ಭಯೋತ್ಪಾದನೆ ಕೃತ್ಯಗಳಿಗೆ ಪಾಕಿಸ್ತಾನ ನೆಲವನ್ನು ಬಳಸಲು ಅವಕಾಶ ಕೊಡುವುದಿಲ್ಲ ಎಂದು ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಭರವಸೆ ನೀಡಿದ್ದು, ಮುಂಬೈ ದಾಳಿಕೋರರನ್ನು ನ್ಯಾಯದ ಕಟಕಟೆಗೆ ತರಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಅದೇ ಉಸಿರಿನಲ್ಲಿ ಉಭಯ ರಾಷ್ಟ್ರಗಳ ನಡುವೆ ಜಂಟಿ ಮಾತುಕತೆ ಆರಂಭಿಸುವಂತೆ ಜರ್ದಾರಿ ಭಾರತದ ಪ್ರಧಾನಮಂತ್ರಿ ಅವರಿಗೆ ಒತ್ತಾಯಿಸಿದ್ದಾರೆ.
ಯಾವುದೇ ರಾಷ್ಟ್ರದ ವಿರುದ್ಧ ಭಯೋತ್ಪಾದನೆಗೆ ಪಾಕಿಸ್ತಾನ ನೆಲವನ್ನು ಬಳಸುವುದಿಲ್ಲ ಎಂದು ಹೇಳಿದ ಅವರು, ನಾವು ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತಿದ್ದು, ವಿಶ್ವವು ಎಚ್ಚೆತ್ತು ನಾವು ಮಾಡಿದ ವಿಪುಲ ತ್ಯಾಗಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕೆಂದು ಜರ್ದಾರಿ ನುಡಿದರು.ನಾವು ಭಯೋತ್ಪಾದನೆಯ ಕೆಟ್ಟ ಬಲಿಪಶುಗಳಾಗಿದ್ದು, ಉಗ್ರಗಾಮಿಗಳ ವಿರುದ್ಧ ಹೋರಾಟಕ್ಕೆ ನಮ್ಮ ಸೇನಾಪಡೆಗಳು ಸತತವಾಗಿ ಕಾರ್ಯಾಚರಣೆ ಆರಂಭಿಸಿವೆಯೆಂದು ಜರ್ದಾರಿ ಹೇಳಿದರು.
ಉಭಯ ರಾಷ್ಟ್ರಗಳು ಮಾತುಕತೆ ಆರಂಭಿಸುವ ಮೂಲಕ ಅನುಕೂಲ ಪಡೆಯಬಹುದು, ಆದಷ್ಟು ಬೇಗ ಮಾತುಕತೆ ಆರಂಭಿಸುವುದು ವಿವೇಕದ ಕ್ರಮವಾಗಿದ್ದು ಪರಸ್ಪರ ಹಿತಾಸಕ್ತಿಯಿಂದ ಕೂಡಿದೆಯೆಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹ್ಮದ್ ಖುರೇಷಿ ವರದಿಗಾರರಿಗೆ ತಿಳಿಸಿದರು. |