ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟವು ಮುನ್ನಡೆ ಸಾಧಿಸಿರುವ ಮಧ್ಯೆ, ಶಿವಸೇನೆ-ಬಿಜೆಪಿ ಮೈತ್ರಿಕೂಟವು ತನ್ನ ಸೋಲನ್ನು ಒಪ್ಪಿಕೊಂಡಿದೆ. ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಎನ್‌ಸಿಪಿ ಕೂಟವು ಸ್ಪಷ್ಟ ಮುನ್ನಡೆ ಸಾಧಿಸಿದ ಪ್ರವೃತ್ತಿಗಳ ಆಧಾರದ ಮೇಲೆ ಪಕ್ಷವು ಸೋಲನ್ನು ಒಪ್ಪಿಕೊಂಡಿದೆಯೆಂದು ಬಿಜೆಪಿ ನಾಯಕ ಗೋಪಿನಾಥ ಮುಂಡೆ ಟಿವಿ ಚಾನೆಲ್‌ವೊಂದಕ್ಕೆ ತಿಳಿಸಿದರು.
ರಾಜ್ಯದಲ್ಲಿ ಪಕ್ಷದ ಸೋಲಿಗೆ ಕಾರಣಗಳನ್ನು ವಿಶ್ಲೇಷಿಸಿದ ಅವರು, ಮಹಾರಾಷ್ಟ್ರ ನವನಿರ್ಮಾಣ್ ಸೇನಾದ ಕಾರಣದಿಂದಾಗಿಯೇ ತಮ್ಮ ಪಕ್ಷ ಮುಂಬೈನಲ್ಲಿ ಸೋಲನುಭವಿಸಿದ್ದಾಗಿ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಎನ್‌ಸಿಪಿ ಕೂಡ ರಾಜ್ಯದಲ್ಲಿ ಸ್ಪಷ್ಟ ಬಹುಮತ ಸಾಧಿಸಲು ವಿಫಲವಾಗಿದೆಯೆಂದು ಅವರು ವಿವರಿಸಿದರು. ಕಳೆದ ಬಾರಿ ಕಾಂಗ್ರೆಸ್-ಎನ್‌ಸಿಪಿ ಕೂಟವು 130-132 ಸ್ಥಾನಗಳನ್ನು ಗಳಿಸಿದ್ದವು.
ಈ ಬಾರಿ ಅದರ ಅಂಕಿಅಂಶ ಕುಸಿದ ಹಿನ್ನೆಲೆಯಲ್ಲಿ ಯಾರೊಬ್ಬರೂ ನಿಖರ ಬಹುಮತ ಪಡೆದಿಲ್ಲವಾದ್ದರಿಂದ ಜನತೆ ಅವರ ಪರವಾಗಿ ತೀರ್ಪು ನೀಡಿಲ್ಲವೆಂದು ಮುಂಡೆ ವಿಶ್ಲೇಷಿಸಿದರು.
ಏತನ್ಮಧ್ಯೆ, ಚುನಾವಣೆಯಲ್ಲಿ ಎಂಎನ್‌ಎಸ್ ದೆಸೆಯಿಂದ ತಾವು ನೋವನುಭವಿಸಿದ್ದಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಕೂಡ ಹೇಳಿದೆ. ಎನ್‌ಸಿಪಿ ವಕ್ತಾರ ಸಚಿನ್ ಅಹೀರ್ ಈ ಕುರಿತು ತಿಳಿಸುತ್ತಾ, ಎನ್‌ಸಿಪಿ ಕೇವಲ 114 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರಿಂದ 288 ಸದಸ್ಯರ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಖಂಡಿತವಾಗಿ ಮೇಲುಗೈ ಪಡೆಯಿತೆಂದು ಅವರು ಪ್ರತಿಕ್ರಿಯಿಸಿದ್ದಾರೆ. ಯಾರು ಮುಖ್ಯಮಂತ್ರಿಯಾಗಲಿದ್ದಾರೆಂದು ಕಾಂಗ್ರೆಸ್ ನಿರ್ಧರಿಸಲಿದೆಯೆಂದು ಅವರು ಹೇಳಿದರು.