ಅಟ್ಲಾಂಟಿಕ್ ಸಾಗರದಲ್ಲಿ ಪತ್ತೆಯಾದ ಅವಶೇಷವು ಅಪಘಾತಕ್ಕೀಡಾದ ಏರ್‌ಫ್ರಾನ್ಸ್ ವಿಮಾನಕ್ಕೆ ಸೇರಿದ್ದಲ್ಲವೆಂದು ಬ್ರೆಜಿಲ್‌ನ ಉನ್ನತ ವಾಯುಪಡೆ ಅಧಿಕಾರಿ ತಿಳಿಸಿದ್ದಾರೆ. ವಿಮಾನದಿಂದ ಯಾವುದೇ ವಸ್ತು ಪತ್ತೆಯಾಗಿಲ್ಲ ಎಂದು ಹೇಳಿರುವ ಬ್ರಿಗೇಡಿಯರ್ ರಾಮನ್ ಕಾರ್ಡೊಸಾ ತೈಲದ ಪದರವು ಬಹುಶಃ ಹಡಗಿನದ್ದಾಗಿರಬಹುದು ಎಂದು ತಿಳಿಸಿದರು.
ಕಳೆದ ಎರಡು ದಿನಗಳಿಂದ ವಿಮಾನದ ಕಪ್ಪುಪೆಟ್ಟಿಗೆ ಪತ್ತೆಹಚ್ಚಲು ಅವಿರತ ಪ್ರಯತ್ನ ನಡೆಸಲಾಗುತ್ತಿದೆ. ಹಾರಾಟದ ಅಂಕಿಅಂಶ ಧ್ವನಿಮುದ್ರಿಕೆಗಳನ್ನು ಶೋಧಿಸುವ ಮುಂಚೆ ವಿಮಾನದ ಅವಶೇಷಗಳ ಪತ್ತೆಗೆ ಆದ್ಯತೆ ನೀಡುವುದಾಗಿ ಫ್ರೆಂಚ್ ಮಿಲಿಟರಿ ತಿಳಿಸಿದೆ. ಅವಶೇಷಗಳು ಹರಡಿ ಅಥವಾ ಮುಳುಗಿ ಕಣ್ಮರೆಯಾಗುವ ಮುಂಚೆ ಅವುಗಳನ್ನು ಪತ್ತೆಮಾಡುವುದಕ್ಕೆ ಸಮಯ ಮೀರಿಹೋಗುತ್ತಿದೆ.
ಧ್ವನಿಮುದ್ರಿಕೆಗಳು ಆಳವಾದ ನೀರಿನಲ್ಲಿ ಮುಳುಗಿರಬಹುದೆಂದು ಹೇಳಲಾಗಿದ್ದು, ಅವುಗಳು ಸಿಗದೇ ಇರಬಹುದು.ನಾವು ನೌಕೆಯೊಂದರ ಜತೆ ಹೆಲಿಕಾಪ್ಟರ್ ನೆರವಿನಿಂದ ಅವಶೇಷಗಳನ್ನು ತೆಗೆದಿದ್ದು ಅವುಗಳ ಪರಿಶೀಲನೆ ನಡೆಸಿದಾಗ ಅವು ವಿಮಾನಕ್ಕೆ ಸೇರಿದ್ದಲ್ಲವೆಂದು ತಿಳಿದಿದ್ದಾಗಿ ಹೇಳಿದ್ದಾರೆ. ಅವು ಮರದ ಹಲಗೆಗಳಾಗಿದ್ದು ಹಡಗಿನಲ್ಲಿ ಬಳಕೆಯಾಗುತ್ತಿವೆ. ಅಪಘಾತಗೊಂಡ ವಿಮಾನದಲ್ಲಿ ಮರದ ಹಲಗೆಗಳು ಇರಲಿಲ್ಲವೆಂದು ಬ್ರಿಗೇಡಿಯರ್ ರಾಮನ್ ಕಾರ್ಡೊಸಾ ತಿಳಿಸಿದ್ದಾರೆ. |