ಮಡ್ಗಾಂವ್ ಸ್ಫೋಟದ ಸಂಬಂಧ ಕಳೆದ ವಾರ ತನಿಖೆಗೊಳಗಾಗಿದ್ದ ಸನಾತನ ಸಂಸ್ಥೆಗೆ ರಾಜ್ಯ ಸಾರಿಗೆ ಸಚಿವ ರಾಮಕೃಷ್ಣ ದೀಪಾವಳಿ ಶುಭಾಶಯ ಪತ್ರ ಕಳುಹಿಸುವ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಅವರ ಪತ್ನಿ ಹಿಂದೂ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು ಎಂಬ ಕುರಿತು ಇತ್ತೀಚೆಗಷ್ಟೇ ಗೃಹ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಕಳೆದ ವಾರವಷ್ಟೇ ಸನಾತನ ಸಂಸ್ಥೆಯ ಜತೆ ಸಂಬಂಧ ಹೊಂದಿದ್ದ ಇಬ್ಬರು ಆರೋಪಿಗಳು ಸ್ಫೋಟದಲ್ಲಿ ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದರು. ಸಂಬಂಧಪಟ್ಟ ಸಂಸ್ಥೆಗೆ ದೀಪಾವಳಿ ಶುಭಾಶಯ ಪತ್ರವನ್ನು ಸಚಿವರು ಕಳುಹಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಚಿವ ರಾಮಕೃಷ್ಣ ಆಲಿಯಾಸ್ ಸುದಿನ್ ಧವಳೀಕರ್ ಕಳುಹಿಸಿರುವ ದೀಪಾವಳಿ ಶುಭಾಶಯ ಪತ್ರದ ಮೊದಲ ಪುಟದಲ್ಲಿ ಬಲಗೈಯಲ್ಲಿ ಸುದರ್ಶನ ಚಕ್ರ ಹಿಡಿದಿರುವ ಶ್ರೀ ಕೃಷ್ಣನ ಚಿತ್ರವಿದೆ. ಈ ದೃಶ್ಯದಲ್ಲಿ ಇಬ್ಬರು ವ್ಯಕ್ತಿಗಳು ರಕ್ತದ ಮಡುವಿನಲ್ಲಿ ಸತ್ತು ಬಿದ್ದಿರುವ ಚಿತ್ರಣವಿದೆ. ಓರ್ವ ಖಾದಿ ವಸ್ತ್ರಧಾರಿ ರಾಜಕಾರಣಿ ಸೇರಿದಂತೆ ಇತರರು ಓಡಿ ಹೋಗುತ್ತಿದ್ದರೆ, ಮೂವರು ವ್ಯಕ್ತಿಗಳು ಕೃಷ್ಣನನ್ನು ಪ್ರಾರ್ಥಿಸುತ್ತಿರುವ ದೃಶ್ಯವನ್ನು ಇದರಲ್ಲಿ ರೂಪಿಸಲಾಗಿದೆ.
ಒಳಗಿನ ಪುಟವೊಂದರಲ್ಲಿ ಸನಾತನ ಸಂಸ್ಥೆಯ ಸಂಪರ್ಕ ವಿವರಗಳನ್ನು ಹಾಗೂ ಸಂಸ್ಥೆಯ ಇತರ ವಿವರಗಳನ್ನು ನೀಡಲಾಗಿದೆ. ಮತ್ತೊಂದು ಪುಟದಲ್ಲಿ ಸಚಿವ ಮತ್ತು ಅವರ ಪತ್ನಿ ಜ್ಯೋತಿ ಧವಳೀಕರ್‌ರವರ ಹೆಸರುಗಳು ಮತ್ತು ಸಹಿಗಳ ಜೊತೆಗೆ ದೀಪಾವಳಿ ಶುಭಾಶಯಗಳನ್ನು ಮುದ್ರಿಸಲಾಗಿದೆ.
ಧವಳೀಕರ್ ಸನಾತನ ಸಂಸ್ಥೆಯ ಜೊತೆ ಹೊಂದಿರುವ ಸಂಬಂಧವು ಇದೀಗ ರಾಜ್ಯದಲ್ಲಿ ತೀವ್ರ ಚರ್ಚೆಗೊಳಗಾಗುತ್ತಿದೆ. ಅಲ್ಲದೆ ಸಚಿವರ ಪತ್ನಿ ಸಂಘಟನೆಯ ಜತೆ ಹೊಂದಿರುವ ಸಂಬಂಧಗಳನ್ನು ತನಿಖೆ ನಡೆಸಲಾಗುತ್ತದೆ ಎಂದು ಕೆಲ ದಿನಗಳ ಹಿಂದಷ್ಟೇ ಗೃಹ ಸಚಿವ ರವಿ ನಾಯ್ಕ್ ಹೇಳಿರುವುದು ಕೂಡ ಇದಕ್ಕೆ ಪುಷ್ಠಿ ನೀಡಿದೆ.
ಜ್ಯೋತಿ ಧವಳೀಕರ್ ಸನಾತನ ಸಂಸ್ಥೆಯ ಒಂದು ಭಾಗವಾಗಿದ್ದಾರೆ ಎಂಬುದು ನಮಗೆ ಗೊತ್ತು. ಅವರು ಅಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ನಮಗಿನ್ನೂ ಸ್ಪಷ್ಟವಿಲ್ಲ. ಸಂಘಟನೆ ಜತೆ ಸಂಬಂಧ ಹೊಂದಿರುವ ಪ್ರತಿಯೊಬ್ಬರನ್ನೂ ವಿಚಾರಣೆಗೊಳಪಡಿಸಲಾಗುತ್ತದೆ. ಸ್ಫೋಟ ತನಿಖೆ ಸಂದರ್ಭದಲ್ಲಿ ಯಾವುದೇ ರಾಜಕೀಯ ಒತ್ತಡಗಳನ್ನು ನಾವು ಸಹಿಸುವುದಿಲ್ಲ ಎಂದು ನಾಯ್ಕ್ ತಿಳಿಸಿದ್ದರು.
ಸನಾತನ ಸಂಸ್ಥೆಗೆ ಸಿಟ್ ದಾಳಿ... ಹಿಂದೂ ಬಲಪಂಥೀಯ ಸಂಘಟನೆ ಮಡ್ಗಾಂವ್ ಸ್ಫೋಟದಲ್ಲಿ ಭಾಗವಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದ ಪೊಲೀಸರು ದಾಳಿಯನ್ನು ಮುಂದುವರಿಸಿದ್ದು, ಪೂರಕ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ವಿಶೇಷ ತನಿಖಾ ದಳ (ಸಿಟ್) ಕಾರ್ಯೋನ್ಮುಖವಾಗಿದೆ.
ಗುರುವಾರ ಸನಾತನ ಸಂಸ್ಥೆಯ ಪೋಂಡಾದಲ್ಲಿನ ಆಶ್ರಮಕ್ಕೆ ಸಿಟ್ ಅಧಿಕಾರಿಗಳು ದಾಳಿ ನಡೆಸಿ, ಕಂಪ್ಯೂಟರ್ ಸೇರಿದಂತೆ ಹಲವು ಅಮೂಲಾಗ್ರ ಮಾಹಿತಿಗಳನ್ನು ಪಡೆದಿದ್ದಾರೆ.
ಎಸ್ಪಿ ಓಂ ಪ್ರಕಾಶ್ ಕುರ್ತಾರ್ಕರ್ ನೇತೃತ್ವದ ಸಿಟ್ ತಂಡವು ಬೆಳಿಗ್ಗೆ 10.30ಕ್ಕೆ ಆಶ್ರಮಕ್ಕೆ ಆಗಮಿಸಿತ್ತು. ಸಾಫ್ಟ್‌ವೇರ್ ತಜ್ಞರನ್ನು ಜತೆಗೆ ಕರೆದುಕೊಂಡು ಬಂದಿದ್ದ ತಂಡವು ಕೂಲಂಕಷವಾಗಿ ತನಿಖೆ ನಡೆಸಿತು. ಇದು ಸುಮಾರು ರಾತ್ರಿಯವರೆಗೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ಅದೇ ಹೊತ್ತಿಗೆ ಸಿಟ್ ನಡೆಸುತ್ತಿರುವ ತನಿಖೆಯನ್ನು ಸನಾತನ ಸಂಸ್ಥೆ ಚಿತ್ರೀಕರಿಸಿಕೊಂಡಿದೆ. ಅದರ ಕೆಲವು ಸದಸ್ಯರು ಫೋಟೋ ಮತ್ತು ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಆದರೆ ಸ್ವಲ್ಪ ಹೊತ್ತಿನ ಬಳಿಕ ಇದನ್ನು ಸಿಟ್ ಆಕ್ಷೇಪಿಸಿದ ಬಳಿಕ ಸ್ಥಗಿತಗೊಳಿಸಲಾಯಿತು ಎಂದು ಮೂಲಗಳು ಹೇಳಿವೆ.