ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಡ್ಗಾಂವ್ ಸ್ಫೋಟ ಪ್ರಕರಣ ತನಿಖೆ ಸಿಬಿಐಗಿಲ್ಲ: ಮುಖ್ಯಮಂತ್ರಿ
(Goa | Margao blast | Sanathan sanstha | Digambar Kamath)
ಮಡ್ಗಾಂವ್ ಸ್ಫೋಟ ಪ್ರಕರಣ ತನಿಖೆ ಸಿಬಿಐಗಿಲ್ಲ: ಮುಖ್ಯಮಂತ್ರಿ
ಪಣಜಿ, ಗುರುವಾರ, 22 ಅಕ್ಟೋಬರ್ 2009( 10:39 IST )
ಮಡ್ಗಾಂವ್ ಸ್ಫೋಟ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಅಗತ್ಯವಿಲ್ಲ, ರಾಜ್ಯ ಪೊಲೀಸರೇ ನಿಭಾಯಿಸಲಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ದಿಗಂಬರ್ ಕಾಮತ್ ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಪ್ರಕರಣದ ಪ್ರಮುಖ ಆರೋಪಿ ಮಾಲ್ಗೊಂಡ ಪಾಟೀಲ್ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲು ವಿಫಲವಾದ ಪೊಲೀಸರು ಪರಿಹಾರ ನೀಡಬೇಕೆಂದು ಆತನ ತಂದೆ ನೊಟೀಸ್ ಜಾರಿ ಮಾಡಿದ್ದಾರೆ.
ಮಡ್ಗಾಂವ್ ಸ್ಫೋಟ ಕುರಿತು ಬುಧವಾರ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ನಿರಾಕರಿಸಲಾಗಿದೆ. ಈ ಗಂಭೀರ ಪ್ರಕರಣವನ್ನು ದಕ್ಷತೆಯಿಂದ ಗೋವಾ ಪೊಲೀಸರೇ ನಿಭಾಯಿಸಲಿದ್ದಾರೆ. ಅಗತ್ಯ ಬಿದ್ದರೆ ಅವರು ಮಹಾರಾಷ್ಟ್ರ ಪೊಲೀಸರ ಸಹಕಾರ ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಸ್ಫೋಟದ ಸಂದರ್ಭದಲ್ಲಿ ನಾನು ಹತ್ತಿರವೇ ಇದ್ದ ಕಾರಣ ಘಟನೆಯ ಸಂಪೂರ್ಣ ವಿವರಗಳನ್ನು ನಾನು ಸಭೆಯಲ್ಲಿ ಸಂಪುಟ ಸದಸ್ಯರಿಗೆ ತಿಳಿಸಿದ್ದೇನೆ. ಅವರ ಅಭಿಪ್ರಾಯದ ಪ್ರಕಾರ ಈ ಪ್ರಕರಣವನ್ನು ಗೋವಾ ಪೊಲೀಸರೇ ನಿಭಾಯಿಸಬಹುದಾಗಿದೆ ಎಂದರು.
ಈ ಸ್ಫೋಟದ ತನಿಖೆಗಾಗಿ ನಾವು ಈಗಾಗಲೇ ಪೊಲೀಸ್ ವರಿಷ್ಠಾಧಿಕಾರಿ ಒ.ಪಿ. ಕುರ್ತಾರ್ಕರ್ ನೇತೃತ್ವದ ತನಿಖಾ ತಂಡವೊಂದನ್ನು ರಚಿಸಿದ್ದೇವೆ. ಅವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದ್ದು, ಒಳ ಹೂರಣವನ್ನು ಅವರು ಬಯಲಿಗೆಳೆಯುವ ವಿಶ್ವಾಸ ನನ್ನಲ್ಲಿದೆ ಎಂದು ಕಾಮತ್ ಅಭಿಪ್ರಾಯಪಟ್ಟರು.
ಪೊಲೀಸರಿಗೆ ನೊಟೀಸ್... ಮಡ್ಗಾಂವ್ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಮಾಲ್ಗೊಂಡ ಪಾಟೀಲ್ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲು ವಿಫಲವಾಗಿರುವ ಪೊಲೀಸರಿಗೆ ಆತನ ತಂದೆ ಸಿದ್ಧನಗೊಂಡ ಪಾಟೀಲ್ ನೊಟೀಸ್ ಜಾರಿಗೊಳಿಸಿದ್ದಾರೆ.
ತಾನು ಶವವನ್ನು ಪಡೆಯಲು ಗೋವಾಕ್ಕೆ ಬಂದ ಮೇಲೆ ಪೊಲೀಸರು ನಿರಾಕರಿಸಿದ್ದರಿಂದಾಗಿ ಅಪಾರ ನಷ್ಟವಾಗಿದೆ. ಇದಕ್ಕಾಗಿ ರಾಜ್ಯ ಸರಕಾರವು ನನಗೆ 20,000 ರೂಪಾಯಿ ಪರಿಹಾರ ನೀಡಬೇಕು ಎಂದು ವಕೀಲ ವಿ.ಎಂ. ದೇಶಪಾಂಡೆ ಮೂಲಕ ಪಾಟೀಲ್ ಕಾನೂನು ನೊಟೀಸ್ ಕಳುಹಿಸಿದ್ದಾರೆ.
ಪಾಟೀಲ್ ಶವವನ್ನು ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸುವಂತೆ ಪೊಲೀಸರು ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿ ಹೇಳಿದ್ದರು. ಅದರಂತೆ ಪಾಟೀಲ್ ಕುಟುಂಬಿಕರು ಗೋವಾಕ್ಕೆ ಬಂದ ನಂತರ ಕೊನೆ ನಿಮಿಷದಲ್ಲಿ ಶವ ನೀಡಲು ನಿರಾಕರಿಸಲಾಯಿತು. ಮರಣೋತ್ತರ ಪರೀಕ್ಷೆ ಇನ್ನಷ್ಟೇ ನಡೆಸಬೇಕಾಗಿರುವುದರಿಂದ ಶವ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದರು ಎಂದು ವಕೀಲರು ವಿವರಣೆ ನೀಡಿದ್ದಾರೆ.
ಅಕ್ಟೋಬರ್ 16ರಂದು ಮಡ್ಗಾಂವ್‌ನಲ್ಲಿ ನಡೆದಿದ್ದ ಪ್ರಬಲ ಬಾಂಬ್ ಸ್ಫೋಟದಲ್ಲಿ ಮಾಲ್ಗೊಂಡ ಪಾಟೀಲ್ ಸಾವನ್ನಪ್ಪಿದ್ದ. ಈ ಪ್ರಕರಣದ ಪ್ರಮುಖ ಆರೋಪಿ ಈತ ಎಂದು ಹೇಳಲಾಗಿದೆ.
ಸ್ಫೋಟಕವನ್ನು ನಿಗದಿತ ಸ್ಥಳದಲ್ಲಿಡಲು ಸ್ಕೂಟರೊಂದರಲ್ಲಿ ತೆರಳುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡಿತ್ತು. ಇವನ ಜತೆಗಿದ್ದ ಮತ್ತೊಬ್ಬ ಆರೋಪಿ ಯೋಗೇಶ್ ನಾಯ್ಕ್ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.
ಘಟನೆಯಲ್ಲಿ ಹಿಂದೂ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆಯ ಕೈವಾಡವಿದೆ ಎಂದು ಆರಂಭದಲ್ಲಿ ಗೋವಾ ಪೊಲೀಸರು ಹೇಳಿದ್ದರಾದರೂ ನಂತರ ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದರು.
ನಾವು ಕೈವಾಡವಿದೆ ಎಂದು ಹೇಳಿಲ್ಲ, ಆರೋಪಿಗಳು ಸನಾತನ ಸಂಸ್ಥೆಯ ಜತೆ ಸಂಬಂಧ ಹೊಂದಿದ್ದರು ಎಂದಷ್ಟೇ ಹೇಳಿದ್ದೆವು. ಸಂಸ್ಥೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದರು.