14 ಬುಡಕಟ್ಟು ಮಹಿಳೆಯರನ್ನು ಪಶ್ಚಿಮಬಂಗಾಳ ಕೋರ್ಟ್ ಬಿಡುಗಡೆ ಮಾಡಿದ್ದಕ್ಕೆ ಪ್ರತಿಯಾಗಿ ಅಪಹರಣಕ್ಕೊಳಗಾದ ಪೊಲೀಸ್ ಅಧಿಕಾರಿ ಅತೀಂದ್ರ ನಾಥ್ ದತ್ತಾರನ್ನು ನಕ್ಸಲರು ಬಂಧಮುಕ್ತಿಗೊಳಿಸಿದ್ದಾರೆಂದು ವರದಿಯಾಗಿದೆ. ಅತೀಂದ್ರ ನಾಥ್ ಬಿಡುಗಡೆ ಮಾಡಬೇಕಿದ್ದರೆ 14 ಬುಡಕಟ್ಟು ಮಹಿಳೆಯರನ್ನು ಬಿಡುಗಡೆ ಮಾಡಬೇಕೆಂದು ನಕ್ಸಲರು ಷರತ್ತು ವಿಧಿಸಿದ್ದರು.
14 ಬುಡಕಟ್ಟು ಮಹಿಳೆಯರನ್ನು ಬಿಡುಗಡೆ ಮಾಡಿದ್ದಕ್ಕೆ ಪ್ರತಿಯಾಗಿ ಪೊಲೀಸ್ ಅಧಿಕಾರಿ ಅತೀಂದ್ರ ನಾಥ್ ದತ್ತಾ ಅವರನ್ನು ನಕ್ಸಲರು ಬಂಧಮುಕ್ತಿಗೊಳಿಸಿದರೆಂದು ವರದಿಗಳು ತಿಳಿಸಿವೆ. ಮೂಲಗಳ ಪ್ರಕಾರ, ಲಾಲ್‌ಗಢ ಪ್ರದೇಶದಲ್ಲಿ ನಕ್ಸಲೀಯರ ಜತೆ ನಿಕಟ ಸಂಪರ್ಕ ಹೊಂದಿದ್ದರೆಂಬ ಆರೋಪದ ಮೇಲೆ ಪೊಲೀಸರು ಬುಡಕಟ್ಟು ಮಹಿಳೆಯರನ್ನು ಬಂಧಿಸಿದ್ದರು. ಆದರೆ ನಕ್ಸಲರ ಷರತ್ತಿನ ಹಿನ್ನೆಲೆಯಲ್ಲಿ ಪಶ್ಚಿಮ ಮಿಡ್ನಾಪುರ ಜಿಲ್ಲಾ ಕೋರ್ಟ್ 14 ಮಹಿಳೆಯರನ್ನು ಬಿಡುಗಡೆ ಮಾಡಿದೆ.
ದತ್ತಾ ಅವರನ್ನು ಉತ್ತಮ ಸ್ಥಿತಿಯಲ್ಲೇ ನಾವು ಬಿಡುಗಡೆ ಮಾಡಿ ಅವರ ಕಾರಿನಲ್ಲೇ ವಾಪಸು ಕಳಿಸುವುದಾಗಿ ಮಾವೋವಾದಿ ನಾಯಕ ಕಿಶನ್‌ಜಿ ಅಲಿಯಾಸ್ ಕೋಟೇಶ್ವರ ರಾವ್ ಇದಕ್ಕೆ ಮುಂಚೆ ತಿಳಿಸಿದ್ದ. ದತ್ತಾ ಕುಟುಂಬಕ್ಕೆ ಮತ್ತು ಜನತೆಗೆ ನೀಡಿದ್ದ ಮಾತನ್ನು ತಾನು ಉಳಿಸಿಕೊಂಡಿದ್ದಾಗಿ ಕಿಶನ್‌ಜಿ ಹೇಳಿದ್ದಾನೆ.
ಎಡಪಂಥೀಯ ನಕ್ಸಲೀಯರು ಸಾಂಕ್ರೈಲ್ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಅಪಹರಿಸಿದ್ದ ದತ್ತ ಅವರನ್ನು ಹತ್ಯೆ ಮಾಡುವುದಾಗಿ ಕಿಶನ್‌ಜಿ ಈ ಮುಂಚೆ ಬೆದರಿಕೆ ಹಾಕಿದ್ದ. ನಮ್ಮ ಬೇಡಿಕೆ ಈಡೇರದಿದ್ದರೆ ಅಪಹೃತ ಪೊಲೀಸ್ ಅಧಿಕಾರಿ ಜೀವಕ್ಕೆ ಅಪಾಯವಾದರೆ ತಾವು ಹೊಣೆಯಲ್ಲವೆಂದು ಕಿಶನ್‌ಜಿ ಮಾಧ್ಯಮಕ್ಕೆ ತಿಳಿಸಿದ್ದನು.