರೆ ಯಂತ್ರ ಮಾನವರು. ಸ್ಕ್ರೂ ಜಡಿಯುವುದು ಸೇರಿದಂತೆ ಕಾರಿನ ಶೇ.80 ಭಾಗಗಳನ್ನು ಜೋಡಿಸಿ ಸಿದ್ಧಪಡಿಸುವುದು ಈ ಸ್ವಯಂಚಾಲಿತ ಯಂತ್ರಗಳು. ಇಷ್ಟಿದ್ದರೂ, ಈ ಕಾರು ಸ್ಥಾವರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಸಂಖ್ಯೆ 48 ಸಾವಿರ ಎಂಬುದು ಕೇಳಿ ಅಚ್ಚರಿಯಾಯಿತು! ಇಡೀ ಕಾರು ತಯಾರಿಕಾ ಕಾರ್ಖಾನೆಯೊಳಗೆ ಪುಟ್ಟ ಬಂಡಿಯಲ್ಲಿ ನಮ್ಮನ್ನು ಕರೆದೊಯ್ದು, ಪ್ರತಿಯೊಂದು ರೋಬೋಟ್ ಹೇಗೆ ಬಿಡಿಭಾಗಗಳನ್ನು ಜೋಡಿಸುತ್ತದೆ ಎಂಬುದನ್ನು ತೋರಿಸಲಾಯಿತು.
ಇಲ್ಲಿ ವೆಚ್ಚಕ್ಕಿಂತಲೂ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆಯಿದೆ. ಹೀಗಾಗಿ ಪ್ರತಿಯೊಂದು ಹಂತದಲ್ಲಿಯೂ ಗುಣಮಟ್ಟದ ಪರೀಕ್ಷೆ ನಡೆಯುತ್ತಿರುತ್ತದೆ - ಕೆಲವು ಸ್ವಯಂಚಾಲಿತವಾದರೆ, ಇನ್ನು ಕೆಲವು ತಪಾಸಣೆಗಳು ಅಲ್ಲಿನ ಉದ್ಯೋಗಿಗಳಿಂದಲೇ ನಡೆಯುತ್ತದೆ. ಕೊನೆಗೆ ಅಂತಿಮ ಸ್ಪರ್ಶಕ್ಕೂ ಮಾನವನೇ ಬೇಕು. ಅದಕ್ಕಿಂತ ಮೊದಲಿನದೆಲ್ಲ ಯಂತ್ರಮಾನವನಿಗೇ ಬಿಟ್ಟದ್ದು! ಅದರಲ್ಲಿಯೂ ವಿಶೇಷವೇನು ಗೊತ್ತೇ? ಒಂದಿಷ್ಟು ಕಡ ಕಡ ಕಟ್ಟ ಕಡ ಎಂಬಂತಹಾ ಸದ್ದು ಬಿಟ್ಟರೆ, ಒಂದಿನಿತೂ ಧೂಳಿಲ್ಲ ಆ ವಿಶಾಲ ಕಾರ್ಖಾನೆಯೊಳಗೆ!
ಈ ಕಾರು ಸ್ಥಾವರದ ಮುಖ್ಯಸ್ಥರು ಡಾ.ಸೀಗ್‌ಫ್ರೈಡ್ ಫೈಬಿಗ್. 1978ರಲ್ಲಿ ವೂಲ್ಫ್ಸ್‌ಬರ್ಗ್‌ನಲ್ಲಿ ತಾಂತ್ರಿಕ ಸಹಾಯಕನಾಗಿ ಸೇರಿಕೊಂಡಿದ್ದ ಇವರು, ತಮ್ಮ ಕಾರ್ಯ ಸಾಮರ್ಥ್ಯದಿಂದ ಮೇಲೇರುತ್ತಾ, ಇದೀಗ ಸ್ಥಾವರದ ಮುಖ್ಯಸ್ಥನ ಸ್ಥಾನ ಅಲಂಕರಿಸಿದ್ದಾರೆ.
ಹಾಗಿದ್ದರೆ ಇಷ್ಟು ದೊಡ್ಡ ಕಾರು ತಯಾರಿಕಾ ಕಾರ್ಖಾನೆಗೆ ವಿದ್ಯುತ್ ಎಲ್ಲಿಂದ? ಅದಕ್ಕೂ ವೋಕ್ಸ್‌ವ್ಯಾಗನ್ ತನ್ನದೇ ಆದ ಪರಿಹಾರ ರೂಪಿಸಿದೆ. ವೂಲ್ಫ್ಸ್‌ಬರ್ಗ್‌ನಲ್ಲಿಯೇ ಎರಡು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿರುವ ವೋಕ್ಸ್‌ವ್ಯಾಗನ್, ತನ್ನ ಕಾರ್ಯಚಟುವಟಿಕೆಗಳಿಗೆ ಮಾತ್ರವಲ್ಲದೆ, ಇಡೀ ವೂಲ್ಫ್ಸ್‌ಬರ್ಗ್ ಪಟ್ಟಣಕ್ಕೂ ವಿದ್ಯುತ್ ಪೂರೈಸುತ್ತಿದೆ! ಇಲ್ಲಿರುವ ಎರಡು ವಿದ್ಯುತ್ ಸ್ಥಾವರಗಳು 442 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಈ ಇಡೀ ಪಟ್ಟಣವೇ ನಡೆಯುತ್ತಿರುವುದು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಿಂದ. ಅಂದರೆ, ವೋಕ್ಸ್‌ವ್ಯಾಗನ್ ಮತ್ತು ವೂಲ್ಫ್ಸ್‌ಬರ್ಗ್ ನಗರ ಪರಸ್ಪರ ತಾದಾತ್ಮ್ಯ ಸಂಬಂಧ ಹೊಂದಿವೆ. ವೋಕ್ಸ್‌ವ್ಯಾಗನ್ ಈ ಊರಿನಲ್ಲಿ ವಿದ್ಯುತ್, ಹೋಟೆಲ್, ಆರೋಗ್ಯ, ಪ್ರವಾಸೋದ್ಯಮ, ಸಂಚಾರ ಮುಂತಾದ ಸೌಲಭ್ಯಗಳನ್ನು ಒದಗಿಸುತ್ತಿದೆ. ತತ್ಪರಿಣಾಮವಾಗಿ ವೂಲ್ಫ್ಸ್‌ಬರ್ಗ್ ಇಂದು ವಾಣಿಜ್ಯ, ಪ್ರವಾಸೋದ್ಯಮ ನಗರಿಯಾಗಿ, ಜರ್ಮನಿಯ ಆಕರ್ಷಣೀಯ ತಾಣಗಳಲ್ಲೊಂದಾಗಿ ಮಾರ್ಪಟ್ಟಿದೆ.
1937ರ ಮೇ 28ರಂದು ಬರ್ಲಿನ್‌ನಲ್ಲಿ ಆರಂಭವಾದ ವೋಕ್ಸ್‌ವ್ಯಾಗನ್ ಕಂಪನಿಯು 1938-39ರಲ್ಲಿ ವೂಲ್ಫ್ಸ್‌ಬರ್ಗ್‌ನಲ್ಲಿ ಫ್ಯಾಕ್ಟರಿ ಆರಂಭಿಸಿತು. ದ್ವಿತೀಯ ವಿಶ್ವಯುದ್ಧದ ಅವಧಿಯಲ್ಲಿ ನಾಜಿಗಳ ಒತ್ತಡಕ್ಕೆ ನಲುಗಿ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಾಗಿ ಮಾರ್ಪಟ್ಟ ಇದು, ಜರ್ಮನಿ ಶರಣಾಗತಿ ಬಳಿಕ ಯುದ್ಧ ಮುಗಿದು ಬ್ರಿಟಿಷ್ ಆಡಳಿತಾವಧಿಯಲ್ಲಿ ಮತ್ತೆ ಚಿಗಿತುಕೊಂಡಿತ್ತು. 1945ರಲ್ಲಿ ಕಾರು ಉತ್ಪಾದನೆ ಆರಂಭಿಸಿ, ಬೀಟಲ್ ಕಾರುಗಳಿಗೆ ಪ್ರಖ್ಯಾತಿ ಪಡೆಯಿತು. ಜರ್ಮನಿಯ ಪುನರ್ನಿರ್ಮಾಣದಲ್ಲಿ ವೋಕ್ಸ್‌ವ್ಯಾಗನ್ ಕೊಡುಗೆಯೂ ಅಪಾರ. ಕಾರುಗಳ ರಫ್ತಿನಿಂದಾಗಿ ಜರ್ಮನಿಗೆ ಹಣಕಾಸಿನ ನೆರವು ದೊರೆಯಿತು. 1976ರಲ್ಲಿ ಗಾಲ್ಫ್ ಕಾರುಗಳ ಉತ್ಪಾದನೆ ಆರಂಭವಾಯಿತು. ಇದು ಡೀಸೆಲ್ ಎಂಜಿನ್ ಉಳ್ಳ ಮೊತ್ತ ಮೊದಲ ಮಧ್ಯಮವರ್ಗದ ಪುಟ್ಟ ಪ್ರಯಾಣಿಕ-ಕಾರು. ವೂಲ್ಫ್ಸ್‌ಬರ್ಗ್‌ನಲ್ಲಿ ಮುಖ್ಯಾಲಯ ಹೊಂದಿರುವ ವೋಕ್ಸ್‌ವ್ಯಾಗನ್, ಚೀನಾ, ಅಮೆರಿಕ, ಜಪಾನ್, ಭಾರತ ಮುಂತಾದ 21 ದೇಶಗಳಲ್ಲಿ 61 ಆದ ಕಾರು ತಯಾರಿಕೆ/ಜೋಡಣಾ ಸ್ಥಾವರಗಳನ್ನು ಹೊಂದಿದೆ.
(ವೀಡಿಯೋದಲ್ಲಿ, ಯಂತ್ರಮಾನವರು ಯಾವ ರೀತಿ ಸ್ವಯಂಚಾಲಿತವಾಗಿ ಬಿಡಿಭಾಗಗಳನ್ನು ಜೋಡಿಸುತ್ತಿದ್ದಾರೆ ಎಂಬುದನ್ನು ಕಾಣಬಹುದು. ಇದು ಗಾಲ್ಫ್ 6ನೇ ಆವೃತ್ತಿ ಕಾರಿನ ತಯಾರಿಕೆಯ ವಿಶೇಷ ವೀಡಿಯೊ: ಇಲ್ಲಿ ಕ್ಲಿಕ್ ಮಾಡಿ.)