ಮಾನವ ಕಳ್ಳಸಾಗಣೆಗೆ ಭಾರತವು ಮೂಲ, ಸ್ಥಳ ಮತ್ತು ರಹದಾರಿಯಾಗಿದ್ದು ಅದರ ನಿವಾರಣೆಗೆ ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದು ಅಮೆರಿಕ ಆರೋಪಿಸಿದೆ. ಭಾರತವನ್ನು ಮಾನವಕಳ್ಳಸಾಗಣೆಗೆ ಸಂಬಂಧಿಸಿದಂತೆ ಎರಡನೇ ಹಂತದ ನಿಗಾ ಪಟ್ಟಿಯಲ್ಲಿ ಅಮೆರಿಕವು ಇರಿಸಿದೆ.
ಬಲವಂತದ ದುಡಿಮೆ ಮತ್ತು ಲೈಂಗಿಕ ವ್ಯಾಪಾರದ ಶೋಷಣೆ ಉದ್ದೇಶದಿಂದ ಭಾರತವು ಪುರುಷರನ್ನು, ಮಹಿಳೆಯರನ್ನು ಮತ್ತು ಮಕ್ಕಳನ್ನು ಕಳ್ಳಸಾಗಣೆ ಮಾಡುವ ಮಾರ್ಗ, ಮೂಲ ಮತ್ತು ಸ್ಥಳವಾಗಿದೆಯೆಂದು ತಿಳಿಸಿರುವ ಮಾನವಕಳ್ಳಸಾಗಣೆ 2009ರ ವರದಿಯನ್ನು ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಬಿಡುಗಡೆ ಮಾಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮಧ್ಯಮ ದರ್ಜೆಯ ನಗರಗಳು ಮತ್ತು ದೊಡ್ಡ ನಗರಗಳ ಉಪನಗರಗಳಿಗೆ ಲೈಂಗಿಕ ಉದ್ದೇಶಕ್ಕಾಗಿ ಮಹಿಳೆಯರ ಕಳ್ಳಸಾಗಣೆ ಹೆಚ್ಚಿದೆಯೆಂದು ವರದಿ ತಿಳಿಸಿದ್ದು, ಲೈಂಗಿಕ ಶೋಷಣೆ ಸಲುವಾಗಿ ನೇಪಾಳ ಮತ್ತು ಬಾಂಗ್ಲಾದೇಶದ ಮಹಿಳೆಯರು ಮತ್ತು ಯುವತಿಯರಿಗೆ ಭಾರತ ಸ್ಥಳವಾಗಿದೆಯೆಂದು ವರದಿ ಹೇಳಿದೆ.
ಮಧ್ಯಪ್ರಾಚ್ಯ, ಯುರೋಪ್ ಮತ್ತು ಅಮೆರಿಕಕ್ಕೆ ಪ್ರತಿ ವರ್ಷ ಮನೆಕೆಲಸಕ್ಕೆ ಮತ್ತು ಕಡಿಮೆ ಕೌಶಲ್ಯದ ಕಾರ್ಮಿಕರ ಕೆಲಸಕ್ಕೆ ಸಾವಿರಾರು ಭಾರತೀಯರು ಸ್ವಇಚ್ಛೆಯಿಂದ ತೆರಳುತ್ತಿದ್ದು ಅವರು ಕಾರ್ಮಿಕ ಕಳ್ಳಸಾಗಣೆಯ ಬಲಿಪಶುವಾಗಿದ್ದಾರೆಂದು ವರದಿ ತಿಳಿಸಿದೆ. |